ಕೊಚ್ಚಿ : ಡಿ 3 :’ವರಾಹ ರೂಪಂ’ ಹಾಡಿನ ಕೃತಿಸ್ವಾಮ್ಯ ವಿವಾದಕ್ಕೆ ಸಂಬಂಧಿಸಿದಂತೆ ಕಾಂತಾರ ಚಿತ್ರ ದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮಂಸ್ ನ ವಿರುದ್ಧ ಮಾತೃಭೂಮಿ ಪ್ರಿಂಟಿಂಗ್ ಅಂಡ್ ಪಬ್ಲಿಷಿಂಗ್ ಲಿಮಿಟೆಡ್ (ಎಂಪಿಪಿಸಿಎಲ್) ಹೂಡಿದ್ದ ದಾವೆಯನ್ನು ಕೇರಳ ನ್ಯಾಯಾಲಯ ಶನಿವಾರ ಹಿಂತಿರುಗಿಸಿದೆ.
ದೂರುದಾರ ಎಂಪಿಪಿಸಿಎಲ್ ನ ನೋಂದಾಯಿತ ಕಚೇರಿ ಕೋಯಿಕ್ಕೋಡ್ ನಲ್ಲಿರುವುದರಿಂದ ಕೋಝಿಕೋಡ್ ಜಿಲ್ಲಾ ನ್ಯಾಯಾಲಯವೇ ಪ್ರಕರಣದ ವಿಚಾರಣೆ ನಡೆಸುವ ಅಧಿಕಾರ ವ್ಯಾಪ್ತಿಯನ್ನು ಹೊಂದಿದೆ ಎಂಬ ಆಧಾರದ ಮೇಲೆ ಪಾಲಕ್ಕಾಡ್ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ದಾವೆಯನ್ನು ಹಿಂದಿರುಗಿಸಿತು ಎಂದು ಬಾರ್ ಅಂಡ್ ಬೆಂಚ್ ವೆಬ್ ಸೈಟ್ ವರದಿ ಮಾಡಿದೆ.
ಇದರೊಂದಿಗೆ, “ವರಾಹರೂಪಂ” ಹಾಡಿನ ಬಳಕೆಗೆ ಸಂಬಂಧಿಸಿದಂತೆ ಕಾಂತಾರ ಚಲನಚಿತ್ರ ತಯಾರಕರ ವಿರುದ್ಧವಿದ್ದ ಎರಡು ತಡೆಯಾಜ್ಞೆಗಳು ತೆರವುಗೊಂಡಿದೆ, ಹೀಗಾಗಿ ಪ್ರಸ್ತುತ ಯಾವುದೇ ಪ್ಲಾಟ್ ಫಾರ್ಮ್ ನಲ್ಲಿ ಈ ಹಾಡಿನ ಪ್ರದರ್ಶನಕ್ಕೆ ನಿರ್ಬಂಧವಿರುವುದಿಲ್ಲ .ಹೀಗಾಗಿ, ಚಲನಚಿತ್ರ ತಯಾರಕರು ಸದ್ಯಕ್ಕೆ ಹಾಡನ್ನು ಬಳಸಲು ಮುಕ್ತರಾಗಿದ್ದಾರೆ.
ಪ್ರಕರಣ ಹಾಗೂ ನ್ಯಾಯಾಲಯದಲ್ಲಿ ದಾವೆ ಸಾಗಿದ ಹಾದಿ
ಸೆಪ್ಟೆಂಬರ್ 30, 2022 ರಂದು ಬಿಡುಗಡೆಯಾದ ರಿಷಬ್ ಶೆಟ್ಟಿ ಅವರ ಬ್ಲಾಕ್ ಬ್ಲಾಸ್ಟರ್ ಕನ್ನಡ ಚಲನಚಿತ್ರ ಕಾಂತಾರ ಮತ್ತು ಅದರ ಸಂಗೀತ ಸಂಯೋಜಕ ಬಿ ಅಜನೀಶ್ ಲೋಕನಾಥ್ ಅವರು ‘ವರಾಹ ರೂಪಂ’ ಹಾಡಿನ ಕುರಿತಾಗಿ ಕೃತಿಸ್ವಾಮ್ಯ ಉಲ್ಲಂಘನೆಯ ಆರೋಪಕ್ಕೆ ತುತ್ತಾದರು. ಕೇರಳದ ಥೈಕ್ಕುಡಂ ಬ್ರಿಡ್ಜ್ ಎಂಬ ನಿರ್ಮಾಣ ತಯಾರಿಸಿದ ನವರಸಮ್” ಹಾಡನ್ನು ‘ವರಾಹ ರೂಪಂ’ ಹಾಡಿನ ನಕಲಿ ಎನ್ನುವ ಆರೋಪ ವ್ಯಕ್ತವಾಗಿತ್ತು.
