ಪುತ್ತೂರು ತಾಲೂಕಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜ್ ಸ್ಥಾಪನೆಯಾಗಬೇಕೆಂಬ ಕೂಗು ಇಂದು ನಿನ್ನೆಯದಲ್ಲ . ಬಹಳಷ್ಟು ವರ್ಷಗಳಿಂದ ಈ ಬಗ್ಗೆ ಇಲ್ಲಿನ ಸಾಮಾಜಿಕ ಕಾರ್ಯಕರ್ತರು, ಸ್ಥಳೀಯರು ಧ್ವನಿ ಎತ್ತುತ್ತಿದ್ದರು . ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ಆಗಾಗ ಚರ್ಚೆಯಾಗುತಿತ್ತು . ಆದರೇ ಇದೀಗ ಸಮಾನ ಮನಸ್ಕರ ಒಕ್ಕೂಟವೊಂದು ಈ ಆಶಯವನ್ನು ಜಾರಿಗೊಳಿಸುವ ಉದ್ಧೇಶದಿಂದ ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿಯನ್ನು ರಚಿಸಿದ್ದಾರೆ . ಸಮಾನ ಮನಸ್ಕರ ತಂಡವೂ ಕಳೆದೆರಡು ವಾರದಲ್ಲಿ ಎರಡು ಬಾರಿ ಸಭೆ ಸೇರಿ ಚರ್ಚಿಸಿ ಹೋರಾಟ ಸಮಿತಿಯನ್ನು ರಚಿಸಿದೆ.
ಹೋರಾಟ ಸಮಿತಿಯ ಮೂಲಕ ಮೆಡಿಕಲ್ ಕಾಲೇಜ್ ಸ್ಥಾಪನೆಗೆ ಜನಾಂದೋಲನ , ಪಿ.ಪಿ.ಪಿ. ಯೋಜನೆಗೆ ವಿರೋಧ ಮತ್ತು ಪೂರ್ಣ ಪ್ರಮಾಣದ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಸರಕಾರದ ಮೇಲೆ ಒತ್ತಡ ಹೇರುವ ತೀರ್ಮಾನಕ್ಕೆ ಬರಲಾಗಿದೆ.
ಸಮಿತಿಯ ಅಧ್ಯಕ್ಷರಾಗಿ ಎಂ.ಬಿ.ವಿಶ್ವನಾಥ ರೈ , ಗೌರವಾಧ್ಯಕ್ಷರಾಗಿ ಅಣ್ಣಾ ವಿನಯಚಂದ್ರ , ಪ್ರಧಾನ ಕಾರ್ಯದರ್ಶಿಯಾಗಿ ಅಶೋಕ್ ಎಡಮಲೆ , ಸಂಚಾಲಕರಾಗಿ ಲಕ್ಷ್ಮೀಶ ಗಬ್ಲಡ್ಕ ಕಾರ್ಯದರ್ಶಿಯಾಗಿ ರಂಜಿತ್ ಬಂಗೇರ, ಉಪಾಧ್ಯಕ್ಷರುಗಳಾಗಿ ಝೇವಿಯರ್ ಡಿ ಸೋಜ,ಸಂಜೀವ ನಾಯಕ್ ಕಲ್ಲೇಗ , ಬಾಲಕೃಷ್ಣ ಬೋರ್ಕರ್, ಅಶ್ರಫ್ ಕಲ್ಲೇಗ , ಪಿ.ರೂಪೇಶ್ ರೈ , ಕರುಣಾಕರ ಪಲ್ಲತ್ತಡ್ಕ ಸುಳ್ಯ, ಗೌರವ ಸಲಹೆಗಾರರಾಗಿ ಶ್ರೀಮತಿ. ಸ್ವರ್ಣಾ ಭಟ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಚ್.ಮಹಮದ್ ಆಲಿ, ಮೌರಿಸ್ ಮಸ್ಕರೇನಸ್, ಬಾಲಕೃಷ್ಣ ಗೌಡ ಕೆಮ್ಮಾರ,ಮಹೇಶ ಪುಚ್ಚಪ್ಪಾಡಿ, ಚಿನ್ಮಯ ಕೃಷ್ಣ, ಶಷ್ಮಿ ಭಟ್ ಅಜ್ಜಾವರ, ಜಿನ್ನಪ್ಪ ಗೌಡ ಅಲ್ಪೆ ಪಂಜ, ಗೋಪಾಲ್ ಪೆರಾಜೆ, ಚೇತನ್ ಕೆಮ್ಮಾಯಿ, ರಾಜೇಶ್ ಕೃಷ್ಣ ಪ್ರಸಾದ್,ದಿನೇಶ್ ಭಟ್, ಕೆ ಕೆ. ವೆಂಕಟಕೃಷ್ಣ, ರಘು ಹಾಲ್ಕೆರೆ , ಅಮಳ ರಾಮಚಂದ್ರ , ಹಾಗೂ ಸುವಿಚಾರ ಬಳಗದ ಪ್ಯಾಟ್ರಿಕ್ ಸಿಪ್ರಿಯಾನ್ ಮಸ್ಕರೇನ್ಹಸ್ ಆಯ್ಕೆಯಾಗಿದ್ದಾರೆ.

