ಮಂಗಳೂರು: ಖ್ಯಾತ ಯಕ್ಷಗಾನ ಮತ್ತು ತಾಳೆ-ಮದ್ದಳೆ ಕಲಾವಿದ, ಮಾಜಿ ಶಾಸಕ ಕುಂಬ್ಳೆ ಸುಂದರ ರಾವ್ (88 ವರ್ಷ) ಅವರು ಬುಧವಾರ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಯಕ್ಷಗಾನದ ತೆಂಕತಿಟ್ಟು ಶೈಲಿಯ ಪ್ರಸಿದ್ದ ಕಲಾವಿದರಾಗಿದ್ದ ಇವರು ಸುರತ್ಕಲ್, ಧರ್ಮಸ್ಥಳ ಮತ್ತು ಇರಾ ಯಕ್ಷಗಾನ ಮೇಳಗಳಲ್ಲಿ ಕಲಾವಿದರಾಗಿ ಕೆಲಸ ಮಾಡಿದ್ದರು. ತಾಳಮದ್ದಳೆ ಮತ್ತು ಬಯಲಾಟ ಯಕ್ಷಗಾನದ ಈ ಎರಡೂ ವಿಭಾಗಗಳಲ್ಲೂ ಇವರು ಎತ್ತಿದ್ದ ಕೈ.
1994 ರಿಂದ 1999 ರವರೆಗೆ ಸುರತ್ಕಲ್ ಕ್ಷೇತ್ರದಿಂದ ಹತ್ತನೇ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿದ್ದರು. ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. ಮಂಗಳೂರು ವಿಶ್ವವಿದ್ಯಾನಿಲಯದ ಪಿ.ದಯಾನಂದ ಪೈ ಮತ್ತು ಪಿ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದಿಂದ 2018–2019ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಇವರಿಗೆ ಸಂದಿವೆ.
ಸುಂದರ್ ರಾವ್ ಅವರು, ಇಬ್ಬರು ಪುತ್ರರು ಮೂವರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಗುರುವಾರ ನೆರವೇರಲಿದೆ. ಕುಂಬಳೆ ಸುಂದರ ರಾವ್ ಅವರ ಕುಟುಂಬದ ವೃತ್ತಿ ಮಗ್ಗ ನೇಯುವುದು ಮತ್ತು ಬಟ್ಟೆಯ ವ್ಯಾಪಾರ. ಮೂಲತ: ಇವರು ಕೇರಳದವರಾದರೂ , ಇವರ ಕುಟುಂಬ ಮಂಗಳೂರಿನಲ್ಲಿ ನೆಲೆಸಿತ್ತು.
ಕುಂಬಳೆ ಸುಂದರ ರಾವ್ ಅವರ ಭರತಾಗಮನದ ಭರತ, ವಿರಾಟ ಪರ್ವದ ಉತ್ತರ ಕುಮಾರ ಕೃಷ್ಣ ಸಂಧಾನದ ಕರ್ಣ, ಕರ್ಣಪರ್ವದ ಕರ್ಣ, ಮಹಾಬ್ರಾಹ್ಮಣದಲ್ಲಿ ವಿಶ್ವಾಮಿತ್ರ (ವಿಶ್ವಾಮಿತ್ರ-ಮೇನಕೆ) ಸಮುದ್ರಮಥನದ ವಿಷ್ಣು, ದಕ್ಷಯಜ್ಞದ ಈಶ್ವರ ವಿವಿಧ ಪ್ರಸಂಗಗಳಲ್ಲಿ, ಭೀಷ್ಮ, ಕೃಷ್ಣ, ರಾಮ, ವಿಷ್ಣು, ಚ್ಯವನ, ಪರೀಕ್ಷಿತ, ಧರ್ಮಸ್ಥಳ ಕ್ಷೇತ್ರ ಮಹಾತ್ಮ್ಯೆಯ ಗೋವಿಂದ ದೀಕ್ಷಿತರ ಪಾತ್ರ ಇವರಿಗೆ ಬಹಳಷ್ಟು ಪ್ರಸಿದ್ಧಿಯನ್ನು ತಂದುಕೊಟ್ಟಿದೆ. ತ್ರಿಪುರ ಮಥನದ ‘ಚಾರ್ವಾಕ’ ಪಾತ್ರ ನಿರ್ವಹಣೆಯಂತೂ ಅದ್ಭುತ.
ಮಂಗಳೂರು ಪಂಪ್ವೆಲ್ ಬಳಿ ಇರುವ ಅವರ ಮನೆಯಲ್ಲಿ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶವಿದೆ. ಸುಂದರ್ ರಾವ್ ಅವರ ಅಗಲುವಿಕೆಗೆ ಯಕ್ಷಗಾನ ಕಲಾರಂಗದ ಇಡೀ ತಂಡ ತೀವ್ರ ಸಂತಾಪ ವ್ಯಕ್ತಪಡಿಸಿದೆ
