ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಷ್ ( Ambarish ) ಮತ್ತು ಸಂಸದೆ ಸುಮಲತಾ (Sumalata) ಪುತ್ರ ಅಭಿಷೇಕ್ ಅಂಬರೀಷ್ (abhishek Ambarish ) ಅವರು ಶೀಘ್ರದಲ್ಲೇ ಸಪ್ತಪದಿ ತುಳಿಯಲಿದ್ದಾರೆ. ಡಿಸೆಂಬರ್ 2ನೇ ವಾರದಲ್ಲಿ ಅಭಿಷೇಕ್ ಅವರ ನಿಶ್ಚಿತಾರ್ಥ ಖ್ಯಾತ ಮಾಡೆಲ್ ಒಬ್ಬರ ಜೊತೆ ನಡೆಯಲಿದೆ ಎಂಬ ಮಾತುಗಳು ಸ್ಯಾಂಡಲ್ ವುಡ್ ಅಂಗಣದಿಂದ ಕೇಳಿ ಬಂದಿದೆ
ಫ್ಯಾಷನ್ ಲೋಕದ ದಿಗ್ಗಜ ಪ್ರಸಾದ್ ಬಿದ್ದಪ್ಪ ( prasad biddappa) ಪುತ್ರಿ, ಅವಿವಾ ಬಿದ್ದಪ್ಪ ಜೊತೆ ಅಭಿಷೇಕ್ ಸಪ್ತಪದಿ ತುಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಅವಿವ ಸಖತ್ ಡಿಮ್ಯಾಂಡ್ ಇರೋ ಫ್ಯಾಷನ್ ಡಿಸೈನರ್ ಆಗಿದ್ದಾರೆ. ಜೊತೆಗೆ ಇನ್ಸ್ಟಾಗ್ರಾಮ್ನಲ್ಲಿ 44 ಸಾವಿರಕ್ಕೂ ಹೆಚ್ಚಿನ ಫಾಲೋವರ್ಸ್ ಹೊಂದಿದ್ದಾರೆ.
ಅವಿವಾ ಬಿದ್ದಪ್ಪ ಹಾಗೂ ಅಭಿಷೇಕ್ ಕಳೆದ ಹಲವಾರು ವರ್ಷಗಳಿಂದ ಸ್ನೇಹಿತರಾಗಿದ್ದು ಅದು ಬಳಿಕದ ದಿನಗಳಲ್ಲಿ ಪ್ರೀತಿಯಾಗಿ ಬದಲಾಗಿದೆ ಎನ್ನಲಾಗಿದೆ. ಮತ್ತೊಂದು ವಿಶೇಷ ಅಂದರೆ ಅವಿವ ಅಭಿಷೇಕ್ ಅಂಬರೀಶ್ ಗಿಂತ ದೊಡ್ಡವರು ಅಂತ ಹೇಳಲಾಗುತ್ತಿದೆ. ಅವಿವ ಅಭೀಷೇಕ್ಗಿಂತ 3 ವರ್ಷ ದೊಡ್ಡವರು ಎನ್ನಲಾಗುತ್ತಿದೆ. ಇನ್ನೂ ನಾಲ್ಕು ವರ್ಷದಿಂದ ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಅಂತ ಬೆಂಗಳೂರು ಟೈಮ್ಸ್ ವರದಿ ಮಾಡಿದೆ.

