ವಿಟ್ಲ: ವಿದ್ಯುತ್ ಶಾಕ್ ತಗುಲಿ ಬಾಲಕನೋರ್ವ ಮೃತಪಟ್ಟ ಘಟನೆ ಮಂಜೇಶ್ವರ ತಾಲೂಕಿನ ಎಣ್ಮಕಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ಯನಡ್ಕದ ಸಾಯ ಎಂಬಲ್ಲಿ ನ.28ರಂದು ರಾತ್ರಿ ನಡೆದಿದೆ.
ಕಾಸರಗೋಡು ಜಿಲ್ಲೆಗೆ ಸೇರಿದ ಎಣ್ಮಕಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ಯನಡ್ಕ ಸಮೀಪದ ಒಂದನೇ ವಾರ್ಡ್ ಸಾಯ ನಿವಾಸಿನಾರಾಯಣ ನಾಯ್ಕ ಎಂಬವರ ಪುತ್ರ ಜಿತೇಶ್ (17 ವ.) ಮೃತ ಬಾಲಕ. ಈತ ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ವನ್ ವಿದ್ಯಾರ್ಥಿ.
ಮೋಟಾರ್ ಪಂಪ್ ಆಫ್ ಮಾಡಲು ತೆರಳಿದ್ದ ಸಂದರ್ಭದಲ್ಲಿ ಬಾಲಕನಿಗೆ ವಿದ್ಯುತ್ ಶಾಕ್ ತಗಲಿದೆ. ಮನೆಯವರು ಹಾಗೂ ಸ್ಥಳೀಯರು ವಿಟ್ಲದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ ಎಂದು ಬಾಲಕನ ಮನೆಯವರು ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಆದರೇ ಹಂದಿ ಹಿಡಿಯಲು ಅಕ್ರಮವಾಗಿ ಗದ್ದೆಯಲ್ಲಿ ವಿದ್ಯುತ್ ಅಳವಡಿಸುರುವುದೇ ಘಟನೆಗೆ ಕಾರಣವೆಂದು ಸ್ಥಳೀಯವಾಗಿ ಆರೋಪಗಳು ಕೇಳಿ ಬಂದಿದ್ದು, ಪೊಲೀಸರು ಸೂಕ್ತ ಕ್ರಮಕೈಗೊಳ್ಳಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.
ಮೃತದೇಹವನ್ನು ವಿಟ್ಲ ಸಮುದಾಯ ಆರೋಗ್ಯಕೇಂದ್ರದ ಶವಗಾರದಲ್ಲಿ ಇಡಲಾಗಿದ್ದು, ಬದಿಯಡ್ಕ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಮೃತನು ತಂದೆ ನಾರಾಯಣ ನಾಯ್ಕ, ತಾಯಿ ಪದ್ಮಾವತಿ ಎಂಬಿವರನ್ನು ಅಗಲಿದ್ದಾರೆ. ಈತನ ಓರ್ವ ಸಹೋದರಿ ಹರಿಣಾಕ್ಷಿ ಈ ಹಿಂದೆಯೇ ನಿಧನರಾಗಿದ್ದರು