ಕಳೆದ ಶನುವಾರ ಪುತ್ತೂರಿನ ಸ್ವಾಭಿಮಾನಿ ಸೌಹಾರ್ದ ಸಹಕಾರಿ ಬ್ಯಾಂಕ್‌ನ ಸಭಾಂಗಣದಲ್ಲಿ ಮತ್ತೆ ಸಭೆ ಸೇರಿದ ಹೋರಾಟ ಸಮಿತಿಯ ಸಭೆಯಲ್ಲಿ ಹೋರಾಟದ ಮುಂದಿನ ಹಂತಗಳ ಬಗ್ಗೆ ವಿಸ್ತೃತವಾದ ಚರ್ಚೆ ನಡೆಯಿತು. ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದ ಸಮಿತಿಯ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಪುತ್ತೂರಿಗೆ ಒಂದು ಪೂರ್ಣಪ್ರಮಾಣದ ಸರಕಾರಿ ಮೆಡಿಕಲ್ ಕಾಲೇಜು ಅತ್ಯಂತ ಅಗತ್ಯವಾಗಿ ಆಗಬೇಕಾಗಿದ್ದು ಈ ಕುರಿತು ಜನ ಸಂಘಟಿತರಾಗಿ ಹೋರಾಟ ನಡೆಸಿದರೆ ಯಶಸ್ಸು ಖಂಡಿತ ಎಂದು ಹೇಳಿದರು.
“ಈಗಾಗಲೇ ಖಾಸಗೀ ಸಹಭಾಗಿತ್ವದಲ್ಲಿ , ಪಿ.ಪಿ.ಪಿ. (ಪಬ್ಲಿಕ್ ಪ್ರೈವೇಟ್ ಪಾರ್ಟ್‌ನರ್‌ಶಿಪ್) ಪರಿಕಲ್ಪನೆಯಲ್ಲಿ, ಜಿಲ್ಲಾ ವೆನ್ಲಾಕ್ ಆಸ್ಪತ್ರೆಯನ್ನು ಖಾಸಗಿ ಸಂಸ್ಥೆಗೆ ನೀಡಿ, ದ.ಕ. ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸುವ ಹುನ್ನಾರ ನಡೆದಿದ್ದು ಇದು ಜಿಲ್ಲೆಯ ಬಡ ಜನರ ಆರೋಗ್ಯದ ವೆಚ್ಚಗಳ ಮೇಲೆ ತೀವ್ರ ಅಡ್ಡ ಪರಿಣಾಮವನ್ನು ಬೀರಲಿದೆ. ಬಡಜನರ ಸರಕಾರಿ ವೈದ್ಯಕೀಯ ವ್ಯವಸ್ಥೆಯನ್ನು ಖಾಸಗೀ ಒಡೆತನಕ್ಕೆ 60 ವರ್ಷಗಳ ಕಾಲ ಲೀಸ್ ನೀಡಿ ಉಚಿತ ಚಿಕಿತ್ಸೆಯನ್ನು ಕಡಿತಗೊಳಿಸಲು ವ್ಯವಸ್ಥಿತ ಕಾರ್ಯಾಚರಣೆ ನಡೆಯುತ್ತಿದೆ. ಪುತ್ತೂರಿಗೆ ಪಿ.ಪಿ.ಪಿ. ಯೋಜನೆ ಹೊರತಾದ ಪೂರ್ಣ ಪ್ರಮಾಣದ ಸರಕಾರಿ ಮೆಡಿಕಲ್ ಕಾಲೇಜಿಗೆ ನಾವೆಲ್ಲರೂ ಸಂಘಟಿತರಾಗಿ ಹಕ್ಕೊತ್ತಾಯ ನಡೆಸಬೇಕಾಗುದೆ” ಎಂದು ಅವರು ಹೇಳಿದರು
