ಕನ್ನಡ ಸೂಪರ್‌ಹಿಟ್ ಚಿತ್ರ ‘ಕಾಂತಾರ’ ಒಟಿಟಿಯಲ್ಲಿ ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದವರಿಗೆ ಖುಷಿಯ ಸುದ್ದಿ ಬಂದಿದೆ. ನ. 24ರಂದು ಅಮೆಜಾನ್ ಪ್ರೈಂ ಒಟಿಟಿ ವೇದಿಕೆಯಲ್ಲಿ ವಿಶೇಷ ಪ್ರೀಮಿಯರ್ ಸ್ಟ್ರೀಮಿಂಗ್ ನಡೆಯಲಿದೆ.ಇಂದು ಮಧ್ಯ ರಾತ್ರಿ 12 ಗಂಟೆಗೆ ಕಾಂತಾರ ಅಮೆಜಾನ್ ಪ್ರೈಂ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಕನ್ನಡದ ಖ್ಯಾತ ಫಿಲಂ ಪ್ರೊಡಕ್ಷನ್ ಹೌಸ್ ಹೊಂಬಾಳೆ ಫಿಲ್ಮ್ಸ್ ಈ ಸಿನಿಮಾವನ್ನು ನಿರ್ಮಿಸಿತ್ತು.
ರಿಷಬ್ ಶೆಟ್ಟಿ ರಚನೆ, ನಟನೆ ಮತ್ತು ನಿರ್ದೇಶನದ ಈ ಚಿತ್ರ ಸೆಪ್ಟೆಂಬರ್ 30ರಂದು ತೆರೆ ಕಂಡಿತ್ತು. ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕನ್ನಡವೊಂದರಲ್ಲೇ ಒಂದು ಕೋಟಿಗೂ ಮಿಕ್ಕಿ ಟಿಕೆಟ್‌ಗಳು ಮಾರಾಟವಾಗಿದ್ದವು. ಲಭ್ಯ ಮಾಹಿತಿ ಪ್ರಕಾರ ಈವರೆಗೆ ಈ ಸಿನಿಮಾ 400 ಕೋಟಿಗೂ ಅಧಿಕ ವ್ಯವಹಾರ ಮುಗಿಸಿದೆ.
ದಕ್ಷಿಣ ಕನ್ನಡ, ಉಡುಪಿ ಹಾಗು ಕಾಸರಗೋಡು ಜಿಲ್ಲೆಯಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಭೂತರಾಧನೆಯನ್ನು ಹಿನ್ನಲೆಯಾಗಿಟ್ಟುಕೊಂಡು, ಕುಂದಾಪುರಾದ ಗ್ರಾಮವೊಂದರಲ್ಲಿ ನಡೆಯುವ ಘಟನೆಗಳು ಈ ಚಿತ್ರದ ಕಥಾ ಹಂದರ. ಪ್ರಕೃತಿ ಹಾಗೂ ಮನುಷ್ಯನ ಸಂಘರ್ಷ ವನ್ನು ತೋರಿಸುವ ಚಿತ್ರಕ್ಕೆ ಧಾರ್ಮಿಕ ಲೇಪನವನ್ನು ನೀಡಲಾಗಿದೆ.
ಹಲವು ವರ್ಷಗಳ ಬಳಿಕ ಕನ್ನಡ ಚಿತ್ರವೊಂದು ಕರ್ನಾಟಕದ ಹಲವು ಚಿತ್ರಮಂದಿರಗಳಲ್ಲಿ 50 ದಿನ ಪ್ರದರ್ಶನ ಕಂಡಿದೆ. ಸಪ್ತಮಿ ಗೌಡ, ರಘು ಪಾಂಡೇಶ್ವರ, ಪ್ರಕಾಶ್ ತೂಮಿನಾಡು, ಅಚ್ಯುತ್ ಕುಮಾರ್ ಮುಂತಾದ ಪ್ರಮುಖರು ತಾರಾಗಣದಲ್ಲಿದ್ದಾರೆ.
ಅಮೆಜಾನ್ ಪ್ರೈಮ್ ಮೂಲಕ ಭಾರತ ಸೇರಿದಂತೆ 240 ದೇಶ, ಪ್ರಾಂತ್ಯಗಳಲ್ಲಿನ ಪ್ರೈಂ ಚಂದಾದಾರರು ಚಿತ್ರವನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಬಹುದು. ಕನ್ನಡ, ತೆಲುಗು, ಮಲಯಾಳಂ ಹಾಗೂ ತಮಿಳು ಭಾಷೆಗಳ ಆವೃತ್ತಿಗಳೂ ಲಭ್ಯ ಇವೆ ಎಂದು ಅಮೆಜಾನ್ ಪ್ರಕಟಣೆಯಲ್ಲಿ ಹೇಳಿದೆ.