ಮಂಗಳೂರು, ನ 27 : ಮಂಗಳೂರು ಕುಕ್ಕರ್ ಸ್ಪೋಟದ (Mangalore Blast) ವಿಚಾರವಾಗಿ ಕಕ್ಕಿಂಜೆಯಲ್ಲಿ ಉಪಗ್ರಹ ಕರೆಗಳು ರಿಂಗಣಿಸಿರುವ ವದಂತಿಗಳ ಕುರಿತು ಧರ್ಮಸ್ಥಳ ಪೊಲೀಸರು ಪರಿಶೀಲನೆ ನಡೆಸಿದ್ದು, ಉಪಗ್ರಹ ಕರೆಗಳು ಬಂದಿರುವ ಬಗ್ಗೆ ದೃಢಗೊಂಡಿಲ್ಲ (Satellite Phone) ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಭಗವಾನ್ ಸೋನಾವಾನೆ ಭಾನುವಾರ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, ಸಾಮಾನ್ಯವಾಗಿ ಸ್ಥಳೀಯವಾಗಿ ವಾಸವಾಗಿರುವ ಮಂದಿ ಆನೆಗಳನ್ನು ಹೆದರಿಸಲು ಪಟಾಕಿಗಳನ್ನು ಬಳಸುತ್ತಾರೆ. ಸ್ಪೋಟದ ಸದ್ದು ಇದರಿಂದಲೂ ಕೇಳಿರುವ ಸಾಧ್ಯತೆ ಇದೆ. ಉಪಗ್ರಹ ಕರೆಗಳು ಬಂದ ಬಗ್ಗೆ ನಿರ್ದಿಷ್ಟ ಮಾಹಿತಿಗಳು ದೃಢಪಟ್ಟಿಲ್ಲ ಎಂದು ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಪೋಟಕ್ಕೂ ಮುನ್ನ ಬೆಳ್ತಂಗಡಿಯ ಬೇಂದ್ರಾಳದ ಬಾರೆಯಿಂದ ನಿಷೇಧಿತ ಸ್ಯಾಟಲೈಟ್ ಫೋನ್ ಕರೆ ಕುರಿತು ಮಾಹಿತಿಗಳು ಹರಿದಾಡಿದ್ದವು.
ಈ ಹಿನ್ನೆಲೆಯಲ್ಲಿ ಅಲ್ಲಿ ಧರ್ಮಸ್ಥಳ ಪೊಲೀಸರು ಶನಿವಾರ ಪರಿಶೀಲನೆ ನಡೆಸಿದ್ದಾರೆ. ಆದರೆ ಅಂತಹ ಯಾವುದೇ ಸುಳಿವುಗಳು ಪೊಲೀಸರಿಗೆ ಆ ಪ್ರದೇಶದಲ್ಲಿ ಸಿಕ್ಕಿಲ್ಲ ಎಂದರು.