ಮಂಗಳೂರು: ದೈವದ ಕಥೆ ಹೊಂದಿರುವ ಕಾಂತಾರ ಚಿತ್ರ ಸಖತ್ ಹಿಟ್ ಆದೊಡನೆ ರಾಜ್ಯದ ಮೂಲೆ ಮೂಲೆಗಳಲ್ಲಿ ದೈವಗಳ ಹೆಸರಲ್ಲಿ ಹಣ ಮಾಡುವ ದಂಧೆಯೂ ಜೋರಾಗಿದೆ. ಈ ದಂಧೆಗೆ ಇಳಿದವರ ವಿರುದ್ದ ಮಂಗಳೂರಿನ ಕೊರಗಜ್ಜನ (Koragajja) ಮೂಲಸ್ಥಳಕ್ಕೆ ಭಕ್ತರು ಮೊರೆ ಹೋಗಿದ್ದಾರೆ.
ಮಂಗಳೂರಿನ ಕುತ್ತಾರು ಹಲವು ಸಂಘಟನೆಗಳ ನೇತೃತ್ವದಲ್ಲಿ ಕೊರಗಜ್ಜನ ಆದಿಕ್ಷೇತ್ರದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಿದರು.
ತುಳುನಾಡ ದೈವಾರಾಧನ ಸಂರಕ್ಷಣಾ ಯುವವೇದಿಕೆ, ದೈವಾರಾಧನ ಸಮಿತಿ ಬೆಳ್ತಂಗಡಿ, ಹಿಂದೂ ಸಂರಕ್ಷಣಾ ಸಮಿತಿ ಮಂಗಳೂರು ಹಾಗೂ ಮೈಸೂರು ಮೂಲದ ದೈವಾರಾಧಕರಿಂದ ಕುತ್ತಾರುನಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಮೈಸೂರು, ಬೆಂಗಳೂರಿನಲ್ಲಿ ಕೊರಗಜ್ಜ ದೈವದ ಹೆಸರಲ್ಲಿ ದೈವದ ಕೋಲ, ಸೇವೆಯ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಲೂಟಿ ಆರೋಪ ಕೇಳಿಬಂದಿದೆ.
ದೈವ ನಿಂದನೆ ಮಾಡಿ ದಂಧೆ ಮಾಡುವವರ ವಿರುದ್ದ ಕಾನೂನು ಹೋರಾಟಕ್ಕೆ ನಿರ್ಧರಿಸಿದ್ದಾರೆ.
ಆದಿ ಸ್ಥಳ ಮತ್ತು ತುಳುನಾಡು ಹೊರತು ಪಡಿಸಿ ಕೊರಗಜ್ಜನ ಪ್ರತಿಷ್ಠೆಗೆ ಅವಕಾಶ ಇಲ್ಲ , ಕುತ್ತಾರು ಕೊರಗಜ್ಜನ ಸನ್ನಿದಾನ ಹೊರತು ಪಡಿಸಿ ಬೇರೆ ಮೂಲಸ್ಥಾನವಿಲ್ಲ ಎಂದರು.
ಹೀಗಿದ್ದರೂ ರಾಜ್ಯದ ಕೆಲವೆಡೆ ಕೊರಗಜ್ಜನ ಹೆಸರಲ್ಲಿ ದಂಧೆ ನಡೆಯುತ್ತಿದೆ ಎಂದು ಮೈಸೂರು ಮೂಲದ ಕೆಲ ಭಕ್ತರಿಂದಲೂ ಆದಿ ಸ್ಥಳದಲ್ಲಿ ಪ್ರಾರ್ಥನೆ ನಡೆಯಿತು.
ಕೊರಗಜ್ಜ ಆದಿಸ್ಥಳ ಬಿಟ್ಟು ಬೇರೆ ಕಡೆ ಆರಾಧನೆ ವ್ಯವಹಾರದ ಉದ್ದೇಶ ಎಂದು ಮೈಸೂರಿನ ಭಕ್ತರು ಹೇಳಿದರು , ಇದನ್ನ ತಡೆಯಲು ಯತ್ನಿಸಿದ ಮೈಸೂರಿನ ಕೆಲವರಿಗೆ ಕೊಲೆ ಬೆದರಿಕೆ ಹಾಕಲಾಗಿದೆ ಎಂದರು.
ಕೆಲವು ಕಡೆ ದೈವದ ಜಾಗಕ್ಕೆ ಎಂದು ಹಣ ಸಂಗ್ರಹಕ್ಕೆ ಇಳಿದಿದ್ದಾರೆ. ದೈವ ತನಗೆ ಬೇಕಾದ ಜಾಗವನ್ನು ತಾನೇ ಪಡೆಯುತ್ತದೆ ಈ ರೀತಿ ಖರೀದಿಗೆ ಇಳಿದ ಚರಿತ್ರೆಯಿಲ್ಲ ಎಂದು ಕೆಲವು ಭಕ್ತರು ಹೇಳಿದರು.
ಸಿನಿಮಾ ಮತ್ತು ಸಾಮಾಜಿಕ ತಾಣಗಳ ಕಾರಣದಿಂದ ಈ ದಂಧೆ ನಡೀತಾ ಇದೆ , ಇದನ್ನ ನಿಲ್ಲಿಸದೇ ಇದ್ದರೆ ಉಗ್ರ ಹೋರಾಟದ ಬಗ್ಗೆ ಈ ಸಂದರ್ಭ ಕರಾವಳಿಯ ದೈವಾರಾಧಕರು ಎಚ್ಚರಿಕೆ ನೀಡಿದರು.
ಕಾಂತಾರಾ ಚಿತ್ರತಂಡದ ವಿರುದ್ಧವೂ ದೈವಾರಾಧಕರ ಆಕ್ರೋಶ ವ್ಯಕ್ತವಾಯಿತು. ದೈವಾರಾಧನೆ ಯನ್ನು ಬಳಸಿ ಹಣ ಮಾಡಿದ್ದಾರೆ.ಆದರೆ ದೈವಾರಾಧನೆ ಗೆ ಅಪಚಾರ ಆದಾಗ ತುಟಿ ಬಿಚ್ಚಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಬೆಳ್ತಂಗಡಿಯಲ್ಲಿ ಮುಹೂರ್ತ ಕಂಡ ಕೊರಗಜ್ಜನ ಕಥೆಯಾದರಿತ ಚಿತ್ರ ಹಾಗೂ ದೈವಾರಾಧನೆ ಗೆ ಸಂಬಂಧಿಸಿದ ಯಾವುದೇ ಚಿತ್ರ ಬಂದರೂ ವಿರೋಧ ವ್ಯಕ್ತಪಡಿಸುವ ಬಗ್ಗೆ ದೈವಾರಾಧಕರು ಎಚ್ಚರಿಕೆ ನೀಡಿದರು.