ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದ ಚಂಪಾ ಷಷ್ಟಿಯ ಸಂದರ್ಭ ಅಲ್ಲಿ ಸಂತೆ ವ್ಯಾಪಾರ ಮಾಡುತ್ತಿದ್ದ ಯುವಕನಿಗೆ ಅಲ್ಲಿನ ಸ್ಥಳೀಯ ಠಾಣೆಯ ಪೋಲೀಸ ಸಿಬಂದಿಯೊಬ್ಬರು ಹಣಕ್ಕಾಗಿ ಬೇಡಿಕೆಯಿಟ್ಟು ಹಲ್ಲೆ ನಡೆಸಿದ್ದಾರೆಂದು ಕಡಬದ ಯುವಕನೋರ್ವ ಆಸ್ಪತ್ರೆಯಲ್ಲಿ ದಾಖಲಾದ ಘಟನೆ ಡಿ.1 ರಂದು ನಡೆದಿತ್ತು. ಕುಟ್ರುಪ್ಪಾಡಿ ಗ್ರಾಮದ ಭೀಮಗುಂಡಿ ನಿವಾಸಿ ಶಶಿಕುಮಾರ್ ಹಲ್ಲೆಯ ಆರೋಪ ಮಾಡುತ್ತಿರುವ ವ್ಯಾಪಾರಿ . ಸುಬ್ರಹ್ಮಣ್ಯ ಠಾಣೆಯ ಸಿಬಂದಿ ಭೀಮನ ಗೌಡ ಹಲ್ಲೆ ಮಾಡಿರುವುದಾಗಿ ಅವರು ಆರೋಪಿಸಿದ್ದಾರೆ.
ದೂರು :
ಘಟನೆಯ ಬಗ್ಗೆ ಶಶಿಕಿರಣ್ ಪೊಲೀಸರಿಗೆ ದೂರು ನೀಡಿರುವುದಾಗಿ ಹೇಳಿದರೇ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಯಾವುದೇ ದೂರು ಬಂದಿಲ್ಲ ಎಂದು ಡಿ 1 ರಂದು ಸಂಜೆ 7 ಗಂಟೆ ಸುಮಾರಿಗೆ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೇ ಶಶಿಕಿರಣ್ ಪೊಲೀಸರಿಗೆ ದೂರಿನ ಪ್ರತಿಯನ್ನು ಡಿ ೧ ರಂದು ಬೆಳಿಗ್ಗೆ 8.30 ರ ಸುಮಾರಿಗೆ ಮೇಯ್ಲ್ ಮಾಡಿದ್ದಾರೆಂದು ತೋರಿಸುವ ಸ್ಕ್ರೀನ್ ಶಾಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅಲ್ಲದೆ, ದೂರಿನ ಪ್ರತಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೂ ಡಿ 1 ರಂದು ಸಂಜೆ 6.45 ರ ಸುಮಾರಿಗೆ ಫಾರ್ವಾರ್ಡ್ ಮಾಡಿದ್ದಾರೆಂದು ತೋರಿಸುವ ಸ್ಕ್ರೀನ್ ಶಾಟ್ ಗಳು ಲಭಿಸಿವೆ. ಈ ಪ್ರಕರಣದ ಬಗ್ಗೆ ಪೊಲೀಸ್ ಇಲಾಖೆ ಇನ್ನೂ FIR ದಾಖಲಿಸಿಲ್ಲ ಹಾಗೂ ಸಿಬಂದಿಯ ವಿರುದ್ದ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಹೇಳಲಾಗುತ್ತಿದೆ.
ಇಂದು ತನ್ನ ಕಾರ್ಯಕರ್ತ ಶಶಿಕಿರಣ್ ಅವರ ಆರೋಗ್ಯ ವಿಚಾರಿಸಲು ಹಿಂದೂ ಜಾಗರಣ ವೇದಿಕೆಯ ಪುತ್ತೂರು ಪ್ರಾಂತ ಸಮಿತಿಯ ಮುಖಂಡರುಗಳು ಕಡಬಕ್ಕೆ ಆಗಮಿಸಿದ್ದರು . ಈ ವೇಳೆ ಅವರು “ ಯುವಕ ಆಸ್ಪತ್ರೆಗೆ ದಾಖಲಾಗಿ ದಿನ ಕಳೆದರೂ ಯಾವುದೇ ಪ್ರಕರಣ ದಾಖಲಾಗಿಲ್ಲ.ಯಾವುದೇ ಕ್ರಮ ಜರುಗಿಸದೆ ಇದ್ದಲ್ಲಿ ಸುಳ್ಯ,ಪುತ್ತೂರು,ಕಡಬ ಭಾಗದ ಹಿಂದೂ ಕಾರ್ಯಕರ್ತರನ್ನು ಸೇರಿಸಿ ಸುಬ್ರಹ್ಮಣ್ಯ ಠಾಣೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಯುವಕನನ್ನು ಪೋಲಿಸ್ ವಸತಿ ಗೃಹಕ್ಕೆ ಕರೆದೊಯ್ದು ಹಲ್ಲೆ ಮಾಡಿರುವ ಘಟನೆ ಬಗ್ಗೆ ಇದುವರೆಗೆ ಯಾವುದೇ ಕ್ರಮ ಜರುಗಿಸಿಲ್ಲ, ಪೊಲೀಸ್ ಇಲಾಖೆಯ ಬಗ್ಗೆ ನಂಬಿಕೆ ಇದ್ದು ದೌರ್ಜನ್ಯವೆಸಗಿದ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಬೇಕು ಎಂದು ಹಿಂದೂ ಜಾಗರಣ ವೇದಿಕೆಯ ಪ್ರಾಂತ ಸಮಿತಿ ಸದಸ್ಯ ಚಿನ್ಮಯ್ ಈಶ್ವರಮಂಗಲ ಆಗ್ರಹಿಸಿದರು.
