ಉಡುಪಿ, ನ.26: ಈವರೆಗೆ ಸುರತ್ಕಲ್‌ನಲ್ಲಿ ಕಾರ್ಯಾಚರಿಸುತಿದ್ದ ಟೋಲ್‌ಗೇಟ್‌ನ್ನು ಮುಚ್ಚಿ (Surathkal Toll) , ಅದರ ಶುಲ್ಕವನ್ನು ಹೆಜಮಾಡಿ ಟೋಲ್ (Hejamadi Toll) ಶುಲ್ಕಕ್ಕೆ ಸೇರ್ಪಡೆ ಮಾಡುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ಧಾರವನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ವಿರೋಧಿಸಿದ್ದಾರೆ.
ಇದು ಖಂಡಿತ ತಪ್ಪು. ಸುರತ್ಕಲ್ ಟೋಲ್‌ನ್ನು ಮುಚ್ಚಿ, ಅಲ್ಲಿ ವಸೂಲಿ ಮಾಡುತಿದ್ದ ಶುಲ್ಕವನ್ನು ಹೆಜಮಾಡಿ ಟೋಲ್ ಶುಲ್ಕಕ್ಕೆ ಸೇರಿಸುವುದು ಸರಿಯಲ್ಲ. ಏಕೆಂದರೆ ಸುರತ್ಕಲ್ ಟೋಲ್‌ಗೇಟ್‌ಗೂ, ಹೆಜಮಾಡಿ ಟೋಲ್‌ಗೂ ಯಾವುದೇ ಸಂಬಂಧವಿಲ್ಲ. ಹೆಜಮಾಡಿಯ ಟೋಲ್‌ನ್ನು ನವಯುಗ ಕಂಪೆನಿ ಸಂಗ್ರಹಿಸುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಉಡುಪಿ ಜಿಲ್ಲೆಯಲ್ಲಿ ಈಗ ಮೂರು ಕಡೆಗಳಲ್ಲಿ ಟೋಲ್ ಸಂಗ್ರಹ ನಡೆಯುತ್ತಿದೆ. ಸುರತ್ಕಲ್ ಟೋಲ್‌ನ್ನು ಬಂಟ್ವಾಳಕ್ಕೆ ಸಂಬಂಧಿಸಿದ ಕಂಪೆನಿ ಪಡೆಯುತ್ತಿದ್ದು, ನವಯುಗ ಅಲ್ಲಿ ಯಾವ ಕಾಮಗಾರಿಯನ್ನೂ ಮಾಡಿಲ್ಲ. ಈಗ ನವಯುಗ ಅಲ್ಲಿನ ಟೋಲ್‌ನ್ನು ಉಡುಪಿಯ ಜನತೆಯಿಂದ ಪಡೆಯುವುದು ಸರಿಯಲ್ಲ ಎಂದರು.
ಇದರಿಂದ ತೊಂದರೆಗೊಳಗಾಗುವುದು ಉಡುಪಿಯ ಜನತೆ. ಅವರೀಗ ತಮ್ಮದಲ್ಲದ ತಪ್ಪಿಗೆ ಅಧಿಕ ಶುಲ್ಕ ಪಾವತಿಸುವಂತಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಈ ನಿರ್ಧಾರವನ್ನು ವಿರೋಧಿಸಿ ತಾನು ಕೇಂದ್ರ ಸರಕಾರಕ್ಕೆ, ನಮ್ಮ ಸಂಸದರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ನಿರ್ಧಾರವನ್ನು ರದ್ದು ಪಡಿಸುವಂತೆ ಮನವಿ ಮಾಡುವುದಾಗಿ ತಿಳಿಸಿದರು.
ಹೆಜಮಾಡಿಯಲ್ಲಿ ಇದರ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಇದರಲ್ಲಿ ಭಾಗವಹಿಸುತ್ತೀರಾ ಎಂದು ಪ್ರಶ್ನಿಸಿದಾಗ, ಅದನ್ನು ಯಾರು ಮಾಡುತಿದ್ದಾರೆ, ಅವರ ಉದ್ದೇಶವೇನು ಎಂಬುದನ್ನು ತಿಳಿದುಕೊಳ್ಳಬೇಕಿದೆ ಎಂದರು.