Elecrticity Price ಬೆಂಗಳೂರು : ಡಿ 3 : ಮುಂದಿನ ವರ್ಷ ನಡೆಯಲಿರುವ ವಿಧಾನ ಸಭಾ ಚುನಾವಣೆಗೂ ಮುಂಚೆ ಮತದಾರರನ್ನು ಸಂತೃಪ್ತಗೊಳಿಸಲು ಬಿಜೆಪಿ ಸರಕಾರ ಮಹತ್ವದ ಹೆಜ್ಜೆ ಇಡಲು ಚಿಂತನೆ ನಡೆಸಿದೆ . ಕಳೆದೊಂದು ವರ್ಷದಿಂದ ದೇಶದಲ್ಲಿ ನಡೆಯುತ್ತಿರುವ ಅಸೆಂಬ್ಲಿ ಚುನಾವಣೆಗಳಲ್ಲಿ ವಿದ್ಯುತ್ ದರವು ಒಂದು ಪ್ರಮುಖ ವಿಚಾರವಾಗಿರುವ ಹಿನ್ನಲೆಯಲ್ಲಿ ರಾಜ್ಯ ಸರಕಾರವು ಚುನಾವಣೆಗಿಂತ ಮುಂಚೆ ವಿದ್ಯುತ್ ದರ ಇಳಿಸಲು ಮುಂದಾಗಿದೆ ಎಂದು ತಿಳಿದು ಬಂದಿದೆ. ಪಂಜಾಬ್ ಹಾಗೂ ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿ ಸರಕಾರವು ಅಧಿಕಾರ ಪಡೆಯಲು ಉಚಿತ ವಿದ್ಯುತ್ ಕೊಡುಗೆಯು ಪ್ರಮುಖ ಕಾರಣಗಳಲ್ಲಿ ಒಂದಾಗಿತ್ತು. ಪ್ರಸ್ತುತ ನಡೆಯುತ್ತಿರುವ ಗುಜರಾತ್ ಚುನಾವಣೆಯಲ್ಲೂ ಎಲ್ಲ ಪಕ್ಷಗಳು ಉಚಿತ ವಿದ್ಯುತ್ ಅಥಾವ ದರ ಕಡಿತದ ವಿದ್ಯುತ್ ಅನ್ನು ತನ್ನ ಪ್ರಣಾಳಿಕೆಯ ಪ್ರಮುಖ ಭಾಗವಾಗಿಸಿದೆ.
ಕರ್ನಾಟಕದಲ್ಲಿ ಹೊಸ ವರ್ಷದ ಆರಂಭದಲ್ಲಿ ಬಳಕೆದಾರರ ಶುಲ್ಕವನ್ನು ಪ್ರತಿ ಯೂನಿಟ್ ಗೆ 70 ಪೈಸೆಯಿಂದ 2 ರೂವರೆಗೆ ಇಳಿಸುವತ್ತ ಇಂಧನ ಇಲಾಖೆ ಮನ ಮಾಡಿದೆ. ಹೀಗಾಗಿ ಗೃಹ ಬಳಕೆ ಸೇರಿದಂತೆ ಎಲ್ಲ ಬಗೆಯ ಗ್ರಾಹಕರಿಗೆ ವಿದ್ಯುತ್ ದರ ಕಡಿತಕ್ಕೆ ಚಿಂತನೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ದರ ಇಳಿಕೆ ಕೇವಲ ಗೃಹ ಬಳಕೆ ಗ್ರಾಹಕರಿಗೆ ಮಾತ್ರವಲ್ಲ, ಎಚ್‌ಟಿ, ಕೈಗಾರಿಕೆ, ವಾಣಿಜ್ಯ ಮತ್ತು ಎಲ್‌ಟಿ ಗ್ರಾಹಕರಿಗೂ ಅನ್ವಯವಾಗಲಿದೆ. ವಾಣಿಜ್ಯ ಬಳಕೆದಾರರಿಗೆ ವಿಧಿಸಿದ್ದ ಕ್ರಾಸ್ ಸಬ್ಸಿಡಿ ಗ್ರಾಹಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದರಿಂದ ಅವರು ಗ್ರಿಡ್ ತೊರೆಯುತ್ತಿದ್ದರು. ಹೀಗಾಗಿ ಎಚ್‌ಟಿ ಗ್ರಾಹಕರನ್ನು ಉಳಿಸಿಕೊಳ್ಳಲು ಕ್ರಾಸ್ ಸಬ್ಸಿಡಿ ಸಡಿಲಿಸಲು ಬೆಸ್ಕಾಂ ವ್ಯಾಪ್ತಿಯಲ್ಲಿ ಹೊಸ ಪ್ರಸ್ತಾಪ ಸಲ್ಲಿಸಿ, ಪ್ರತ್ಯೇಕ ಶುಲ್ಕ ಪದ್ಧತಿ ಪ್ರಸ್ತಾಪಿಸಲಾಗಿದೆ.
