ಹೆಬ್ರಿ: ಪ್ರಥಮ ಪಿಯುಸಿ ಕಲಿಯುತ್ತಿದ್ದ ವಿದ್ಯಾರ್ಥಿನಿಯೊಬ್ಬಳು, ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ವಿಶೇಷ ತರಗತಿಯಲ್ಲಿ ಕಡಿಮೆ ಅಂಕ ಗಳಿಸಿದ್ದು , ಅದಕ್ಕೆ ಉಪನ್ಯಾಸಕರು ತನಗೆ ದಂಡ ವಿಧಿಸಿದರು ಎಂದು ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿ ಜಿಲ್ಲೆಯ ಪೆರ್ಡೂರಿನಲ್ಲಿ ನಡೆದಿದೆ.
ಹೆಬ್ರಿ ಎಸ್ ಆರ್ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ, ಪೆರ್ಡೂರು ನಿವಾಸಿಗಳಾದ ಕಲ್ಪಂಡೆ ಸುರೇಶ್ ಮೆಂಡನ್ ಅವರ ಪುತ್ರಿ ತೃಪ್ತಿ (17) ಆತ್ಮಹತ್ಯೆಗೆ ಮಾಡಿಕೊಂಡ ವಿದ್ಯಾರ್ಥಿನಿ.
ಎಸ್ ಎಸ್ ಎಲ್ ಸಿಯಲ್ಲಿ ಅತ್ಯಧಿಕ ಅಂಕ ಪಡೆದಿದ್ದ ಪ್ರತಿಭಾನ್ವಿತೆಯಾದ ತೃಪ್ತಿ, ಕಾಲೇಜಿನ ರಿಯಾಯಿತಿ ಕೋಟಾದಡಿ, ಪ್ರಥಮ ಪಿಯುಸಿ ಕಾಲೇಜಿಗೆ ಪ್ರವೇಶ ಪಡೆದಿದ್ದಳು. ಉತ್ತಮವಾಗಿ ಓದುತ್ತಿದ್ದ ಆಕೆ ಇತ್ತೀಚೆಗೆ ಕೆಲವು ಪರೀಕ್ಷೆಗಳಲ್ಲಿ ಕಡಿಮೆ ಅಂಕಗಳನ್ನು ಪಡೆದಿದ್ದಳು. ಕಡಿಮೆ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ವಿಶೇಷ ಕೋಚಿಂಗ್ ನೀಡುವ ಉದ್ದೇಶದಿಂದ ಕಾಲೇಜಿನ ಆಡಳಿತ ಮಂಡಳಿ ವಿಶೇಷ ತರಗತಿಗಳನ್ನು ಆಯೋಜಿಸಿತ್ತು. ಅದಕ್ಕೆ ತೃಪ್ತಿಯನ್ನು ಸೇರಿಸಲಾಗಿತ್ತು.
ಅದರಲ್ಲಿ ಭಾಗಿಯಾಗಿದ್ದ ತೃಪ್ತಿ ಅವರು ವಿಶೇಷ ತರಗತಿಯಲ್ಲಿ ನಡೆಸಿದ ಪರೀಕ್ಷೆಯಲ್ಲೂ ಕಡಿಮೆ ಅಂಕ ಪಡೆದಿದ್ದಳು. ಆದರೆ, ಅಲ್ಲಿಯೂ ಆಕೆಗೆ ಕಡಿಮೆ ಅಂಕ ಬಂದಿದ್ದಕ್ಕೆ ಶಿಕ್ಷಕರು ಆಕ್ಷೇಪಿಸಿದ್ದರು ಹಾಗೂ ಎಲ್ಲಾ ವಿದ್ಯಾರ್ಥಿಗಳ ಸಮ್ಮುಖದಲ್ಲಿ ದಂಡ ಕಟ್ಟುವಂತೆ ಶಿಕ್ಷಕರು ಹೇಳಿದ್ದರು ಎನ್ನಲಾಗಿದೆ. ಭಾನುವಾರ ಈ ಘಟನೆ ನಡೆದಿದೆ.
ಭಾನುವಾರದಂದು ಮನೆಗೆ ಬಂದ ಕೂಡಲೇ . ಕಡಿಮೆ ದಂಡ ಕಟ್ಟಿದ್ದಕ್ಕೆ ಹೆಚ್ಚಿಗೆ ದಂಡ ಕಟ್ಟಬೇಕು ಎಂದು ಎಲ್ಲರ ಮುಂದೆ ಹೇಳಿದ್ದರಿಂದ ತನಗೆ ನೋವಾಗಿದೆ ಎಂದು ತನ್ನ ತಂದೆಯ ಮುಂದೆ ಹೇಳಿಕೊಂಡಿದ್ದಳು. ಇದಾದ ನಂತರ, ತಂದೆಯು ತನ್ನ ಪಕ್ಕದಲ್ಲೇ ಇರುವ ದೇವಸ್ಥಾನಕ್ಕೆ ತೆರಳಿದ್ದರು
ಬಳಿಕ ತೃಪ್ತಿ ಮಲಗುವ ಕೋಣೆಯೊಳಗೆ ಹೋಗಿದ್ದಾಳೆ. ಸೀರೆಯನ್ನು ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ
ಮನೆಯ ಮೇಲ್ಛಾವಣಿಗೆ ಅಳವಡಿಸಲಾಗಿದ್ದ ತೊಟ್ಟಿಲು ಕಟ್ಟುವ ಹುಕ್ ಗೆ ಸೀರೆಯನ್ನು ಪೋಣಿಸಿಕೊಂಡು ಅದರ ಮೂಲಕ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಕ್ಕಪಕ್ಕದ ಮನೆಯವರು ಸೀರೆಯನ್ನು ಕತ್ತರಿಸಿ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ
ಮನೆಯಲ್ಲಿ ಯಾರೂ ಇಲ್ಲದಂಥ ಸಂದರ್ಭ ನೋಡಿ, ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಮಗಳ ತಂದೆ ಸುರೇಶ್ ಮೆಂಡನ್ ತಿಳಿಸಿದ್ದಾರೆಂದು ಹಿರಿಯಡ್ಕ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.