ಅಭಿಷೇಕ್ ಅಂಬರೀಷ್ ಅವರ ಮದುವೆ ಅದಾಗಲೇ ನಿಶ್ಚಯವಾಗಿದ್ದು, ನಿಶ್ಚಿತಾರ್ಥ ಸಮಾರಂಭ ಡಿಸೆಂಬರ್ 11 ರಂದು ಪ್ಯಾಲೇಸ್ ಗ್ರೌಂಡ್ ನಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ. ಅಭಿಷೇಕ್ ಅಂಬರೀಶ್ ಕೈ ಹಿಡಿಯುತ್ತಿರುವ ಹುಡುಗಿ ಎಂದು ಹೇಳಲಾಗುತ್ತಿರುವ ಅವಿವಾ ಬಿದ್ದಪ್ಪ ಖ್ಯಾತ ಮಾಡೆಲ್. ಆದರೆ ನಿಶ್ಚಿತಾರ್ಥದವರೆಗೂ ಹುಡುಗಿಯ ಬಗ್ಗೆ ಆಗಲಿ ಅಥವಾ ಮದುವೆ ಬಗ್ಗೆ ಆಗಲಿ ಯಾರಿಗೂ ವಿಚಾರ ತಿಳಿಯಬಾರದು ಎನ್ನುವ ಕಾರಣದಿಂದ ಹುಡುಗಿ ಹಾಗೂ ನಿಶ್ಚಿತಾರ್ಥದ ದಿನಾಂಕವನ್ನು ಕುಟುಂಬದ ಸದಸ್ಯರು ಗುಟ್ಟಾಗಿ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ನಿಶ್ಚಿತಾರ್ಥದ ಸಿದ್ಧತೆಗಳು ನಡೆಯುತ್ತಿದ್ದು, ಮದುವೆ ದಿನಾಂಕ ಸೇರಿದಂತೆ ಹಲವು ಮಾಹಿತಿಗಳು ಇನ್ನಷ್ಟೇ ಹೊರಬೀಳಬೇಕಿದೆ.

ಕೆಲ ದಿನಗಳ ಹಿಂದೆ ಮದುವೆ ಬಗ್ಗೆ ಪ್ರತಿಕ್ರಿಯಿಸಿದ್ದ ಅಭಿಷೇಕ್ ಅಂಬರೀಷ್ ಪ್ರತಿ ಸಲ ನನ್ನ ಮದುವೆ, ನಿಶ್ಚಿತಾರ್ಥದ ಬಗ್ಗೆ ಈ ರೀತಿ ನ್ಯೂಸ್ ಕೇಳುತ್ತಿದ್ದೇನೆ. ನಾನು ನಿತ್ಯ ಕನಕಪುರಕ್ಕೆ ಶೂಟಿಂಗ್ಗೆ ಹೋಗುತ್ತಿದ್ದೇನೆ. ಇದರ ಮಧ್ಯೆ ಯಾವಾಗ ಹುಡುಗಿ ನೋಡಿದೆ, ಯಾವಾಗ ನಿಶ್ಚಿತಾರ್ಥ ಮಾಡಿಕೊಂಡೆ ಎಂದು ಗೊತ್ತಿಲ್ಲ. ಪದೇ ಪದೇ ನಿಶ್ಚಿತಾರ್ಥದ ಬಗ್ಗೆ ಮಾತನಾಡ್ತಿದ್ರೆ ಮುಂದೆ ನನಗೆ ಯಾರೂ ಹುಡುಗಿ ಕೊಡಲ್ಲ” ಎಂದು ನಗೆಚಟಾಕಿ ಹಾರಿಸಿದ್ದರು.

ನಿನ್ನೆಯಷ್ಟೇ ಅಭಿಷೇಕ್ ಅವರ ಹೊಸ ಸಿನಿಮಾದ ಮುಹೂರ್ತವಾಗಿದ್ದು, ಈ ಚಿತ್ರಕ್ಕೆ ಕಾಳಿ ಎಂದು ಹೆಸರಿಡಲಾಗಿದೆ. ಇದರಲ್ಲಿ ಕಾಂತಾರ ಖ್ಯಾತಿಯ ಸಪ್ತಮಿ ಗೌಡ ಅವರಿಗೆ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ ಮುಂಗಾರು ಮಳೆ ಖ್ಯಾತಿಯ ಕೃಷ್ಣ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅಭಿ ಅವರ ಎಂಗೇಜ್ ಮೆಂಟ್ ಮುಗಿದ ನಂತರ ಚಿತ್ರೀಕರಣ ಶುರು ಆಗಲಿದೆ. ಅಲ್ಲದೇ, ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲೂ ಅಭಿ ನಟಿಸಿದ್ದು, ಈ ಸಿನಿಮಾ ಸಂಪೂರ್ಣ ಚಿತ್ರೀಕರಣ ಮುಗಿಸಿದೆ.
