ಪುತ್ತೂರು : ಡಿ 2 : ಸಹೋದರರಿಬ್ಬರ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಪುತ್ತೂರು ನಗರದ ಹೊರ ವಲಯದ ಕೆಮ್ಮಿಂಜೆ ಗ್ರಾಮದಲ್ಲಿ ಡಿ 1 ರಂದು ತಡ ರಾತ್ರಿ ನಡೆದಿದೆ. ಹಾವೇರಿ ಜಿಲ್ಲೆಯ ಹೊಸೂರು ನಿವಾಸಿ ಮಾದೇವಪ್ಪ ಕೊಲೆಯಾದವರು. ಇವರ ಅಣ್ಣ ನಿಂಗನ ಗೌಡ ಕೊಲೆ ಆರೋಪಿ. ಇವರಿಬ್ಬರು ವಲಸೆ ಕಾರ್ಮಿಕರಾಗಿದ್ದು , ಪ್ರಸ್ತುತ ಪುತ್ತೂರಿನಲ್ಲಿ ವಾಸಿಸುತ್ತಿದ್ದರು.
ಸಹೋದರರಿಬ್ಬರು ವಿಪರೀತ ಕುಡಿತದ ಚಟ ಹೊಂದಿದ್ದರು ಎನ್ನಲಾಗಿದೆ. ಕುಡಿದು ಅಗಾಗ ಪರಸ್ಪರ ಗಲಾಟೆ ಮಾಡುವ ಖಯಾಲಿ ಹೊಂದಿದ್ದರು ಎಂದು ತಿಳಿದು ಬಂದಿದೆ. ನಿನ್ನೆ ಕೂಡ ಇಬ್ಬರು ಮದ್ಯಪಾನ ಮಾಡಿದ್ದಾರೆ. ಬಳಿಕ ಪರಸ್ಪರ ಜಗಳವಾಡಿ ಕೊಂಡಿದ್ದಾರೆ.
ಕುಡಿತದ ಮತ್ತಿನಲ್ಲಿ ನಿಂಗನ ಗೌಡನು, ಮಾದೇವಪ್ಪನ ಮೇಲೆ ಹಲ್ಲೆ ಮಾಡಿದ್ದು, ಗಂಭೀರ ಗಾಯಗೊಂಡ ಆತ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಲಾಗಿದೆ. ತಮ್ಮ ಉಸಿರು ಚೆಲ್ಲಿ ಬೀಳುತ್ತಲೆ ಆರೋಪಿ ನಿಂಗನ ಗೌಡ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಆರೋಪಿಯ ವಿರುದ್ದ ಕೊಲೆ ಕೇಸ್ ದಾಖಲು ಮಾಡಿಕೊಂಡಿದ್ದಾರೆ