ಸುಬ್ರಹ್ಮಣ್ಯ: ದಕ್ಷಿಣ ಭಾರತದ ಪ್ರಸಿದ್ದ ನಾಗ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನ.21 ರಿಂದ ಚಂಪಾಷಷ್ಠಿ ಮಹೋತ್ಸವದ ಧಾರ್ಮಿಕ ವಿಧಿ ವಿಧಾನಗಳು ಆರಂಭಗೊಂಡಿದೆ. ರವಿವಾರ ರಾತ್ರಿ ಹೂವಿನ ತೇರಿನ ಉತ್ಸವ ಜರಗಿತು. ನ.28ರಂದು (ಇಂದು) ರಾತ್ರಿ ಪಂಚಮಿ ರಥೋತ್ಸವ ಹಾಗೂ ತೈಲಾಭ್ಯಂಜನ ನಡೆಯಲಿದೆ. ನ. 29ರಂದು ಪ್ರಾತಃಕಾಲ ಚಂಪಾಷಷ್ಠಿ ಮಹಾರಥೋತ್ಸವ ಜರಗಲಿದೆ.
ಇಂದು ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದು ರಾತ್ರಿ ದೇವರ ಬಲಿ ಉತ್ಸವ ನಡೆಯಲಿದೆ. ಆ ಬಳಿಕ ದೇವರು ರಾತ್ರಿ ವೇಳೆ ಪಂಚಮಿ ರಥಾರೂಡರಾಗಲಿದ್ದು ಸಂಭ್ರಮದ ಪಂಚಮಿ ರಥೋತ್ಸವ ನಡೆಯಲಿದೆ. ರಥವು ರಥಬೀದಿಯಲ್ಲಿ ಸಾಗಿ ಕಾಶಿಕಟ್ಟೆಯವರೆಗೆ ತೆರಳಿ ಅಲ್ಲಿ ಅಲ್ಲಿ ಪೂಜೆ ನೆರವೇರಲಿದೆ.
ನ.29 ರ ಮುಂಜಾನೆ ದೇವರ ಹೊರಾಂಗಣ ಸುತ್ತು ಸುತ್ತಿ ಬಳಿಕ, ದೇವರ ಮಹಾರಥ ವನ್ನೇರಲಿದ್ದು ಅದ್ದೂರಿಯ ಬ್ರಹ್ಮರಥೋತ್ಸವ ನಡೆಯಲಿದೆ. ರಾಜ ಗೋಪುರ ಹೊರಟ ರಥ ರಥಬೀದಿಯಲ್ಲಿ ಸಾಗಲಿದೆ. ಅಲ್ಲಿಂದ ಮತ್ತೆ ಸ್ವಸ್ಥಾನ ಬಂದು ಅಲಂಕರಿಸಲಿದೆ.

ಈಗಾಗಲೇ ಎಲ್ಲಾ ಸಿದ್ಧತೆಗಳು ಪೂರ್ಣ ಗೊಂದಿದ್ದು ಸುಬ್ರಹ್ಮಣ್ಯ ಪೇಟೆ ದೀಪಾಂಲಕೃತ ಗೊಂಡಿದೆ. ಕೆ ಎಸ್ ಆರ್.ಟಿ ಸಿ ಎದುರು ಭಾಗದಲ್ಲಿ ನೂರಾರು ಅಂಗಡಿಗಳು ಇರಲಿದ್ದು ಈಗಾಗಲೇ ಏಲಂ ಕಾರ್ಯ ಮುಗಿದಿದೆ. ಹಿಂದಿನ ಪ್ರಾಥಮಿಕಶಾಲಾ ಮೈದಾನದಲ್ಲಿ ಮಕ್ಕಳ ಮನರಂಜನೆಗೆ ಸಂಭಂಧಿಸಿದ ವಿವಿಧ ಮಳಿಗೆಗಳು ಬಂದಿವೆ.

ಎಡೆಸ್ನಾನ ಸೇವೆ
ಕ್ಷೇತ್ರದಲ್ಲಿ ಚಂಪಾಷಷ್ಠಿ ಆಚರಣೆ ನಡೆಯುತ್ತಿದ್ದು ಭಕ್ತರು ಎಡೆಸ್ನಾನ ಸೇವೆ ನೆರವೇರಿಸಿದರು.ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳ ಬಳಿಕ ಎಡೆಸ್ನಾನ ಸೇವೆಗೆ ಅವಕಾಶ ನೀಡಲಾಗಿದೆ. ಒಟ್ಟು 116 ಮಂದಿ ಭಕ್ತರು ಎಡೆಸ್ನಾನ ಸೇವೆಯನ್ನು ಸ್ವಯಂ ಪ್ರೇರಿತವಾಗಿ ನೆರವೇರಿಸಿದರು.

ದೇವರ ನೈವೇದ್ಯವನ್ನು ದೇವಸ್ಥಾನದ ಹೊರಾಂಗಣದಲ್ಲಿ ಗೋವಿಗೆ ತಿನ್ನಿಸಲಾಗುತ್ತದೆ. ಗೋವು ತಿಂದು ಉಳಿಸಿದ ಎಲೆಗಳ ಮೇಲೆ ಭಕ್ತರು ಉರುಳು ಸೇವೆ ನೆರವೇರಿಸುತ್ತಾರೆ. ಚರ್ಮವ್ಯಾಧಿ ಮತ್ತು ಇತರ ರೋಗಗಳಿದ್ದವರು ಈ ಸೇವೆ ನೆರವೇರಿಸಿದರೆ ರೋಗ ಉಪಶಮನವಾಗುತ್ತದೆ ಅನ್ನೋ ನಂಬಿಕೆ ಭಕ್ತರಲ್ಲಿದೆ.









ಫೋಟೊ ಕೃಪೆ : ಕುಕ್ಕೆ ಸುಬ್ರಹ್ಮಣ್ಯ ಫೇಸ್ ಬುಕ್ ಪೇಜ್