Poisonous mushroom :ಉಜಿರೆ: ಸೇವಿಸಿದ ಆಹಾರ ವಿಷವಾಗಿ ಪರಿಣಮಿಸಿ ಅಪ್ಪ-ಮಗ ಮೃತಪಟ್ಟ ಹೃದಯ ವಿದ್ರಾವಕ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪುದುವೆಟ್ಟುವಿನಲ್ಲಿ ಮಂಗಳವಾರ ನಡೆದಿದೆ. ಧರ್ಮಸ್ಥಳಕ್ಕೆ ಸಮೀಪದ ಪುದುವೆಟ್ಟು ಗ್ರಾಮದ ಮೀಯಾರುಪಾದೆ ಕೇರಿಮಾರು ನಿವಾಸಿಗಳಾದ ಗುರುವ(80) ಮತ್ತು ಅವರ ಪುತ್ರ ಓಡಿಯಪ್ಪ(41) ಮೃತಪಟ್ಟವರು. ಮನೆಯಲ್ಲಿ ಆ ದಿನ ಮಾಡಿದ ಅಣಬೆ ಪದಾರ್ಥ ವಿಷವಾಗಿ ಪರಿಣಮಿಸಿ ಈ ಸಾವು ಸಂಭವಿಸಿರಬಹದು ಎಂದು ಧರ್ಮಸ್ಥಳ ಠಾಣೆಗೆ ಮೃತರ ಮನೆಯವರು ದೂರಿನಲ್ಲಿ ಸಂಶಯ ವ್ಯಕ್ತಪಡಿಸಿದ್ದಾರೆ.
ನಿರ್ಲಕ್ಷಿತ ಕುಟುಂಬ
ಮನೆಯಲ್ಲಿ ವಯೋವೃದ್ಧ ಗುರುವ ಹಾಗೂ ಅವರ ಇಬ್ಬರು ಪುತ್ರರಾದ ಕರ್ತ (60) ಹಾಗೂ ಓಡಿಯಪ್ಪ ವಾಸವಾಗಿದ್ದರು.ಪರಿಶಿಷ್ಟ ಜಾತಿಗೆ ಸೇರಿದ ಈ ಕುಟುಂಬ ಬಡತನ, ಸರಿಯಾಗಿ ದೊರಕದ ಶಿಕ್ಷಣ, ಅನಾರೋಗ್ಯ, ಮದ್ಯಪಾನ ಮತ್ತಿತರ ಕಾರಣಗಳಿಂದ ಸಮಸ್ಯೆಗೆ ಸಿಲುಕಿತ್ತು. ಹಿಂದೆ ಗುಡಿಸಲಿನಂತಿದ್ದ ಮನೆಯಲ್ಲಿದ್ದವರು ಕೆಲವರ್ಷಗಳ ಹಿಂದೆ ಸಮೀಪವೇಸಿಮೆಂಟ್ ಬ್ಲಾಕ್, ಶೀಟ್ ಅಳವಡಿಸಿದ ಬೇರೆ ಮನೆ ನಿರ್ಮಿಸಿ ವಾಸವಾಗಿದ್ದರು. ಈ ಮನೆಗೆ ವಿದ್ಯುತ್, ಗ್ಯಾಸ್ ಯಾವುದೂ ಇಲ್ಲ. ಮೃತಪಟ್ಟ ಇಬ್ಬರಲ್ಲೂ ಮೊಬೈಲ್ ಕೂಡ ಇರಲಿಲ್ಲ. ಕನಿಷ್ಠಮೂಲಸೌಕರ್ಯವೂ ಇಲ್ಲದ ಶೋಚನೀಯ ಸ್ಥಿತಿಯಲ್ಲಿ ವಾಸವಿದ್ದ ಕುಟುಂಬ ಆಡಳಿತದ ನಿರ್ಲಕ್ಷ್ಯಕ್ಕೆ ಜೀವಂತ ಸಾಕ್ಷಿಯಾಗಿದೆ
ಓಡಿಯಪ್ಪ ಅವಿವಾಹಿತನಾಗಿದ್ದು, ಹಲವು ವರ್ಷಗಳ ಹಿಂದೆಯೇ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ.ಒಬ್ಬಂಟಿಯಾಗಿ ಸಿಕ್ಕರೆ ಹೆದರಿಸುತ್ತಿದ್ದುದರಿಂದ ಊರಿನ ಮಹಿಳೆಯರು, ಮಕ್ಕಳು ಅವನನ್ನು ಕಂಡರೆ ಹೆದರುತ್ತಿದ್ದರು. ಎಲ್ಲೇ ಹೋಗುವುದಿದ್ದರೂ ನಡೆದುಕೊಂಡೇ ಹೋಗುತ್ತಿದ್ದು, ಊರಿನ ಯಾರ ಜತೆಗೂ ಸರಿಯಾಗಿ ಮಾತನಾಡುತ್ತಿರಲಿಲ್ಲ. ಮಾನಸಿಕ ಸಮಸ್ಯೆಗೆ ಸೂಕ್ತ ಚಿಕಿತ್ಸೆಯನ್ನೂ ಪಡೆದಿರಲಿಲ್ಲ.

