ಬೆಳ್ತಂಗಡಿ: ಮರೋಡಿ ಗ್ರಾಮದಲ್ಲಿ ಶ್ರೀ ಗೆಜ್ಜೆಗಿರಿ ನೂತನ ಮೇಳದ (Gejjegiri) ಯಕ್ಷಗಾನ ಬಯಲಾಟಕ್ಕೆ ಹಾಕಿದ್ದ ಸಾಲು ಸಾಲು ಬ್ಯಾನರ್ ಹರಿದ ಪ್ರಕರಣವನ್ನು ಅಪ್ರಾಪ್ತ ಮೂವರು ಮಕ್ಕಳು ಮಾಡಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ . ಆದರೆ ಅಷ್ಟು ಎತ್ತರದ ಬ್ಯಾನರ್ ಅಪ್ರಾಪ್ತರು ಹರಿದಿರುವುದು ಅನುಮಾನಕ್ಕೆ ಕಾರಣವಾಗಿದೆ.
ಸ್ಥಳೀಯ ನಿವಾಸಿಗಳಾದ ಮೂವರು ಅಪ್ರಾಪ್ತ ಮಕ್ಕಳು ಆಟವಾಡುತ್ತ ಈ ಕೃತ್ಯ ನಡೆಸಿದ್ದು, ಈ ಬಗ್ಗೆ ಪೋಷಕರ ಸಹಿತ ಮಕ್ಕಳು ಮರೋಡಿಯ ಪೊಸರಡ್ಕ ಕ್ಷೇತ್ರಕ್ಕೆ ಬಂದು ತಪ್ಪು ಕಾಣಿಕೆಯನ್ನು ಸಲ್ಲಿಸಿ ತಪ್ಪೊಪ್ಪಿಕೊಂಡಿದ್ದಾರೆ. ಮಕ್ಕಳ ಹಿತದೃಷ್ಟಿಯಿಂದ ಸಮಿತಿಯವರು ಈ ಪ್ರಕರಣವನ್ನು ಕಾನೂನು ಹೋರಾಟಕ್ಕೆ ಇಳಿಯದೇ ದೈವದ ಮೇಲಿನ ನಂಬಿಕೆಯಂತೆ ಕೈಬಿಡುವುದೆಂದು ತೀರ್ಮಾನಿಸಿದ್ದಾರೆ.
ಬ್ಯಾನರ್ ಹರಿದ ಪ್ರಕರಣ ಜಿಲ್ಲೆಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಅದಲ್ಲದೇ ಸ್ಥಳೀಯರು ಹಾಗೂ ಯಕ್ಷ ಬಳಗ ಯಾರೇ ಕೃತ್ಯವನ್ನು ಎಸಗಿದ್ದರೂ 24 ಗಂಟೆಯೊಳಗಾಗಿ ಕ್ಷೇತ್ರಕ್ಕೆ ಬಂದು ತಪ್ಪುಕೊಳ್ಳಬೇಕೆಂದು ಸೂಚಿಸಲಾಗಿತ್ತು, ಆದರೆ ಅಪ್ರಾಪ್ತರು ತಿಳಿಯದೆ ಈ ಕೃತ್ಯವನ್ನು ಎಸಗಿದ್ದಾರೆ ಎಂದು ಹೆತ್ತವರು ಕ್ಷಮೆಯಾಚಿಸಿದ್ದಾರೆ.
ಅವರ ತಪ್ಪನ್ನು ಮನ್ನಿಸಬೇಕೆಂದು ವಿನಂತಿಸಿ ಮಕ್ಕಳು ಹಾಗೂ ಪೋಷಕರು ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ, ಪೊಸರಡ್ಕ ಶ್ರೀ ದೈವ ಕೊಡಮಣಿತ್ತಾಯ ಹಾಗೂ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಯಕ್ಷಗಾನ ಆಯೋಜಕರ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಪ್ರಾರ್ಥಿಸಲಾಯಿತು.
ಹತ್ತು – ಹದಿನೈದು ಅಡಿ ಎತ್ತರಕ್ಕೆ ಸಾಲು ಸಾಲು ಬ್ಯಾನರ್ ಹಾಕಲಾಗಿತ್ತು. ರಾತ್ರಿ ಹತ್ತರವರೆಗೆ ಈ ಬ್ಯಾನರ್ ಸರಿಯಾಗಿತ್ತು. ಬೆಳ್ಳಂಬೆಳಗ್ಗೆ ಡಿಪೋಗೆ ಹಾಲು ತರುವಾಗ ಬ್ಯಾನರ್ ಹರಿದಿರುವುದು ಕಂಡು ಬಂದಿದೆ. ಇದನ್ನು ಮೂವರು ಅಪ್ರಾಪ್ತ ಮಕ್ಕಳು ಆ ರಾತ್ರಿ ಹರಿದಿರುವ ಪ್ರಕರಣ ಪ್ರಶ್ನಾರ್ಥಕವಾಗಿದೆ. ಹೋರಾಟ ತೀರ್ಮಾನಿಸಿದ್ದ ಸಮಿತಿಯವರು ಮಕ್ಕಳ ಹಿತದೃಷ್ಟಿಯಿಂದ ದೈವ ಕ್ಷೇತ್ರದಲ್ಲಿ ತಪ್ಪೊಪ್ಪಿಕೊಂಡ ಕಾರಣ ಇದರ ಬಗ್ಗೆ ಚರ್ಚೆಗೆ ಅವಕಾಶ ನೀಡದೆ ಪ್ರಬುದ್ಧತೆ ಮೆರೆದಿದ್ದಾರೆ.