ನವದೆಹಲಿ: ಕೊರೊನಾ ಲಸಿಕೆಯಿಂದ (Covid Vaccine Side Effect ) ಉಂಟಾಗುವ ದುಷ್ಪರಿಣಾಮಗಳಿಗೆ ಸರ್ಕಾರವನ್ನು ಹೊಣೆ ಮಾಡಲು ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಸಲ್ಲಿರುವ ಅಫಿಡೆವಿಟ್‌ನಲ್ಲಿ ಹೇಳಿದೆ.
ಲಸಿಕೆ ತೆಗೆದುಕೊಳ್ಳುವಂತೆ ತಾನು ಯಾವತ್ತೂ ಯಾವುದೇ ಪ್ರಜೆಯನ್ನು ಒತ್ತಾಯಿಸಿಲ್ಲ ಎಂದು ಲಸಿಕೆ ಸಂಬಂಧಿ ಸಾವಿಗೆ ಪರಿಹಾರ ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಪ್ರತಿಯಾಗಿ ಸಲ್ಲಿಸಿದ ಅಫಿದಾವಿತ್ ನಲ್ಲಿ ಸಚಿವಾಲಯ ಹೇಳಿದೆ. ಲಸಿಕೆ ತೆಗೆದುಕೊಳ್ಳುವುದು ಐಚ್ಛಿಕವಾಗಿತ್ತು ಎಂದು ಅದು ಸ್ಪಷ್ಟಪಡಿಸಿದೆ.
ಒಂದು ವೇಳೆ ಲಸಿಕೆ ನೀಡಿದ ನಂತರ ವ್ಯಕ್ತಿ ಮೃತಪಟ್ಟರೆ, ಅಂತಹ ಪ್ರಕರಣಗಳಲ್ಲಿ ಪರಿಹಾರಕ್ಕಾಗಿ ಅರ್ಜಿದಾರರು ಸಿವಿಲ್ ಕೋರ್ಟ್‌ನಲ್ಲಿ ದಾವೆ ಹೂಡಬಹುದಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಕಳೆದ ವರ್ಷ ಕೊರೊನಾ ಲಸಿಕೆ ನೀಡಿದ ನಂತರ ಇಬ್ಬರು ಯುವತಿಯರು ಮೃತಪಟ್ಟ ಹಿನ್ನೆಲೆಯಲ್ಲಿ ಅವರು ಪೋಷಕರು ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯೆಯಾಗಿ ಕೇಂದ್ರ ಸರ್ಕಾರ ಈ ಅಫಿಡೆವಿಟ್ ಸಲ್ಲಿಸಿದೆ.
ವೈದ್ಯಕೀಯ ಪ್ರಯೋಗಗಳ ಮೂಲಕ ಲಸಿಕೆಯ ಪರೀಕ್ಷೆ ನಡೆಯುತ್ತಿರುವಾಗ ಸಾವು ಸಂಭವಿಸಿದರೆ ಲಸಿಕೆಯ ಉತ್ಪಾದಕರು ಮಾತ್ರ ಪರಿಹಾರ ನೀಡಬಹುದಾಗಿದೆ ಎಂದು ಅಫಿದಾವಿತ್ ಹೇಳಿದೆ. ಲಸಿಕೆ ಒಮ್ಮೆ ಮಾರುಕಟ್ಟೆಗೆ ಬಂದ ಬಳಿಕ ಅದನ್ನು ಪಡೆದು ಸಾವು ಸಂಭವಿಸಿದರೆ ಜನರು ವೈಯಕ್ತಿಕ ನೆಲೆಯಲ್ಲಿ ಸಿವಿಲ್ ನ್ಯಾಯಾಲಯಗಳಲ್ಲಿ ಪರಿಹಾರ ಕೋರಬೇಕು ಎಂದು ಸರಕಾರ ಹೇಳಿದೆ.