ಗುರುವ ಅವರ ಹಿರಿಯ ಪುತ್ರ ಕರ್ತ ಎಂಬುವರ ಪತ್ನಿ ನಾಲ್ಕನೇ ಹೆರಿಗೆ ಸಂದರ್ಭ ಮೃತಪಟ್ಟಿದ್ದರು. ಗುರುವ ಅವರ ಪುತ್ರಿ ಡೀಕಮ್ಮ ಕೆಲವರ್ಷಗಳ ಹಿಂದೆ ಅನಾರೋಗ್ಯಕ್ಕೀಡಾಗಿದ್ದು, ಸರಿಯಾದ ಚಿಕಿತ್ಸೆ ದೊರಕದೆ ಕೊನೆಯುಸಿರೆಳೆದಿದ್ದರು. ಕೂಲಿ ಕೆಲಸಕ್ಕೆ ಹೋಗಿ ಕುಟುಂಬವನ್ನು ಸಲಹುತ್ತಿದ್ದ ಗುರುವ ಅವರ ಪತ್ನಿ ಕುಚ್ಚ ವರ್ಷದ ಹಿಂದೆ ಅನಾರೋಗ್ಯಕ್ಕೀಡಾಗಿ ಹಾಸಿಗೆ ಹಿಡಿದಿದ್ದು, ಧರ್ಮಸ್ಥಳದಲ್ಲಿರುವ ಮೊಮ್ಮಕ್ಕಳ ಮನೆಯಲ್ಲಿದ್ದಾರೆ.
ಈಗ ಮೃತಪಟ್ಟಿರುವ ಗುರುವ ಮತ್ತು ಓಡಿ ಇಬ್ಬರೂ ಕೆಲಸ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಪಡಿತರ ಅಕ್ಕಿಯನ್ನು ತಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಸದ್ಯ ಮನೆಯಲ್ಲಿ ದುಡಿಮೆಗೆ ಹೋಗುತ್ತಿದ್ದುದು ಕರ್ತ ಮಾತ್ರ.
ನ 21 ರಂದು ಏನಾಯಿತು ?
ನ 21 ರಂದು 3 ಗಂಟೆ ಸುಮಾರಿಗೆ ಕರ್ತರವರು ಪುದುವೆಟ್ಟು ಪೇಟೆಗೆಂದು ಹೊರಟ ವೇಳೆ ತಮ್ಮ ಓಡಿಯಪ್ಪ ಕಾಡಿನಿಂದ ಅಣಬೆಯನ್ನು ತಂದು ಪದಾರ್ಥಕ್ಕೆಂದು ಶುಚಿ ಮಾಡುತ್ತಿದ್ದರು ತಂದೆ ಗುರುವ ಮನೆಯಲ್ಲಿಯೇ ಮಲಗಿಕೊಂಡಿದ್ದರು. ಕರ್ತ ಮದ್ಯಪಾನಿಯಾಗಿದ್ದು, ಸೋಮವಾರ ಸಂಜೆ 6 ಗಂಟೆ ಹೊತ್ತಿಗೆ ಮನೆಯಿಂದ ಮೂರ್ನಾಲ್ಕು ಕಿ.ಮೀ. ದೂರದಲ್ಲಿರುವ ಬೊಳ್ಳನಾರು ಎಂಬಲ್ಲಿ ಪಾನಮತ್ತನಾಗಿ ರಸ್ತೆ ಬದಿ ಬಿದ್ದಿದ್ದಾರೆ. ಅವರಿಗೆ ಎಚ್ಚರವಾಗಿದ್ದು ಮಂಗಳವಾರ ಬೆಳಗ್ಗೆ. ಎದ್ದವ ಮನೆಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಕರ್ತ ರಾತ್ರಿಯೇ ಮನೆಗೆ ಹೋಗುತ್ತಿದ್ದರೆ ತಂದೆ ಹಾಗೂ ಸಹೋದರನ ಜತೆ ಊಟ ಮಾಡುತ್ತಿರು. ಮನೆಗೆ ಹೋಗದ ಕಾರಣ ಬದುಕಿ ಉಳಿದಿದ್ದಾರೆ.

