ಮಂಗಳೂರು: ಗೋಡೆ ಬರಹ ಪ್ರಕರಣದಲ್ಲಿ ಆರೋಪಿಯಾಗಿದ್ದ ಶಾರೀಕ್ ಹಿಂದೂ ಹೆಸರಿನಲ್ಲಿ, ಐಡಿ ಮಾಡಿಕೊಂಡು ಓಡಾಡುತ್ತಿದ್ದ. ಹೀಗಾಗಿ ಅವನ ಮೇಲೆ ಅನುಮಾನ ಬಂದಿರಲಿಲ್ಲ. ಅಲ್ಲದೆ ಪದೇ ಪದೇ ಸ್ಥಳ ಬದಲಾವಣೆ ಮಾಡುತ್ತಿದ್ದ. ಹೀಗಾಗಿ ಟ್ರೇಸ್ ಮಾಡುವುದು ಕಷ್ಟವಾಗಿತ್ತು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ಕುಕ್ಕರ್ ಬಾಂಬ್ (Mangalore Blast) ಪ್ರಕರಣದ ಆರೋಪಿ ಶಾರೀಕ್ ಜಾಮೀನಿನ ಮೂಲಕ ಹೊರಬಂದ ಬಳಿಕ ತೀರ್ಥಹಳ್ಳಿಯ ಕೆಲವು ದಿನದವರೆಗೆ ಪೊಲೀಸ್ ಕಣ್ಣಿಟ್ಟಿದ್ದರು. ಆದರೆ ನಂತರ ತಪ್ಪಿಸಿಕೊಂಡಿದ್ದ. ಆತ ಬೇರೆ ರಾಜ್ಯಗಳಲ್ಲಿ ಸಂಚರಿಸಿದ್ದ ಎಂದರು.
ಪ್ರಕರಣದ ತನಿಖೆಯನ್ನು ಎನ್ ಐಎಗೆ ಹಸ್ತಾಂತರಿಸುವ ಬಗ್ಗೆ ಒಂದೆರಡು ದಿನಗಳಲ್ಲಿ ನಿರ್ಣಯವಾಗಲಿದೆ. ಮಂಗಳೂರಿನಲ್ಲಿ ಎನ್ ಐಎ ಘಟಕ ಸ್ಥಾಪಿಸಬೇಕೆಂಬ ಬೇಡಿಕೆ ಬಗ್ಗೆ ಈಗಾಗಲೆ ಕೇಂದ್ರ ಸರಕಾರದ ಗಮನಕ್ಕೆ ತರಲಾಗಿದೆ ಎಂದರು.
ತೀರ್ಥಹಳ್ಳಿ ಟೆರರಿಸ್ಟ್ ಹಬ್ ಆಗುತ್ತಿದೆಯೇ ಎಂಬ ಪ್ರಶ್ನೆ ಉತ್ತರಿಸಿದ ಗೃಹ ಸಚಿವರು, ತೀರ್ಥಹಳ್ಳಿಯು ಸಾಹಿತಿ, ರಾಜಕಾರಣಿಗಳನ್ನು ಕೊಟ್ಟ ತಾಲೂಕು. ಕರಾವಳಿ ಕೇರಳದ ಲಿಂಕ್ ನಿಂದ ಕೆಲ ಯುವಕರು ಈ ರೀತಿ ಮಾಡುತ್ತಿದ್ದಾರಷ್ಟೇ ಎಂದರು.ಆರೋಪಿ ಶಾರೀಕ್ ನ ಆರೋಗ್ಯ ಸುಧಾರಣೆಗೆ ಹೆಚ್ಚಿನ ಗಮನ ನೀಡುವ ಬಗ್ಗೆ ವೈದ್ಯರೊಂದಿಗೆ ಮಾತನಾಡಿದ್ದೇನೆ. ಎಂಟು ಮಂದಿ ತಜ್ಞ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಆತ ಗುಣಮುಖನಾದ ಮೇಲೆ ಹೆಚ್ಚಿನ ವಿಚಾರಣೆ ನಡೆಯಲಿದೆ ಎಂದರು.
ಗಾಯಾಳು ರಿಕ್ಷಾ ಚಾಲಕರ ಚಿಕಿತ್ಸಾ ವೆಚ್ಚವನ್ನು ಸಂಪೂರ್ಣವಾಗಿ ಸರಕಾರವೇ ಭರಿಸಲಿದೆ. ಅವರ ಕುಟುಂಬಕ್ಕೆಆರ್ಥಿಕ ಸಹಾಯ ಕೂಡ ಸರಕಾರದಿಂದ ಒದಗಿಸುವ ಬಗ್ಗೆ ಬೆಂಗಳೂರಿಗೆ ತೆರಳಿದ ಮೇಲೆ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದರು. ಭಯಾನಕ ಘಟನೆಯೊಂದು ತಪ್ಪಿದೆ. ಭಯೋತ್ಪಾದನಾ ಕೃತ್ಯ ನಿರ್ಮೂಲನೆಗೆ ಕೇಂದ್ರ ರಾಜ್ಯ ಸರಕಾರಗಳು ಗಮನ ಹರಿಸಿದೆ. ಇತ್ತೀಚಿನ ವರ್ಷಗಳಲ್ಲಿ ಇಂತಹ ಕೃತ್ಯಗಳು ಕಡಿಮೆಯಾಗಿವೆ ಎಂದು ಗೃಹ ಸಚಿವರು ಹೇಳಿದರು.