ಉಡುಪಿ : ನ 24 : ರೋಸ್ ಸಮಾರಂಭದಲ್ಲಿ (ಕ್ರೈಸ್ತರ ಮದುವೆಯ ಮುನ್ನ ದಿನ ನಡೆಯುವ ಕಾರ್ಯಕ್ರಮ) ಸಂಬಂದಿಕರ ಜತೆ ಸಂಭ್ರಮಿಸುತ್ತಿದ್ದ ಯುವತಿಯೊಬ್ಬಳು ರಕ್ತದೊತ್ತಡ ಕಡಿಮೆಯಾಗಿ ಕುಸಿದು ಬಿದ್ದು ಮೃತಪಟ್ಟ ಘಟನೆ ಕೊಳಲಗಿರಿ ಹಾವಂಜೆಯಲ್ಲಿ ನಡೆದಿದೆ.
ಮೃತ ಯುವತಿಯನ್ನು ಹಾವಂಜೆ ನಿವಾಸಿ ಜೋಸ್ನಾ ಲೂಯಿಸ್ ಎಂದು ಗುರುತಿಸಲಾಗಿದೆ. ಇವರು ನಿನ್ನೆ ರಾತ್ರಿ ಕೊಳಲಗಿರಿ ಹಾವಂಜೆಯ ಸಂಬಂಧಿಕರ ಮನೆಯಲ್ಲಿ ನಡೆದ ರೋಸ್ ಸಮಾರಂಭಕ್ಕೆ ತೆರಳಿದ್ದರು.
ಜ್ಯೋತ್ಸ್ನಾ ಅವರು ಬುಧವಾರ ರಾತ್ರಿ ಕೊಳಲಗಿರಿ ಹಾವಂಜೆಯ ತನ್ನ ಸಂಬಂಧಿಕರ ಮದುವೆ ಮನೆಗೆ ಬಂದಿದ್ದರು. ರಾತ್ರಿ 8.30ರ ಹೊತ್ತಿಗೆ ಇತರರೆಲ್ಲ ಪಾನೀಯಗಳನ್ನು ಸೇವಿಸುತ್ತಾ, ನೃತ್ಯ ಮಾಡುತ್ತಾ ಖುಷಿಪಡುತ್ತಿದ್ದರು. ಇದನ್ನೆಲ್ಲ ನೋಡುತ್ತಾ ಕುರ್ಚಿಯಲ್ಲಿ ಕುಳಿತಿದ್ದ ಜ್ಯೋತ್ಸ್ನಾ ಅಲ್ಲೇ ಕುಸಿದುಬಿದ್ದರು.
ಸಂಬಂಧಿಕರು ತಕ್ಷಣ ಯುವತಿಯನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆಗೆ ಫಲ ಸಿಗಲಿಲ್ಲ. ಅವರು ಗುರುವಾರ ಬೆಳಗ್ಗೆ ನಿಧನರಾದರು.
ಕಳೆದ ಹಲವು ತಿಂಗಳುಗಳಿಂದ ಯುವ ಸಮುದಾಯ ಹಾಗೂ ಮಧ್ಯ ವಯಸ್ಕ ಸಮುದಾಯ ದಿಢೀರ್ ಕುಸಿತಗೊಂಡು ಮೃತಪಡುತ್ತಿರುವ ಘಟನೆಗಳು ವರದಿಯಾಗುತ್ತಿರುವದು ಆತಂಕಕ್ಕೆ ಕಾರಣವಾಗಿದೆ. ಕರಾವಳಿ ಕರ್ನಾಟಕ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯಲ್ಲೂ ಈ ರೀತಿಯ ಹಲವು ಘಟನೆಗಳು ಜರುಗಿವೆ. ಈ ಭಾಗದ ಹಿರಿಯ ಪತ್ರಕರ್ತ ರಾಜರಾಮ್ ತಲ್ಲೂರು ಈ ಬಗ್ಗೆ ICMR ಗೆ ಹಲವು ತಿಂಗಳುಗಳ ಹಿಂದೆ ಪತ್ರ ಕೂಡ ಬರೆದಿದ್ದರು . ಆದರೆ ಇದಕ್ಕೆ ಉತ್ತರ ಬಂದಿರಲಿಲ್ಲ.