illicit affairs ಮಂಡ್ಯ : ಡಿ 2 : ಕೌಟುಂಬಿಕ ಕಲಹ ಹಿನ್ನೆಲೆ ತನ್ನ 3 ಮಕ್ಕಳಿಗೆ ವಿಷ ಉಣಿಸಿ ತಾಯಿ ನೇಣಿಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದಲ್ಲಿ ನಡೆದಿದೆ. 30 ವರ್ಷದ ಉಸ್ನಾ ಕೌಸರ್ ತನ್ನ ಮೂರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. 7 ವರ್ಷದ ಹಾರಿಸ್, 4 ವರ್ಷದ ಆಲಿಸಾ ಹಾಗೂ 2 ವರ್ಷದ ಕಂದಮ್ಮ ಅನಮ್ ಪಾತಿಮಾಗೆ ವಿಷುಣಿಸಿ ಕೊಂಡು ನೇಣು ಬಿಗಿದುಕೊಂಡಿದ್ದಾರೆ.
30 ವರ್ಷದ ಉಸ್ಮಾ ಕೌಸರ್ ಆತ್ಮಹತ್ಯೆ ಮಾಡಿಕೊಂಡ ತಾಯಿಯಾಗಿದ್ದು, 7 ವರ್ಷದ ಹಾರಿಸ್, 4 ವರ್ಷದ ಆಲಿಸಾ, 2 ವರ್ಷದ ಫಾತಿಮಾ ದುರ್ದೈವಿಗಳಾಗಿದ್ದಾರೆ. ತಾಯಿ ಉಸ್ಮಾ ಮಕ್ಕಳು ಮೃತಪಟ್ಟ ಬಳಿಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಕ್ರಮ ಸಂಬಂಧ
ಅಖಿಲ್ ಅಹಮದ್ ಚನ್ನಪಟ್ಟಣದಲ್ಲಿ ಕಾರ್ ಮೆಕಾನಿಕ್ ಆಗಿದ್ದ. ಮುದ್ದಾದ ಕುಟುಂಬವಿದ್ದರೂ ಪರಸ್ತ್ರೀಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಯಾವಾಗ ಆತನ ಮೊಬೈಲ್ನಲ್ಲಿ ಪರಸ್ತ್ರೀಯ ಬೆತ್ತಲೆ ಚಿತ್ರ ಹಾಗೂ ಆತನ ಫೋಟೋಗಳು ಪತ್ತೆಯಾದವು, ಆಗ ಕೌಸರ್ ಪ್ರಶ್ನೆ ಮಾಡಿದ್ದಳು. ಇದೇ ವಿಚಾರಕ್ಕೆ ಮನೆಯಲ್ಲಿ ಜೋರು ಗಲಾಟೆ ನಡೆದಿತ್ತು. ನಂತರ ಇಬ್ಬರನ್ನು ಪಾಲಕರು ರಾಜಿ ಮಾಡಿದ್ದರು. ಅಕ್ರಮ ಸಂಬಂಧ ಬಿಡುವುದಾಗಿ ಅಖಿಲ್ ಮಾತು ಕೊಟ್ಟಿದ್ದ.
ನಿನ್ನೆ ಉರುಫ್ ಹಿನ್ನೆಲೆ ಬೇಗ ಮನೆಗೆ ಬರ್ತೀನಿ ಎಂದು ಅಖಿಲ್ ಕೆಲಸಕ್ಕೆ ಹೋಗಿದ್ದ. ಆದರೆ, ಹೇಳಿದಂತೆ ಸಂಜೆ ಬೇಗ ಮನೆಗೆ ಬರಲಿಲ್ಲ. ಇದರಿಂದಾಗಿ ಕೌಸರ್ ಮತ್ತು ಅಖಿಲ್ ನಡುವೆ ಫೋನ್ ಮೂಲಕವೇ ಮತ್ತೆ ಜಗಳ ನಡೆದಿತ್ತು. ಖಾಸಗಿ ಕ್ಲಿನಿಕ್ನಲ್ಲಿ ಕೆಲಸ ಮಾಡುತ್ತಿದ್ದ ಕೌಸರ್, ಗಂಡನ ನಡೆಯಿಂದ ತೀವ್ರವಾಗಿ ಬೇಸತ್ತಿದ್ದಳು. ಸಂಜೆ ಮನೆಗೆ ಬಂದ ಕೌಸರ್ ಅನ್ನದಲ್ಲಿ ಮಕ್ಕಳಿಗೆ ವಿಷ ಹಾಕಿ, ತಿನ್ನಿಸಿ, ಅವರು ಸತ್ತ ಬಳಿಕ ತಾನೂ ನೇಣಿಗೆ ಶರಣಾಗಿದ್ದಾಳೆ.

ಈ ದೃಶ್ಯ ಕಂಡ ಕುಟುಂಬಸ್ಥರು, ಸ್ಥಳೀಯರ ಆಕ್ರಂಧನ ಮುಗಿಲು ಮುಟ್ಟಿದೆ. ತಾಯಿಯ ಆತುರದ ನಿರ್ಧಾರಕ್ಕೆ ಬದುಕಿ ಬಾಳ ಬೇಕಾದ ಕಂದಮ್ಮಗಳು ಕೂಡ ಪ್ರಾಣ ಬಿಟ್ಟಿದ್ದು ಘೋರ ದುರಂತ. ಸ್ಥಳಕ್ಕೆ ಮದ್ದೂರು ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ಬಳಿಕ ತಾಲೂಕು ಆಸ್ಪತ್ರೆಯ ಶವಗಾರಕ್ಕೆ ಮೃತದೇಹ ರವಾನಿಸಲಾಗಿದೆ.
ಕೌಸರ್ ಆತ್ಮಹತ್ಯೆ ಮಾಡಿಕೊಂಡಿಲ್ಲ, ಗಂಡ ಅಖಿಲ್ ಕೊಲೆ ಮಾಡಿದ್ದಾನೆ ಎಂದು ಕೌಸರ್ ಪೋಷಕರು ಆರೋಪ ಮಾಡಿದ್ದಾರೆ. ಘಟನೆಯ ಬೆನ್ನಲ್ಲೇ ಅಖಿಲ್ ಅಹಮದ್ ಹಾಗೂ ಕುಟುಂಬ ನಾಪತ್ತೆಯಾಗಿದೆ. ಈ ಸಂಬಂಧ ಮದ್ದೂರು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾಗಿರುವ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.