ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತಲಪಾಡಿ ಟೋಲ್ ಗೇಟ್ ಸಮೀಪ ಲಾರಿ ಡಿಕ್ಕಿ ಹೊಡೆದು ಪಾದಚಾರಿಯೊಬ್ಬರು ಸೋಮವಾರ ಸಂಜೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮುಳ್ಳೇರಿಯ ಆದೂರು ನಿವಾಸಿ ವಸಂತ್ ಕುಮಾರ್ ರೈ (55) ಮೃತಪಟ್ಟವರು.
ಮೃತ ವಸಂತ್ ರೈ ಅವರು 10 ವರ್ಷಗಳಿಂದ ಕಾಸರಗೋಡಿನ ಕೆಎಸ್‌ಆರ್‌ಟಿಸಿ ಡಿಪೊದಲ್ಲಿ ತಾತ್ಕಾಲಿಕ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಶಿರಿಯಾ ದೇವಸ್ಥಾನದಲ್ಲಿ ನಡೆದಿದ್ದ ಸಂಬಂಧಿಕರೊಬ್ಬರ ಉತ್ತರಕ್ರಿಯೆಯಲ್ಲಿ ಪಾಲ್ಗೊಂಡು ಕೋಟೆಕಾರಿಗೆ ತೆರಳಲು ತಲಪಾಡಿವರೆಗೆ ಬಸ್‌ನಲ್ಲಿ ಬಂದು ಅಲ್ಲಿ ಇಳಿದಿದ್ದರು. ಅಲ್ಲಿಂದ ಕೋಟೆಕಾರು ಕಡೆಗೆ ತೆರಳಲು ಮಂಗಳೂರು ಸಿಟಿ ಬಸ್ ಏರಲು ರಾಷ್ಟ್ರೀಯ ಹೆದ್ದಾರಿಯನ್ನು ದಾಟುವಾಗ ದುರ್ಘಟನೆ ಸಂಭವಿಸಿದೆ.
ಕೇರಳದ ಕಡೆಯಿಂದ ಕಲ್ಲು ಸಾಗಿಸಿಕೊಂಡು ಅತಿವೇಗದಿಂದ ಧಾವಿಸಿ ಬಂದ ಲಾರಿ ಟೋಲ್ ಗೇಟ್ ಬಳಿ ಹೆದ್ದಾರಿಯನ್ನು ದಾಟುತ್ತಿದ್ದ ವಸಂತ್ ಅವರಿಗೆ ಢಿಕ್ಕಿ ಹೊಡೆದಿತ್ತು. ತಲೆಗೆ ಗಂಭೀರ ಗಾಯಗೊಂಡ ಅವರನ್ನು ಟೋಲ್ ಸಿಬ್ಬಂದಿ ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ದಾರಿ ಮಧ್ಯೆ ಅವರು ಕೊನೆಯುಸಿರೆಳೆದರು.
ಮಂಗಳೂರು ದಕ್ಷಿಣ ಸಂಚಾರ ಠಾಣಾ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದುಕೊಂಡು, ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರಿಗೆ ಪತ್ನಿ, ಮೂವರು ಪುತ್ರಿಯರು ಹಾಗೂ ಒಬ್ಬ ಪುತ್ರ ಇದ್ದಾರೆ. ಮೂವರೂ ಶಾಲಾ ವಿದ್ಯಾರ್ಥಿಗಳು.
2 ತಿಂಗಳಲ್ಲಿ ಮೂವರು ಸಹೋದರರ ಸಾವು!
ವಸಂತ್ ಕುಮಾರ್ ರೈ ಕುಟುಂಬದ ಮೂವರು ಎರಡು ತಿಂಗಳ ಅಂತರದಲ್ಲಿ ಸಾವಿಗೀಡಾಗಿದ್ದಾರೆ. ಮುಂಬೈನಲ್ಲಿದ್ದ ಅವರ ಸಹೋದರ ಸದಾನಂದ ರೈ ಅವರು ಕ್ಯಾನ್ಸರ್‌ನಿಂದ ತಿಂಗಳ ಹಿಂದೆ ಕೊನೆಯುಸಿರೆಳೆದಿದ್ದರು. ಅವರ ಮಕ್ಕಳು ಸೋಮವಾರ ರಾತ್ರಿ ರೈಲಿನಲ್ಲಿ ಮುಂಬೈಗೆ ಪ್ರಯಾಣಿಸುವವರಿದ್ದರು. ಅವರನ್ನು ಭೇಟಿಯಾಗುವ ಸಲುವಾಗಿ ವಸಂತ್ ರೈ ಕೋಟೆಕಾರಿಗೆ ತೆರಳುತ್ತಿದ್ದರು. ಇನ್ನೊಬ್ಬ ಸಹೋದರ ಚಂದ್ರಹಾಸ್ ರೈ 17 ದಿನಗಳ ಹಿಂದೆ ಕ್ಯಾನ್ಸರ್‌ಗೆ ಬಲಿಯಾಗಿದ್ದರು. ಒಂದೇ ಕುಟುಂಬದ ಮೂವರನ್ನು ಕಳೆದುಕೊಂಡ ಅವರ ಕುಟುಂಬ ಶೋಕತಪ್ತವಾಗಿದೆ.