ಉಪ್ಪಳ: ದನಕ್ಕೆ ಹುಲ್ಲು ತರಲೆಂದು ತೋಟಕ್ಕೆ ತೆರಳಿದ ಮಹಿಳೆಯ ಮೃತದೇಹ ಕೆರೆಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಕಯ್ಯಾರು ಪೊನ್ನೆತ್ತೋಡು ನಿವಾಸಿ ಇಲೆಕ್ಟಿಕಲ್ ಗುತ್ತಿಗೆದಾರ ತಾರಾನಾಥ ಶೆಟ್ಟಿ ಎಂಬವರ ಪತ್ನಿ ಅನಿತ ಶೆಟ್ಟಿ (42) ಮೃತಪಟ್ಟವರು. ಇವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಳಿಯ ಕೈಕಾರ ನಿವಾಸಿ ದಿ. ಬಾಲಕೃಷ್ಣ-ನಳಿನಿ ದಂಪತಿಯ ಪುತ್ರಿಯಾಗಿದ್ದಾರೆ. ಮಹಿಳೆಯೂ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದಿರಬಹುದೆಂದು ಶಂಕಿಸಲಾಗಿದೆ.
ನಿನ್ನೆ ಸಂಜೆ ಸುಮಾರು 3.30ರ ವೇಳೆ ಅನಿತಾರವರು ಮನೆ ಸಮೀಪದ ತೋಟಕ್ಕೆ ತೆರಳಿದ್ದರು. ಬಹಳಷ್ಟು ಹೊತ್ತಾದರೂ ಮನೆಗೆ ವಾಪಸ್ಸಾಗದಿದ್ದಾಗ ಮನೆಯವರು ತೋಟಕ್ಕೆ ತೆರಳಿ ಹುಡುಕಾಡಿದ್ದಾರೆ. ಹುಲ್ಲು, ಕತ್ತಿ,ಅಡಿಕೆ ಸಂಗ್ರಹಿಸಿಟ್ಟ ಸ್ಥಿತಿಯಲ್ಲಿಕಂಡುಬಂದಿದೆ. ಬಳಿಕ ಪರಿಸರದ ಕೆರೆಯನ್ನು ನೋಡಿದಾಗ ಚಪ್ಪಲಿ ಪತ್ತೆಯಾಗಿದೆ. ಕೂಡಲೇ ಸಂಬಂಧಿಕರಿಗೆ ವಿಷಯತಿಳಿದಿದ್ದಾರೆ.
ಬಳಿಕ ಉಪ್ಪಳದಿಂದ ಅಗ್ನಿಶಾಮಕದಳ ತಲುಪಿ ಉಪಕರಣದ ಮೂಲಕ ತಪಾಸಣೆ ಮಾಡಿದ್ದಾರೆ. ಆದರೆ ಮೃತದೇಹ ಪತ್ತೆಯಾಗಿರಲಿಲ್ಲ. ಸಂಜೆ ಸುಮಾರು 7 ಗಂಟೆಗೆ ಕಾಸರಗೋಡಿನಿಂದ ಮುಳುಗುತಜ್ಞರು ತಲುಪಿ ಕೆರೆಗೆ ಇಳಿದು ಜಾಲಾಡಿದಾಗ ಮೃತದೇಹ ಪತ್ತೆಯಾಗಿದೆ.

ಮೃತದೇಹವನ್ನು ಮೇಲಕ್ಕೆತ್ತಿ ಮಂಗಲ್ಪಾಡಿ ತಾಲೂಕು ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೃತರು ಪತಿ, ಮಕ್ಕಳಾದ ಅನ್ವಿತ್, ಅಶ್ವಥ್, ಸಹೋದರ ಗಂಗಾಧರ, ಸಹೋದರಿ ಮಮತ ಹಾಗೂಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಮೃತರ ಮನೆಗೆ ಹಾಗೂ ಘಟನೆ ಸ್ಥಳಕ್ಕೆ ವಿವಿಧ ರಾಜಕೀಯ ನೇತಾರರಾದ ಝಡ್ ಎ ಕಯ್ಯಾರ್, ವಸಂತ ಕುಮಾರ್ ಮಯ್ಯ,ವಿಜಯ ರೈ, ಪ್ರಸಾದ್ ರೈ ಕಯ್ಯಾರು,ರವೀಂದ್ರ ಶೆಟ್ಟಿ ಬೊಳ್ಳಾರು, ಬೇಬಿ ಶೆಟ್ಟಿ ಮೊದಲಾದವರು ಭೇಟಿ ನೀಡಿದರು.ಅನಿತಾರವರ ನಿಧನಕ್ಕೆ ಬಿಜೆಪಿ ಪೈವಳಿಕೆ ಪಂಚಾಯತ್ ಸಮಿತಿ, ಸಿಪಿಎಂ ಕಯ್ಯಾರು ಬ್ರಾಂಚ್ ಸಮಿತಿ ಸಂತಾಪ ಸೂಚಿಸಿದೆ.