ಗ್ರಾಮೀಣ ವಿದ್ಯುತ್ ಬಳಕೆದಾರರಿಗೆ ರಿಯಾಯಿತಿ ನೀಡಲಾಗುವುದು. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಹಕರಿಗೆ ಬಳಕೆದಾರರ ಶುಲ್ಕದಲ್ಲಿ 25 ಪೈಸೆಯಷ್ಟು ರಿಯಾಯಿತಿ ನೀಡಲಾಗುತ್ತದೆ. 50 ಯೂನಿಟ್ ವರೆಗೆ ಲೈಫ್ ಲೈನ್ ಬಳಕೆಯಲ್ಲಿ ಗ್ರಾಹಕರಿಗೆ ಪ್ರತಿ ಯೂನಿಟ್ ಗೆ ವಿಧಿಸುತ್ತಿದ್ದ 4.15 ರೂ. ಮತ್ತು 4.05 ರೂ. ಬದಲಿಗೆ 3.6 ರೂ. ಶುಲ್ಕ ವಿಧಿಸಲು ಚಿಂತನೆ ನಡೆದಿದೆ.
50 ರಿಂದ 200 ಯೂನಿಟ್ ವರೆಗಿನ ಸ್ಲ್ಯಾಬ್ ವಿಲೀನಗೊಳಿಸಿ ಆರಂಭಿಕ ದರ ಯೂನಿಟ್ ಗೆ 3.60 ರೂ. ನಿಗದಿ ಮಾಡುವ ಸಾಧ್ಯತೆ ಇದೆ. ನಂತರದ ಯೂನಿಟ್ ಗಳಿಗೆ 4.60 ರೂ. ಶುಲ್ಕ ವಿಧಿಸಲಾಗುವುದು. 200 ಯುನಿಟ್ ಹಾಗೂ ನಂತರದ ಬಳಕೆದಾರರಿಗೆ ಈಗಿರುವ 8.20 ಹಾಗೂ 7.70 ರೂ. ದರವನ್ನು ಏಕೀಕೃತಗೊಳಿಸಿ 7 ರೂ.ಗೆ ಇಳಿಸಲಾಗುತ್ತದೆ ಎಂದು ಹೇಳಲಾಗಿದೆ.
ಎಚ್‌ಟಿ ಗ್ರಾಹಕರಿಗೆ ಸಮಯಾಧಾರಿತ ಶುಲ್ಕ ವ್ಯವಸ್ಥೆ ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ. ದಿನದಲ್ಲಿ 11 ಗಂಟೆ ವಿದ್ಯುತ್ ಬಳಕೆದಾರರ ಶುಲ್ಕದಲ್ಲಿ ಕಡಿತ ಮಾಡಿ ಹೆಚ್ಚಿನ ರಿಯಾಯಿತಿ ಕಲ್ಪಿಸುವ ಬಗ್ಗೆ ಪ್ರಸ್ತಾಪಿಸಲು ನಿರ್ಧರಿಸಲಾಗಿದೆ. ಪ್ರತಿ ಯುನಿಟ್‌ಗೆ ಈ ಮೊದಲು ವಿಧಿಸುತ್ತಿದ್ದ 6.60 ರೂ. ಬಳಕೆದಾರರ ಶುಲ್ಕ ಹೊಸ ಪ್ರಸ್ತಾಪದಿಂದ ಇಳಿಕೆಯಾಗುವ ಸಾಧ್ಯತೆ ಹೆಚ್ಚಿದ್ದು 75 ಪೈಸೆವರೆಗೆ ರಿಯಾಯಿತಿ ಸಿಗುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ ಗ್ರಾಹಕ ಸ್ನೇಹಿಯಾಗಿ ಜನಪರ ನಿಲುವು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಬಳಕೆದಾರರ ಶುಲ್ಕ ಇಳಿಕೆಗೆ ಚಿಂತನೆ ನಡೆದಿದೆ ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.