ಕಾರವಾರ: ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು ಕಾಂಗ್ರೆಸ್ ಪಕ್ಷ ಭರ್ಜರಿ ತಯಾರಿಯಲ್ಲಿ ತೊಡಗಿದೆ. ಈ ಬಾರಿ ಹೊಸ ಪ್ರಯತ್ನಕ್ಕೆ ಕೈ ಹಾಕಿರುವ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಬಳಿ ಅರ್ಜಿ ಹಾಕಿಸಿಕೊಂಡಿದೆ. ಇರುವ 224 ಕ್ಷೇತ್ರಕ್ಕೆ 1200 ಮಿಕ್ಕಿ ಆಕಾಂಕ್ಷಿಗಳು ಅರ್ಜಿ ಗುಜರಾಯಿಸಿದ್ದಾರೆ. ಅರ್ಜಿ ಹಾಕಿದವರಿಗೆ ಮಾತ್ರ ಟಿಕೆಟ್ ನೀಡಲಾಗುತ್ತದೆ ಎನ್ನುವ ನಿರೀಕ್ಷೆ ಆಕಾಂಕ್ಷಿಗಳಾದಾಗಿತ್ತು. ಆದರೇ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪಟ್ಟಣದಲ್ಲಿ ನಡೆದ ಸಭೆಯೊಂದರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೀಡಿದ ಹೇಳಿಕೆ ಆಕಾಂಕ್ಷಿಗಳಿಗೆ ಶಾಕ್ ಉಂಟು ಮಾಡಿದೆ.
ಪಕ್ಷದ ಟಿಕೆಟ್ ನಿಂದ ಚುನಾವಣೆಗೆ ಸ್ಪರ್ಧಿಸಲು ಬಯಸುವವರು ಎರಡು ಲಕ್ಷ ರೂ. ಡಿಡಿ ಹಾಗೂ ಅರ್ಜಿ ಶುಲ್ಕ 5 ಸಾವಿರ ರೂಪಾಯಿಯೊಂದಿಗೆ ಅರ್ಜಿ ಸಲ್ಲಿಸಲು ಕಾಂಗ್ರೆಸ್ ಸೂಚಿಸಿತ್ತು. ಅರ್ಜಿ ಸಲ್ಲಿಕೆಗೆ ನವೆಂಬರ್ 21 ಕೊನೆಯ ದಿನವಾಗಿತ್ತು. ರಾಜ್ಯದ 224 ಕ್ಷೇತ್ರಕ್ಕೆ ಸುಮಾರು 1200ಕ್ಕೂ ಅಧಿಕ ಜನರು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದರು .
ಆದರೆ, ಎರಡು ದಿನಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪಟ್ಟಣದಲ್ಲಿ ನಡೆದ ಜನಜಾಗೃತಿ ಸಮಾವೇಶದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, “ ಅರ್ಜಿ ಸಲ್ಲಿಸದವರಿಗೂ ಟಿಕೆಟ್ ಕೊಡುವ ಬಗ್ಗೆ ವರಿಷ್ಠರ ಜೊತೆ ಚರ್ಚೆ ನಡೆಸಲಾಗುವುದು ಎಂದಿದ್ದಾರೆ.
ಪಕ್ಷಕ್ಕೆ ಇನ್ನು ಹಲವರು ಸೇರಲಿದ್ದಾರೆ. ಹಾವೇರಿಯಲ್ಲಿ ಬಣಗಾರ್ ಕಾಂಗ್ರೆಸ್ ಸೇರಿದ್ದಾರೆ. ಇದಲ್ಲದೇ ಮುಂಡಗೋಡಿನಲ್ಲಿ ವಿಎಸ್ ಪಾಟೀಲ್ ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾರೆ. ಶೀಘ್ರದಲ್ಲೇ ಯಾರ್ಯಾರು ಕಾಂಗ್ರೆಸ್ ಸೇರಲಿದ್ದಾರೆ ತಿಳಿಯಲಿದೆ ಎಂದಿದ್ದಾರೆ. ಅರ್ಜಿ ಹಾಕಿದವರೆಲ್ಲರಿಗೂ ಸದ್ಯ ಕ್ಷೇತ್ರದಲ್ಲಿ ಸಂಘಟನೆ ಮಾಡಲು ಸೂಚನೆ ನೀಡಲಾಗಿದೆ. ಈ ಬಾರಿ ಟಿಕೆಟ್‌ಗಾಗಿ ನೂಕು ನುಗ್ಗಲಿರುವುದರಿಂದ ಅಭ್ಯರ್ಥಿಗಳನ್ನ ಶೀಘ್ರವೇ ಘೋಷಣೆ ಮಾಡುವ ಬಗ್ಗೆ ಸಹ ಚರ್ಚೆ ನಡೆಯುತ್ತಿದೆ ಎಂದು ಶಿವಕುಮಾರ್ ಹೇಳಿದ್ದರು.
