ಬೆಳ್ತಂಗಡಿ: ಬೆಳ್ತಂಗಡಿಯ ಮರೋಡಿ ಗ್ರಾಮದಲ್ಲಿ ನೂತನ ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮ ಯಕ್ಷಗಾನ ಬಯಲಾಟಕ್ಕೆ ( Gejjegiri) ಹಾಕಲಾಗಿದ್ದ ಬ್ಯಾನರ್ ಗಳನ್ನು ಕಿಡಿಗೇಡಿಗಳು ಹರಿದಿರುವುದಾಗಿ ಯಕ್ಷಗಾನ ಆಯೋಜಕರು ಆರೋಪಿಸಿದ್ದಾರೆ. ಈ ಮೂಲಕ ಬಿಲ್ಲವರ ಪವಿತ್ರ ಕ್ಷೇತ್ರ ಗೆಜ್ಜೆಗಿರಿಯ ಯಕ್ಷಗಾನ ಮೇಳದ ಮೊದಲ ಪ್ರದರ್ಶನಕ್ಕೆ ಕಿಡಿಗೇಡಿಗಳ ವಿಕೃತಿಗೆ ಗೆಜ್ಜೆಗಿರಿ ಭಕ್ತರಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಮರೋಡಿ ಗ್ರಾಮದ ಪೊಸರಡ್ಕ ಗರಡಿ ವಠಾರದಲ್ಲಿ ಬುಧವಾರದಂದು ನಡೆದಿದ್ದ ಬಯಲಾಟಕ್ಕೆ ಶುಭ ಕೋರಲು ಅನೇಕ ಬ್ಯಾನರ್ ಗಳನ್ನು ಅಳವಡಿಸಲಾಗಿತ್ತು. ಆದರೆ ಏಕ ಏಕಿ ನಿನ್ನೆ ರಾತ್ರಿ ಬ್ಯಾನರ್ ನ್ನು ಹರಿದು ಕಿತ್ತೆಸೆದ ಘಟನೆ ವರದಿಯಾಗಿದೆ.

ಪೊಸರಡ್ಕ ವಠಾರದಲ್ಲೂ ಗರಡಿಯಿದ್ದು ಗೆಜ್ಜೆಗಿರಿ ಕ್ಷೇತ್ರ ಮಹಾತ್ಮ ಯಕ್ಷಗಾನವೂ ಸಾವಿರಾರು ಭಕ್ತರ ಸಮ್ಮುಖದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತ್ತು. ಆದರೆ ಇದನ್ನು ಸಹಿಸಿದ ಕಿಡಿಗೇಡಿಗಳ ಗುಂಪು ಬ್ಯಾನರ್ ತೆರವುಗೊಳಿಸುವ ಮುನ್ನವೇ ಅದನ್ನು ಹರಿದು ಕ್ಷೇತ್ರಕ್ಕೆ ಅಪಮಾನವೆಸಗಿದ್ದಾರೆ. ಈ ವಿಕೃತಿ ಮೆರೆದವರು ಯಾರೆ ಇದ್ದರು ತಪ್ಪೋಪ್ಪಿಕೊಳ್ಳದೆ ಹೋದರೆ ದೈವಗಳ ಮೊರೆ ಹೋಗುವುದಾಗಿ ಯಕ್ಷಗಾನ ಆಯೋಜಕರು ತಿಳಿಸಿದ್ದಾರೆ.
ಘಟನೆಗೆ ಕಾರಣಿಕರ್ತರಾದ ಆರೋಪಿಗಳನ್ನು 24 ಗಂಟೆಯಲ್ಲಿ ಬಂಧನ ಆಗದಿದ್ದಾರೆ ಬೆಳ್ತಂಗಡಿಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಯಕ್ಷಗಾನ ಆಯೋಜಕರು ತಿಳಿಸಿದ್ದಾರೆ.
ಯಕ್ಷ ಬಳಗ ಬೆಳ್ತಂಗಡಿ ಗೌರವಾಧ್ಯಕ್ಷ ರಕ್ಷಿತ್ ಶಿವರಾಂ ನೇತೃತ್ವದಲ್ಲಿ ಗೆಜ್ಜೆಗಿರಿ ಕ್ಷೇತ್ರದ ನೂತನ ಯಕ್ಷಗಾನ ಪ್ರಸಂಗದ ಮೊದಲ 5 ಯಕ್ಷಗಾನ ಪ್ರದರ್ಶನ ಬೆಳ್ತಂಗಡಿಯ 5 ವಲಯಗಳಲ್ಲಿ ನಡೆಸಲಾಗಿತ್ತು. ಇದರಲ್ಲಿ ಮರೋಡಿ ವಲಯದಲ್ಲೂ ಯಕ್ಷಗಾನ ಪ್ರದರ್ಶನವಾಗಿತ್ತು. 5 ವಲಯದಲ್ಲೂ ಗೆಜ್ಜೆಗಿರಿ ಪ್ರಸಂಗಕ್ಕೆ ಉತ್ತಮ ಜನಸ್ತೋಮ ಸೇರಿತ್ತು.