ನಿಯೋಗದಲ್ಲಿ ಜಿಲ್ಲಾ ಸಂಚಾಲಕ ನರಸಿಂಹ ಶೆಟ್ಟಿ ಮಾಣಿ, ಜಿಲ್ಲಾ ಸಮಿತಿ ಸದಸ್ಯರಾದ ಅವಿನಾಶ್ ಪುರುಷರಕಟ್ಟೆ, ಸುಳ್ಯ ತಾಲೂಕು ಸಂಚಾಲಕ ಮಹೇಶ್ ಉಗ್ರಾಣಿಮನೆ,ಸಹ ಸಂಚಾಲಕ ನಿಕೇಶ್ ಉಬರಡ್ಕ, ಜೀವನ್ ಸುಳ್ಯ,ಕಡಬ ತಾಲೂಕು ಸಮಿತಿಯ ಮಲ್ಲೇಶ್ ಆಲಂಕಾರು,ಜಿನಿತ್ ಮರ್ದಾಳ ಮುಂತಾದವರು ಉಪಸ್ಥಿತರಿದ್ದರು.
ಶಶಿಕಿರಣ್ ನೀಡಿದ ದೂರಿನಲ್ಲಿ ಏನಿದೆ ?
ಚಂಪಾಷಷ್ಠಿಯಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಜ್ಯೂಸ್ ಐಸ್ ಕ್ರೀಂ ವ್ಯಾಪಾರ ಮಾಡುತ್ತಿದೆ. ಪಂಚಮಿಯಂದು ರಾತ್ರಿ 12 ಗಂಟೆ ಸುಮಾರಿಗೆ ಸ್ಟಾಲಿಗೆ ಬಂದ ಪೋಲಿಸ್ ಸಿಬ್ಬಂದಿ ಬೀಮಣ್ಣ ಗೌಡ ಎಂಬವರು ಹಣ ನೀಡುವಂತೆ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಪೋಲಿಸ್ ಸಿಬ್ಬಂದಿಗೆ ಹೆದರಿ 1000 ನೀಡಿದ್ದೇನೆ. ಈ ಹಣ ಸಾಕಾಗುವುದಿಲ್ಲ. 5000 ನೀಡುವಂತೆ ಪೋಲಿಸ್ ಸಿಬ್ಬಂದಿ ಬೆದರಿಸಿದ್ದಾರೆ. ಕೊಡಲು ನಿರಾಕರಿಸಿದಾಗ , ಅಂಗಡಿಯಲ್ಲಿರುವ ಸಾಮಾಗ್ರಿಗಳನ್ನು ಹಾಗೂ ನನ್ನನ್ನೂ ಪೊಲೀಸ್ ಸಿಬಂದಿಯ ಕ್ವಾಟರ್ಸ್ ಗೆ ತೆಗೆದುಕೊಂಡು ಹೋಗಿದ್ದಾರೆ. ಅಲ್ಲಿ 35 ಕೆಜಿಯ ಸಾಮಾಗ್ರಿಯನ್ನು ಸುಮಾರು ಮುಕ್ಕಾಲು ಗಂಟೆ ತಲೆಯಲ್ಲಿ ಹೊತ್ತುಕೊಳ್ಳುವಂತೆ ಮಾಡಿ ಚಿತ್ರ ಹಿಂಸೆ ನೀಡಿದ್ದಾರೆ. ಅಲ್ಲದೇ ಮೊಬೈಲ್ ಹಾಗೂ ಹಣವನ್ನು ಕಿತ್ತುಕೊಂಡು ಕ್ರಿಮಿನಲ್ ಕೇಸ್ ಹಾಕುವ ಬೆದರಿಕೆಯೊಡ್ಡಿದ್ದಾರೆಂದು ದೂರಿನಲ್ಲಿ ವಿವರಿಸಲಾಗಿದೆ.
ಸ್ಥಳ ಬಾಡಿಗೆ ನೀಡದೆ ವಂಚಿಸಲು ಯತ್ನಿಸಿದ್ದು, ಕೇಳಲು ಹೋದಾಗ ಹತ್ತಿರದಲ್ಲೇ ಇದ್ದರೂ ನಾನು ಸುಳ್ಯದಲ್ಲಿ ಇದ್ದೇನೆ ಎಂದು ಸುಳ್ಳು ಹೇಳುತ್ತಿದ್ದ. ಜ್ಯೂಸ್ ಅಂಗಡಿ ಹೆಸರಿನಲ್ಲಿ ಕಲರ್ ಚಾಯಿಸ್ ಎಂಬ ಗ್ಯಾಂಬ್ಲಿಂಗ್ ಮಾದರಿ ವ್ಯಾಪಾರ ಮಾಡುತಿದ್ದರು. ಇದಕ್ಕೆ ಬುದ್ಧಿವಾದ ಹೇಳಿದ್ದೆ ಅಷ್ಟೆ. ಅಂಗಡಿಯ ಕೆಲಸದ ಹುಡುಗರ ಕೈಗೆ ನಾನೇ 200 ರೂ ಕೊಟ್ಟಿದ್ದೆ. ಅವರ ಆರೋಪ ಸುಳ್ಳು ಎಂದು ಪೊಲೀಸ್ ಸಿಬಂದಿ ಭೀಮನ ಗೌಡ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.