Mob Attack : ಮಂಗಳೂರು : ಅಡ್ಡದಿಡ್ಡಿ ಸಂಚಾರ ನಡೆಸಿದ ಪಿಕಪ್ ವೊಂದು ಹಲವು ವಾಹನಗಳಿಗೆ ಢಿಕ್ಕಿ ಹೊಡೆದ ಹಾಗೂ ಆ ವಾಹನವನ್ನು ಬೆನ್ನಟ್ಟಿದ ಆಕ್ರೋಶಿತರು ಅದನ್ನು ರಸ್ತೆಯಲ್ಲಿಯೇ ತಡೆದು ನಿಲ್ಲಿಸಿ ಚಾಲಕ ಹಾಗೂ ನಿರ್ವಾಹಕನಿಗೆ ಧರ್ಮದೇಟು ಬಿಗಿದ ಘಟನೆ ಡಿ 1 ರಂದು ತಡರಾತ್ರಿ ಮಂಗಳೂರಿನ ಹೊರ ವಲಯದಲ್ಲಿ ನಡೆದಿದೆ.
ಮುಲ್ಕಿ-ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಹೊಸ ಕಾವೇರಿ ಬಳಿ ಘಟನೆ ನಡೆದ ಬಗ್ಗೆ ವರದಿಯಾಗಿದೆ. ಚಾಲಕ ಹಾಗೂ ನಿರ್ವಾಹಕನಿಗೆ ಮೈಮೇಲೆ ರಕ್ತ ಬರುವಂತೆ ಹೊಡೆದ ಹಾಗೂ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಜ್ಪೆಯಿಂದ ಹೊರಟ ಪಿಕಪ್ ವಾಹನ ಸಿಕ್ಕ ಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆಯುತ್ತಾ ಸಾಗಿದೆ ಎನ್ನಲಾಗಿದೆ. ಬಜ್ಪೆಯಿಂದ ಬರುತ್ತಲೇ ಹಲವು ಬೈಕ್, ಕಾರು, ಬಸ್ ಗಳಿಗೆ ಡಿಕ್ಕಿ ಹೊಡೆದಿದೆ ಹಾಗೂ ಬಜ್ಪೆ ಚೆಕ್ ಪೋಸ್ಟ್ ಬಳಿ 3 ಬೈಕ್ ಗೆ ಗುದ್ದಿರುವುದಾಗಿ ಸಾರ್ವಜನಿಕರು ಆರೋಪಿಸಿದ್ದು ಈ ಬಗ್ಗೆ ಸಾಕ್ಷಿಗಾಗಿ ಸಿಸಿಟಿವಿ ಪರಿಶೀಲಿಸುವಂತೆಯೂ ಅಗ್ರಹಿಸಿದ್ದಾರೆ.
ಪಿಕಪ್ ಚಾಲಕನ ಯದ್ವಾತದ್ವ ಚಾಲನೆಯಿಂದ ಆಕ್ರೋಶಿತರಿಂದ ಸಾರ್ವಜನಿಕರು ಸುಮಾರು ಹತ್ತು ಬೈಕ್ ಗಳಲ್ಲಿ ಆ ವಾಹನವನ್ನು ಬೆನ್ನಟ್ಟಿದ್ದಾರೆ . ಸರಿ ಸುಮಾರು 12 ಕೀ . ಮಿ ನಷ್ಟು ದೂರ ಬೆನ್ನಟಿದ್ದ ಅವರು ಹೊಸ ಕಾವೇರಿ ಬಳಿ ಪಿಕಪ್ ಅನ್ನು ತಡೆಯುವಲ್ಲಿ ಸಫಲರಾಗಿದ್ದರೆ. ಬಳಿಕ ಚಾಲಕ ಹಾಗೂ ನಿರ್ವಾಹಕನನ್ನು ಹೊರಗೆಳೆದ ಉದ್ರಿಕ್ತರ ಗುಂಪು ಮುಖ, ಮೂತಿ ನೋಡದೆ ಧರ್ಮದೇಟು ಬಿಗಿದಿದೆ.
ಮಂಗಳೂರು : ಯದ್ವಾತದ್ವಾ ಗಾಡಿ ಚಲಾಯಿಸಿ ಹಲವು ವಾಹನಗಳಿಗೆ ಢಿಕ್ಕಿ ಹೊಡೆದ ಪಿಕಪನ್ನು ಬೆನ್ನಟ್ಟಿ ಚಾಲಕ ನಿರ್ವಾಹಕನಿಗೆ ಮುಖ, ಮೂತಿ ನೋಡದೆ ಹೊಡೆದ ಗುಂಪು pic.twitter.com/uoeF2eSCZz
— Nikhara News (@NewsNikhara) December 2, 2022
ಡ್ರೈವಿಂಗ್ ಲೈಸನ್ಸ್ ನಲ್ಲಿ ಮುಸ್ಲಿಂ ಹೆಸರು – ಚಾಲಕ ಹೇಳಿದ್ದು ಹಿಂದೂ ಹೆಸರು
ಬಳಿಕ ಚಾಲಕನ ಪೂರ್ವಪರಗಳನ್ನು ವಿಚಾರಿಸಿದ್ದು , ಈ ವೇಳೆ ಆತ ಹಿಂದೂ ಹೆಸರು ಹೇಳಿದ್ದಾನೆ ಎನ್ನಲಾಗಿದೆ. ಆದರೇ ಆತನ ಡ್ರೈವಿಂಗ್ ಲೈಸೆನ್ಸ್ ನಲ್ಲಿ ಪರಿಶೀಲನೆ ವೇಳೆ ಮುಸ್ಲಿಮ್ ಹೆಸರು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಇದರಿಂದ ಇನ್ನಷ್ಟು ಆಕ್ರೋಶಿತರಾದ ಗುಂಪು ಆತನ ಮೇಲೆ ಇನ್ನಷ್ಟು ಹಲ್ಲೆ ನಡೆಸಿದೆ ಎಂದು ತಿಳಿದು ಬಂದಿದೆ.
ಅಲ್ಲದೇ ಚಾಲಕ, ನಿರ್ವಾಹಕರಿಬ್ಬರೂ ಗಾಂಜಾ ನಶೆಯಲ್ಲಿದ್ದರು ಎಂದು ಗುಂಪು ಆರೋಪಿಸಿದ್ದು, ಹೀಗಾಗಿಯೇ ಅವರು ಹೀಗೆ ಯದ್ವಾ ತದ್ವ ವಾಹನ ಚಲಾಯಿಸಿದ್ದಾರೆ ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಮಂಗಳೂರು ಹೊರವಲಯದ ಮುಲ್ಕಿ ತಾಲೂಕು ಬಳಿ ಘಟನೆ ನಡೆದಿದ್ದು ಈ ಬಗ್ಗೆ ಠಾಣೆಯಲ್ಲಿ ಇತ್ತಂಡಗಳಿಂದ ದೂರು ದಾಖಲಾದ ಬಗ್ಗೆ ವರದಿಯಾಗಿಲ್ಲ.