ಉಡುಪಿ: ಮಾಹೆ ವಿಶ್ವವಿದ್ಯಾಲಯದ ಎಂಐಟಿ ಕಾಲೇಜಿನಲ್ಲಿ (MIT College) ಪ್ರಾಧ್ಯಾಪಕರೊಬ್ಬರು (Professor) ತರಗತಿ ಸಮಯದಲ್ಲಿ ಮುಸ್ಲಿಂ ವಿದ್ಯಾರ್ಥಿಗೆ `ಟೆರರಿಸ್ಟ್’ (Terrorist) ಎಂದು ನಿಂದನೆ ಮಾಡಿದ ಆರೋಪ ಕೇಳಿ ಬಂದಿದೆ.ಈ ಬಗೆಗಿನ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ (Social Media) ದೊಡ್ಡ ಸಂಚಲನ ಮೂಡಿಸುತ್ತಿದೆ. ವಿದ್ಯಾರ್ಥಿಯನ್ನು ಅವಹೇಳನಕಾರಿಯಾಗಿ ಸಂಭೋಧಿಸಿದ್ದಾರೆಂದು ಹೇಳಲಾಗುತ್ತಿರುವ ಪ್ರಾಧ್ಯಾಪಕರನ್ನು ವಿಶ್ವವಿದ್ಯಾಲಯ ಅಮಾನತುಗೊಳಿಸಿದ್ದು, ತನಿಖೆಗೆ ಆದೇಶಿಸಿದೆ
ಇದೇ ತಿಂಗಳ ನವೆಂಬರ್ 26ರಂದು ಘಟನೆ ನಡೆದಿದ್ದು, ವಿದ್ಯಾರ್ಥಿಗಳೊಂದಿಗೆ (Students) ಮಾತನಾಡುವಾಗ ಮುಸ್ಲಿಮರು ಟೆರರಿಸ್ಟ್ಗಳು ಎಂಬ ಅರ್ಥದಲ್ಲಿ ಪ್ರೊಫೆಸರ್ (Professor) ಹೇಳಿದ್ದಾರೆ ಎನ್ನಲಾಗಿದೆ , ಆ ಕೂಡಲೇ ಪ್ರೊಫೆಸರ್ ಮಾತಿಗೆ ತರಗತಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ ವಿದ್ಯಾರ್ಥಿ, ಮುಸ್ಲಿಂ ಕಮ್ಯೂನಿಟಿಯನ್ನು (Muslim Community) ಟೆರರಿಸ್ಟ್ ಎಂದು ಕರೆಯಬೇಡಿ, ಅನಗತ್ಯವಾಗಿ ಈ ರೀತಿ ಮಾತನಾಡಬೇಡಿ ಎಂದಿದ್ದಾನೆ.
ಬಳಿಕ ಪ್ರಾಧ್ಯಾಪಕರು ವಿದ್ಯಾರ್ಥಿ ತನ್ನ ಮಗನಂತೆ ಎಂದು ಹೇಳಿದ್ದಾರೆ. ಇದನ್ನು ಪ್ರಶ್ನಿಸಿದ ವಿದ್ಯಾರ್ಥಿ `ನೀವು ನಿಮ್ಮ ಮಗನಿಗೆ ಹೀಗೆ ಮಾತನಾಡುತ್ತೀರಾ? ನೀವು ಅವನನ್ನು ಭಯೋತ್ಪಾದಕ ಎಂದು ಕರೆಯುತ್ತೀರಾ? ನೀವು ಇಷ್ಟು ಜನರ ಮುಂದೆ ನನ್ನನ್ನು ಹಾಗೆ ಕರೆಯುತ್ತೀರಿ? ಇದು ತರಗತಿ, ನೀವು ವೃತ್ತಿಪರರಾಗಿ ಕಲಿಸುತ್ತಿದ್ದೀರಿ, ಮುಸ್ಲಿಮನಾಗಿ ದಿನನಿತ್ಯ ಇದನ್ನು ಎದುರಿಸುವುದು ತಮಾಷೆಯಲ್ಲ. ನೀವು ನನ್ನನ್ನು ಹಾಗೆ ಕರೆಯಬೇಡಿ” ಎಂದು ವಿದ್ಯಾರ್ಥಿ ವಾಗ್ವಾದಕ್ಕಿಳಿದಿದ್ದಾನೆ. ವಿದ್ಯಾರ್ಥಿ ಆಕ್ಷೇಪಿಸುತ್ತಿದ್ದಂತೆ ಪ್ರೊಫೆಸರ್ ವಿಷಾದ ವ್ಯಕ್ತಪಡಿಸಿ, ಸ್ಥಳದಲ್ಲೇ ಕ್ಷಮೆ ಕೋರಿದ್ದಾರೆ.
ನೀವು ಕ್ಷಮೆ ಕೇಳಿದ ತಕ್ಷಣ ಮಾಡಿರುವ ಆರೋಪ ಬದಲಾಗಲ್ಲ ಎಂದು ವಿದ್ಯಾರ್ಥಿ ಆಕ್ಷೇಪಿಸಿದ್ದಾನೆ. ಈ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ , ಪ್ರಾಧ್ಯಾಪಕರ ವರ್ತನೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಇದಾದ ಬಳಿಕ ಉಪನ್ಯಾಸಕನ ವಿರುದ್ಧ ಮಾಹೆ ವಿಶ್ವವಿದ್ಯಾನಿಲಯ ಕ್ರಮ ಕೈಗೊಂಡಿದೆ. ವಿವಿಯ ಉಪನ್ಯಾಸಕನನ್ನು ಅಮಾನತುಗೊಳಿಸಿ ಆಂತರಿಕ ತನಿಖೆಗೆ ನಿರ್ಧರಿಸಿದೆ. ವಿದ್ಯಾರ್ಥಿಗೆ ಕೌನ್ಸಿಲಿಂಗ್ ಮೂಲಕ ಸಾಂತ್ವನ ಹೇಳಿದೆ.
ಈ ಕುರಿತಾಗಿ ಮಾತನಾಡಿರುವ ವಿವಿ ಸಾರ್ವಜನಿಕ ಸಂಪರ್ಕ ವಿಭಾಗದ ನಿರ್ದೇಶಕ ಎಸ್.ಪಿ. ಕರ್, ಎಲ್ಲಾ ಧರ್ಮಗಳಿಗೆ ಸಮಾನ ಗೌರವ ಕೊಡುತ್ತೇವೆ. ವಸುದೈವ ಕುಟುಂಬ ಎನ್ನುವ ನಾವು ಇಂತಹ ಘಟನೆಯನ್ನು ಖಂಡಿಸುತ್ತೇವೆ. ನಾವು ಸ್ವಯಂಪ್ರೇರಿತ ಕ್ರಮ ತೆಗೆದುಕೊಂಡಿದ್ದೇವೆ. ಘಟನೆ ಬಳಿಕ ವಿದ್ಯಾರ್ಥಿಯೂ ಆತಂಕಕ್ಕೊಳಗಾಗಿದ್ದಾನೆ. ಈ ವೀಡಿಯೋವನ್ನು ತರಗತಿಯ ಒಳಗಿನ ವಿದ್ಯಾರ್ಥಿಗಳೇ ಚಿತ್ರೀಕರಣ ಮಾಡಿರುವ ಸಾಧ್ಯತೆಯಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.