ಹೀಗಾಗಿ ಹಾಡಿನ ಹಕ್ಕು ಸ್ವಾಮ್ಯ ಕುರಿತಾಗಿ ಕೋಯಿಕ್ಕೋಡ್ ಜಿಲ್ಲಾ ನ್ಯಾಯಾಲಯದಲ್ಲಿ ಥೈಕ್ಕುಡಂ ಬ್ರಿಡ್ಜ್ ಸಂಸ್ಥೆ ದಾವೆ ಹೂಡಿದ್ದರೇ, ಪಾಲಕ್ಕಾಡ್ ನ್ಯಾಯಾಲಯದಲ್ಲಿ , “ನವರಸಮ್” ಕೃತಿಸ್ವಾಮ್ಯ ಹೊಂದಿರುವ ಎಂಪಿಪಿಸಿಎಲ್ ವ್ಯಾಜ್ಯ ಹೂಡಿತ್ತು. ವಿಚಾರಣೆ ಕೈಗೆತ್ತಿಕೊಂಡ ಎರಡು ನ್ಯಾಯಾಲಯಗಳು ಮುಂದಿನ ತೀರ್ಪಿನವರೆಗೆ ಹಾಡನ್ನು ಬಳಸಿಕೊಳ್ಳದಂತೆ ಕಾಂತಾರ ಚಿತ್ರದ ನಿರ್ಮಾಪಕರ ವಿರುದ್ಧ ಪ್ರತ್ಯೇಕ ತಡೆಯಾಜ್ಞೆ ಆದೇಶಗಳನ್ನು ಹೊರಡಿಸಿದ್ದವು.
ಕೋಯಿಕ್ಕೋಡ್ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಹೊಂಬಾಳೆ ಫೀಲಂಸ್ ಹೈಕೋರ್ಟು ಮೋರೆ ಹೋಗಿತ್ತು. ಸಿವಿಲ್ ಪ್ರೊಸಿಜರ್ ಕೋಡ್ ಸಂಹಿತೆಯಡಿ ಜಿಲ್ಲಾ ನ್ಯಾಯಾಲಯಗಳು ನೀಡಿದ ತಡೆಯಾಜ್ಞೆ ಆದೇಶದ ವಿರುದ್ಧ ತೀರ್ಪು ನೀಡಲು ನಿರಾಕರಿಸಿ ಹೈಕೋರ್ಟು ಹೊಂಬಾಳೆ ಫಿಲಂಸ್ ನ ಅರ್ಜಿಯನ್ನು ತಿರಸ್ಕರಿಸಿತ್ತು.
ಮತ್ತೆ ಕೋಯಿಕ್ಕೋಡ್ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿದಿದ್ದು, ಥೈಕ್ಕುಡಮ್ ಬ್ರಿಡ್ಜ್ ನ ದಾವೆಯನ್ನು ನಿರ್ವಹಿಸಲು ನ್ಯಾಯಾಲಯದ ಪರಿಮಿತಿಯ ಸಮಸ್ಯೆಯನ್ನು ಉಲ್ಲೇಖಿಸಿ ಅರ್ಜಿಯನ್ನು ವಜಾಗೊಳಿಸಿತು. ಆದಾಗ್ಯೂ, ಡಿಸೆಂಬರ್ 1 ಗುರುವಾರ ದಂದು, ಕೇರಳ ಹೈಕೋರ್ಟ್ ಕೋಯಿಕ್ಕೋಡ್ ಜಿಲ್ಲಾ ನ್ಯಾಯಾಲಯದ ಈ ಆದೇಶಕ್ಕೆ ತಡೆ ನೀಡಿದೆ. ಆದಾಗ್ಯೂ, ಥೈಕ್ಕುಡಮ್ ಬ್ರಿಡ್ಜ್ ನ ಅರ್ಜಿಯನ್ನು ಹಿಂದಿರುಗಿಸಿದ ಮಾತ್ರಕ್ಕೆ, ಇದು “ವರಾಹರೂಪಂ” ಹಾಡಿನ ವಿರುದ್ಧದ ಹಿಂದಿನ ತಡೆಯಾಜ್ಞೆ ಆದೇಶವನ್ನು ಪುನರುಜ್ಜೀವನಗೊಳಿಸಲು ಕಾರಣವಾಗುವುದಿಲ್ಲ ಎಂದು ಕೇರಳ ಹೈಕೋರ್ಟ್ ಮರುದಿನ ಸ್ಪಷ್ಟಪಡಿಸಿತು.