ಸಮಿತಿಯ ಗೌರವಾಧ್ಯಕ್ಷ , ಮಾಜೀ ವಿಧಾನ ಪರಿಷತ್ ಸದಸ್ಯ ಅಣ್ಣಾ ವಿನಯಚಂದ್ರ ಮಾತನಾಡಿ, ಪುತ್ತೂರು, ಸುಳ್ಯ, ಬೆಳ್ತಂಗಡಿ ಮತ್ತು ಬಂಟ್ವಾಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸಂಘ ಸಂಸ್ಥೆಗಳ ಬೆಂಬಲದೊಂದಿಗೆ ಈ ಆಂದೋಲನವನ್ನು ಸಂಘಟಿಸಿ ಜನಾಗ್ರಹವನ್ನು ನಡೆಸುವ ಬಗ್ಗೆ ಮಾಹಿತಿ ನೀಡಿದರು. ಸರಕಾರಿ ಮೆಡಿಕಲ್ ಕಾಲೇಜಿನ ಅವಶ್ಯಕತೆ , ಅದರಿಂದ ಈ ಭಾಗದ ಜನರಿಗಾಗುವ ಉಪಯೋಗಗಳನ್ನು ಅವರು ಸಭೆಗೆ ವಿವರಿಸಿದರು.
ರಾಜಕೀಯ ಒತ್ತಡ, ಸರಕಾರಕ್ಕೆ ಒತ್ತಡ ತರುವುದು ಮತ್ತು ಸರಕಾರಿ ಮೆಡಿಕಲ್ ಕಾಲೇಜು ಪುತ್ತೂರಿಗೆ ಏಕೆ ಬೇಕು ಎಂಬ ಪರಿಕಲ್ಪನೆಯನ್ನು ಜನರಿಗೆ ಮನದಟ್ಟು ಮಾಡಲು ಮುಂದಿನ ದಿನಗಳಲ್ಲಿ ಬೇರೆ ಬೇರೆ ಸ್ವರೂಪದ ಹೋರಾಟ, ಆಗ್ರಹ, ಸಾರ್ವಜನಿಕ ಹಕ್ಕೊತ್ತಾಯ ಸಭೆ ಇತ್ಯಾದಿಗಳನ್ನು ಮಾಡುವರೇ ಸರ್ವಾನುಮತ ದಿಂದ ತೀರ್ಮಾನ ಮಾಡಲಾಯಿತು.
ಪಕ್ಷಾತೀತವಾಗಿ ನಡೆದ ಇಂದಿನ ಸಭೆಯಲ್ಲಿ ಕಾಂಗ್ರೆಸ್, ಜಾತ್ಯಾತೀತ ಜನತಾದಳ, ಆಮ್ ಆದ್ಮಿಪಕ್ಷ, ರೈತ ಸಂಘ ಮತ್ತು ನಿವೃತ್ತ ಅಧಿಕಾರಿಗಳು ಸೇರಿದಂತೆ ಸುಳ್ಯ ಹಾಗೂ ಪುತ್ತೂರಿನ 41 ಜನ ಸಮಾನಮನಸ್ಕರು ಭಾಗವಹಿಸಿದ್ದು ವಿಶೇಷವಾಗಿತ್ತು. ಡಾ. ಬಿ.ಕೆ. ವಿಷುಕುಮಾರ್, ಬಿ.ರಘುನಾಥ್ ರೈ, ಜನಾರ್ಧನ ಬಂಗೇರ, ಸೋಮೇಶ್ವರ ಗೌಡ ಅಲುಂಬುಡ, ಗಣೇಶ್‌ಪ್ರಸಾದ್ ಕಂದಡ್ಕ, ಅಬ್ದುಲ್ ಸಮದ್ , ಎನ್.ಕೆ. ರೈ , ಜಾಹ್ನವಿ ಸಿ.ಕೆ , ಕೋಲ್ಪೆ ಪುರುಷೋತ್ತಮ ಮೊದಲಾದವರು ಸಲಹೆ ಸೂಚನೆಗಳನ್ನು ನೀಡಿ ಭಾಗವಹಿಸಿದರು.