ಅರ್ಜಿ ಎಷ್ಟೇ ಆಕಾಂಕ್ಷಿಗಳು ಸಲ್ಲಿಸಿದ್ದರೂ ಕ್ಷೇತ್ರದಲ್ಲಿ ಗೆಲ್ಲುವ ಅಭ್ಯರ್ಥಿಗಳಿಗೇ ಟಿಕೆಟ್ ನೀಡಬೆಕೇಂಬ ಮಾತುಕತೆ ಕಾಂಗ್ರೆಸ್‌ನಲ್ಲಾಗಿದೆಯಂತೆ. ಎಲ್ಲಾ ಕ್ಷೇತ್ರಗಳಲ್ಲೂ ಸಮೀಕ್ಷೆ ನಡೆಸಿ, ಜನರ ಒಲವು ಯಾರ ಕಡೆ ಇದೆಯೋ ಅವರಿಗೇ ಈ ಬಾರಿ ಕಾಂಗ್ರೆಸ್ ಟಿಕೆಟ್ ನೀಡಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಎರಡು ಲಕ್ಷ ರೂ.ಗಳ ಡಿಡಿ ಕೊಟ್ಟು ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದವರಲ್ಲಿ ಯಾರನ್ನೂ ಆಯ್ಕೆ ಮಾಡದೆ, ಹೊರಗಿನಿಂದ ಬಂದವರಿಗೆ ಟಿಕೆಟ್ ಘೋಷಿಸಿದರೆ ಕಾಂಗ್ರೆಸ್‌ನಲ್ಲಿ ಚುನಾವಣೆಯ ಸಂದರ್ಭದಲ್ಲಿ ಮತ್ತೆ ಭಿನ್ನಮತ ಸ್ಫೋಟಗೊಳ್ಳುವ ಸಾಧ್ಯತೆಯೂ ಇದೆ. ಇತ್ತ ಟಿಕೆಟ್ ಕೂಡ ಸಿಗದೆ, ಅತ್ತ ಕಟ್ಟಿದ ಎರಡು ಲಕ್ಷವೂ ವಾಪಸ್ಸು ಸಿಗದೆ ಆಕಾಂಕ್ಷಿಗಳು ಸಂಘಟನೆ ಬಲಪಡಿಸುವ ಕಾರ್ಯದಲ್ಲಿ ಸುಮ್ಮನಾಗುತ್ತಾರೆನ್ನಲಾಗುವುದಿಲ್ಲ. ಹೀಗಾಗಿ ಚುನಾವಣಾ ಸಮಯದಲ್ಲಿ ಕಾಂಗ್ರೆಸ್ ಇದನ್ನೆಲ್ಲ ಹೇಗೆ ಸರಿದೂಗಿಸಿಕೊಳ್ಳುತ್ತದೆ ಎಂಬುದನ್ನ ಕಾದುನೋಡಬೇಕಿದೆ.
ಪ್ರಭಾವಿ ನಾಯಕರುಗಳ ಸೇರ್ಪಡೆ!
ಸದ್ಯ ಮುಂಡಗೋಡ ಕ್ಷೇತ್ರದಲ್ಲಿ ಒಬ್ಬರೇ ಆಕಾಂಕ್ಷಿ ಟಿಕೆಟ್‌ಗಾಗಿ ಅರ್ಜಿ ಹಾಕಿದ್ದು, ಮಾಜಿ ಶಾಸಕ ವಿಎಸ್ ಪಾಟೀಲ್ ಕಾಂಗ್ರೆಸ್ ಸೇರ್ಪಡೆ ನಂತರ ಮತ್ತೊರ್ಮೆ ಅರ್ಜಿ ಹಾಕಿಸಿಕೊಂಡು ಟಿಕೆಟ್ ಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ. ಇದಲ್ಲದೇ ಜಿಲ್ಲೆಯ ಕರಾವಳಿ ಭಾಗದಲ್ಲಿ ಇಬ್ಬರು ಪ್ರಭಾವಿ ಮುಖಂಡರುಗಳು ಕಾಂಗ್ರೆಸ್ ಸೇರಲು ತಯಾರಿ ನಡೆಸುತ್ತಿದ್ದು, ಈಗಾಗಲೇ ನಾಯಕರುಗಳ ಜೊತೆ ಸಹ ಚರ್ಚೆ ನಡೆಸಿದ್ದಾರೆನ್ನಲಾಗಿದೆ. ಹೀಗಾಗಿ ಒಂದೊಮ್ಮೆ ಹೈಕಮಾಂಡ್ ಸಮ್ಮತಿ ನೀಡಿದರೆ ಟಿಕೆಟ್ ನಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಸಹ ಇದೆ ಎನ್ನಲಾಗಿದೆ.
ಪುತ್ತೂರು :
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಈಗಾಗಲೇ 13 ಮಂದಿ ಪಕ್ಷದ ಟಿಕೆಟ್ ಗಾಗಿ ಆರ್ಜಿ ಸಲ್ಲಿಸಿದ್ದಾರೆ. ಆದರೇ ಇದರ ಜತೆಗೆ ಪುತ್ತೂರು ಕ್ಷೇತ್ರ ವ್ಯಾಪ್ತಿಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಜನಮಾನಸದಲ್ಲಿ ದೊಡ್ಡ ಹೆಸರನ್ನು ಗಳಿಸಿರುವ ವ್ಯಕ್ತಿಯೊಬ್ಬರು ಕಾಂಗ್ರಸ್ ಟಿಕೆಟ್ ನಿಂದ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ ಎನ್ನುವ ಮಾತುಗಳು ಈಗ ಕೇವಲ ಗಾಳಿ ಮಾತಾಗಿ ಉಳಿದಿಲ್ಲ . ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಅವರು ರಾಜ್ಯ ಕಾಂಗ್ರೆಸ್ ಹೈಕಮಾಂಡ್ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ. ಇದೀಗ ಡಿಕೆ ಶಿವಕುಮಾರ್ ಅವರ ಹೇಳಿಕೆಯಿಂದ ಅವರ ಅಭಿಮಾನಿಗಳಿಗೆ ಆನೆ ಬಲ ಬಂದಂತಾಗಿದೆ