ಇದಾದ ಬಳಿಕ ಪಾಲಕ್ಕಾಡ್ ನ್ಯಾಯಾಲಯವು ಸಹ ಅರ್ಜಿಯನ್ನು ಹಿಂದಿರುಗಿಸುವುದರೊಂದಿಗೆ, ತಯಾರಕರು ಈಗ ಚಲನಚಿತ್ರದಲ್ಲಿ ಹಾಡನ್ನು ಬಳಸಬಹುದು.
ಸಂತಸ ವ್ಯಕ್ತಪಡಿಸಿದ ರಿಷಬ್ ಶೆಟ್ಟಿ
ಇಂದು ಈ ಕುರಿತಾಗಿ ಟ್ವೀಟ್ ಮಾಡಿರುವ ಚಿತ್ರದ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ “ದೈವಾನು ದೈವಗಳ ಆಶೀರ್ವಾದ ಹಾಗು ಜನರ ಅಭಿಮಾನದಿಂದ ವರಾಹರೂಪಂ ಕೇಸ್ ಗೆದ್ದಿದ್ದೇವೆ. ಜನರ ಕೋರಿಕೆಯನ್ನು ಪರಿಗಣಿಸಿ ಅತಿ ಶೀಘ್ರದಲ್ಲಿ OTT platform ನಲ್ಲಿ ಹಾಡನ್ನು ಬದಲಾಯಿಸಲಿದ್ದೇವೆ . ಎಂದು ಹೇಳಿದ್ದರು.
ದೈವಾನು ದೈವಗಳ ಆಶೀರ್ವಾದ ಹಾಗು ಜನರ ಅಭಿಮಾನದಿಂದ ವರಾಹರೂಪಂ ಕೇಸ್ ಗೆದ್ದಿದ್ದೇವೆ. ಜನರ ಕೋರಿಕೆಯನ್ನು ಪರಿಗಣಿಸಿ ಅತಿ ಶೀಘ್ರದಲ್ಲಿ OTT platform ನಲ್ಲಿ ಹಾಡನ್ನು ಬದಲಾಯಿಸಲಿದ್ದೇವೆ . @VKiragandur@ChaluveG @AJANEESHB @Karthik1423 @hombalefilms @KantaraFilmhttps://t.co/STsNEyKmuT
— Rishab Shetty (@shetty_rishab) December 3, 2022
ಓಟಿಟಿಯಲ್ಲಿ ‘ಕಾಂತಾರ’ ಚಿತ್ರ ಬಿಡುಗಡೆಯಾದಾಗ ವರಾಹರೂಪಂ ಹಾಡಿಗೆ ಬೇರೆ ಟ್ಯೂನ್ ಬಳಸಲಾಗಿತ್ತು. ಆ ನಂತರ ತಡೆಯಾಜ್ಞೆ ತೆರವಾಗಿ, ಹಾಡನ್ನು ಪುನಃ ಬಳಸಿಕೊಳ್ಳುವುದಕ್ಕೆ ಅನುಮತಿ ಸಿಕ್ಕಿದೆ. ಅದರಂತೆ, ತತ್ಕ್ಷಣಕ್ಕೆ ಬರುವಂತೆ ಇಂದಿನಿಂದ ಚಿತ್ರಮಂದಿರ, ಓಟಿಟಿ, ಸೋಷಿಯಲ್ ಮೀಡಿಯಾ ಸೇರಿದಂತೆ ಎಲ್ಲ ವೇದಿಕೆಗಳಲ್ಲೂ ಮೂಲ ‘ವರಾಹ ರೂಪಂ’ ಹಾಡು ಪುನಃ ಸಿಗಲಿದೆ.