ಮಂಗಳೂರು : ಹಿಂದೂ ಯುವತಿಯೊಂದಿಗೆ ಬಸ್ನಲ್ಲಿ ಒಂದೇ ಸೀಟಿನಲ್ಲಿ ಕುಳಿತು ಪ್ರಯಾಣಿಸಿದ್ದ ಎಂದು ಆರೋಪಿಸಿ ಯುವಕರ ತಂಡವೊಂದು ವಿದ್ಯಾರ್ಥಿ ಸೈಯದ್ ರಶೀಮ್ ಉಮರ್ (20) ಎಂಬಾತನಿಗೆ ಹಲ್ಲೆ ನಡೆಸಿರುವುದಾಗಿ ದೂರಲಾಗಿದೆ. ಹಲ್ಲೆ ನಡೆಸಿದವರು ಬಜರಂಗ ದಳದ ಕಾರ್ಯಕರ್ತರು ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿದ್ದಾರೆ
ಕಾರ್ಕಳದ ಖಾಸಗಿ ಕಾಲೇಜಿನಲ್ಲಿ ಕಲಿಯುತ್ತಿರುವ ರಶೀಮ್ಗೆ ತಂಡವೊಂದು ನ.24ರ ಸಂಜೆ ನಂತೂರಿನಲ್ಲಿ ಬಸ್ ಒಳಗೆ ನುಗ್ಗಿ ಹಲ್ಲೆ ನಡೆಸಿದೆ. ಕಾರ್ಕಳ-ನಿಟ್ಟೆ ಮಾರ್ಗವಾಗಿ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸಿನಲ್ಲಿ ಒಂದೇ ಸೀಟ್ನಲ್ಲಿ ಸಹಪಾಠಿಯಾಗಿದ್ದ ಹಿಂದೂ ಯುವತಿ ಜತೆ ಸೈಯದ್ ರಶೀಮ್ ಉಮರ್ ಪ್ರತೀದಿನ ಪ್ರಯಾಣಿಸುತ್ತಿದ್ದ ಎನ್ನಲಾಗಿದೆ. ಈ ವಿಚಾರದಲ್ಲಿ 3-4 ಮಂದಿ ಅಪರಿಚಿತರು ಬಸ್ಸಿನೊಳಗೆ ನುಗ್ಗಿ ಏಕಾಏಕಿಯಾಗಿ ಆತನನ್ನು ಎಳೆದು ಹಾಕಿ ಹಲ್ಲೆ ನಡೆಸಿದ್ದಾರೆ.
ಅಷ್ಟರಲ್ಲಿ ಅಲ್ಲಿ ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸರು ಬಂದು ಹೆಚ್ಚಿನ ಹಲ್ಲೆಯಾಗುವುದನ್ನು ತಪ್ಪಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ತಂಡ ಹಲ್ಲೆ ನಡೆಸಿದ್ದಲ್ಲದೆ ಬಸ್ಸಿನಿಂದ ಕೆಳಗೆ ಇಳಿಸಿ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸೈಯದ್ ರಶೀಮ್ ಉಮರ್ ದೂರಿನಲ್ಲಿ ತಿಳಿಸಿದ್ದಾರೆ. ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಜರಂಗದಳದ ಕಾರ್ಯಕರ್ತರ ತಂಡದಿಂದ ಹಲ್ಲೆ :
ಹಲ್ಲೆಯ ಘಟನೆಯ ಬಗ್ಗೆ ಪ್ರತಿಷ್ಟಿತ ಅಂಗ್ಲ ವಾರ್ತಾವಾಹಿನಿಯ ವರದಿಗಾರ ಇಇಮ್ರಾನ್ ಖಾನ್ ಎಂಬವರು ಟ್ವೀಟ್ ಮಾಡಿದ್ದರು . ಅದರಲ್ಲಿ ಅವರು “ ನೈತಿಕ ಪೊಲೀಸ್ ಗಿರಿಯ ಮತ್ತೊಂದು ಪ್ರಕರಣ ಕರ್ನಾಟಕದ ಮಂಗಳೂರಿನಿಂದ ವರದಿಯಾಗಿದೆ. ಬಸ್ಸುನಲ್ಲಿ ಹಿಂದೂ ಯುವತಿಯ ಜತೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮುಸ್ಲಿಂ ಯುವಕನ ಮೇಲೆ ಬಜರಂಗದಳದ ಕಾರ್ಯಕರ್ತರ ಗುಂಪೂಂದು ಹಲ್ಲೆ ನಡೆಸಿದೆ. ಮಂಗಳೂರು ನಗರದ ನಂತೂರು ಎಂಬಲ್ಲಿ ಕೃತ್ಯ ನಡೆದಿದೆ “ ಎಂದು ಟ್ವೀಟ್ ಮಾಡಿದ್ದರು.
Appropriate action is being taken regarding this incident https://t.co/z5fSTqS7Mo
— alok kumar (@alokkumar6994) November 25, 2022

ಇದಕ್ಕೆ ಪ್ರತಿಕ್ರಿಯಿಸಿರುವ ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಅಲೋಕ್ ಕುಮಾರ್ ಅವರು ““ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು “ ಎಂದು ತಿಳಿಸಿದ್ದಾರೆ.
