ಬೆಂಗಳೂರಿನ ನವೆಂಬರ್ 29: ಕಾಂಗ್ರೆಸ್ ಮುಖಂಡ, ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ (siddaramaiah) ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (CT Ravi) ನೀಡಿದ ಆಕ್ಷೇಪಾರ್ಹ ಹೇಳಿಕೆ ಇದೀಗ ಪೊಲೀಸ್ ಮೆಟ್ಟೀಲೆರಿದೆ. ಕಾಂಗ್ರೆಸ್ ಮುಖಂಡ ಎಸ್.ಮನೋಹರ್ ನೇತೃತ್ವದಲ್ಲಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದೂರು ದಾಖಲಿಸಲಾಗಿದೆ.
ಸಿದ್ರಾಮುಲ್ಲಾ ಖಾನ್ ಅಧಿಕಾರಕ್ಕೆ ಬಂದರೆ ಹಿಂದೂಗಳ ಹತ್ಯೆ ಆಗುತ್ತದೆ ಎಂದು ಬಿಜೆಪಿ ನಾಯಕ ಸಿಟಿ ರವಿ ಹೇಳಿಕೆ ನೀಡಿದ್ದರು. ಈ ರೀತಿ ಹೇಳಿಕೆ ನೀಡುವ ಮೂಲಕ ಕಾನೂನು ಸುವ್ಯವಸ್ಥೆ ಹದಗೆಡಿಸುವ ಪ್ರಯತ್ನವನ್ನು ಅವರು ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದರೆ ಹಿಂದೂಗಳ ಕೊಲೆಯಾಗುತ್ತದೆ ಎಂದಿದ್ದ ಬಿಜೆಪಿ ಶಾಸಕ ಸಿ.ಟಿ.ರವಿ ಅವರ ಆರೋಪ ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ
ಸಿ.ಟಿ.ರವಿ ಹೇಳಿಕೆಗೆ ಚಿತ್ರದುರ್ಗದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ ಹೊರ ಹಾಕಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹಿಂದೂಗಳ ಹತ್ಯೆ ಆಗುತ್ತೆ ಎಂದು ಯಾವ ಆಧಾರದಲ್ಲಿ ಹೇಳುತ್ತಾರೆ. ರಾಜ್ಯದಲ್ಲಿ ಅಶಾಂತಿ ಮೂಡಿಸುವ ಕೆಲಸ ನಡೆದಿದೆ ಎಂದು ದೂರಿದರು.
ಪ್ರಚೋದನಕಾರಿ ಹೇಳಿಕೆ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಭ್ರಷ್ಟಾಚಾರ ಮಾಡಲು, ಮತಗಳ್ಳತನ ಕೇಸ್ ಮುಚ್ಚಿ ಹಾಕಲು ಇಂತಹ ಹೇಳಿಕೆ ನೀಡಲಾಗುತ್ತಿದೆ. ಬಿಜೆಪಿಯವರು ಹಳ್ಳಿಗಳಲ್ಲಿ ಕೋಮುಗಲಭೆ ಹುಟ್ಟು ಹಾಕುತ್ತಿದ್ದಾರೆ. ನಮ್ಮ ಕಡೆಯವರ ಮೇಲೆ ಮಾತ್ರ ಪ್ರಕರಣ ದಾಖಲಿಸುತ್ತಿದ್ದಾರೆ. ಮೊದಲು ಶಾಸಕ ಸಿ.ಟಿ.ರವಿ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಡಿ.ಕೆ.ಶಿವಕುಮಾರ್ ಆಗ್ರಹಿಸಿದರು.
ಸಿಟಿ ರವಿ ಹೇಳಿಕೆ ಕುರಿತು ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರು ಶಾಸಕ ಸಿ.ಟಿ.ರವಿ ಕಮ್ಯೂನಲ್ ಫೆಲೊ. ಅವನಿಗೆ ಉತ್ತರ ಕೊಡಲ್ಲ. ಅವರಿಗೆ ಜಾತ್ಯತೀತ ತತ್ವ ಅರ್ಥ ಆಗಲ್ಲ ಎಂದು ಟಾಂಗ್ ನೀಡಿದರು.