ಗುರುವ ಹಾಗು ಓಡಿಯಪ್ಪನವರು ಅಣಬೆಯನ್ನು ತಂದು ಪದಾರ್ಥ ಮಾಡಿ ರಾತ್ರಿ ಸೇವಿಸಿದ್ದಾರೆ. ಇದರಿಂದಾಗಿ ಇಬ್ಬರೂ ಅಸ್ವಸ್ಥಗೊಂಡಿದ್ದಾರೆ. ವಾಂತಿ-ಭೇದಿ ಆರಂಭವಾಗಿದ್ದು, ನೆರವಿಗಾಗಿ ಕೂಗಿಕೊಂಡಿದ್ದಾರೆ. ತೀರಾ ಹತ್ತಿರದಲ್ಲಿ ಯಾವುದೇ ಮನೆಇಲ್ಲದ ಕಾರಣ ನೆರವು ದೊರೆತಿಲ್ಲ. ಮೇಲಾಗಿ ಓಡಿಯಪ್ಪ ಮಾನಸಿಕ ಅಸ್ವಸ್ಥನೂ ಆಗಿದ್ದರಿಂದ, ಎಂದಿನಂತೆ ಕೂಗುತ್ತಿರಬಹುದು ಎಂದುಸ್ಥಳೀಯರೂ ನಿರ್ಲಕ್ಷಿಸಿರಬಹುದು ಎನ್ನಲಾಗಿದೆ. ಇಬ್ಬರೂ ಅಂಗಳದಲ್ಲಿ ಹೊರಳಾಡಿದ್ದರಿಂದ ಮೈಪೂರ್ತಿ ಮಣ್ಣುಅಂಟಿಕೊಂಡಿತ್ತು.
ಮಂಗಳವಾರ ಬೆಳಗ್ಗೆ ಮನೆಗೆ ಬಂದ ಕರ್ತರವರು ಮನೆ ಎದುರು ಮೈಯೆಲ್ಲಾ ಮಣ್ಣು ಮೆತ್ತಿಕೊಂಡು ಬಿದ್ದಿರುವ ಗುರುವ ಹಾಗೂ ಓಡಿಯಪ್ಪ ಅವರನ್ನು ನೋಡಿದ್ದಾರೆ. ಸ್ಥಳೀಯರ ನೆರವಿನಿಂದ ಪರಿಶೀಲನೆ ನಡೆಸಿದಾಗ ಅವರಿಬ್ಬರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಮನೆಯಲ್ಲಿತ್ತು ಅಣಬೆ ಪದಾರ್ಥ
ಮನೆಯಲ್ಲಿ ಮೂವರು ಪುರುಷರು ಮಾತ್ರ ವಾಸವಾಗಿದ್ದರು. ಮನೆಯೊಳಗೆ ಅನ್ನ ಹಾಗೂ ಉಳಿದ ಅಣಬೆ ಪದಾರ್ಥ ಪಾತ್ರೆಗಳಲ್ಲಿ ಕಂಡುಬಂದಿದೆ. ಘಟನಾ ಸ್ಥಳಕ್ಕೆ ಧರ್ಮಸ್ಥಳ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ವಿಷಯುಕ್ತ (poisonous mushroom) ಸೇವಿಸಿದ ಪರಿಣಾಮ ಈ ಸಾವು ಆಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದ್ದು ತನಿಖೆ ಬಳಿಕ ಸ್ಪಷ್ಟವಾದ ಕಾರಣ ತಿಳಿಯಬೇಕಿದೆ.

ಮೃತರಿಬ್ಬರೂ ವಿಷಕಾರಿ ಅಣಬೆಯನ್ನು ಪದಾರ್ಥ ಮಾಡಿ ತಿಂದು ಮೃತಪಟ್ಟಂತೆ ಕಂಡು ಬರುತ್ತಿದ್ದು, ಮೃತ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲ ಎಂದು ಕರ್ತ ಠಾಣೆಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.
ಆಣಬೆ : ಜಾಗೃತೆ ವಹಿಸದಿದ್ದರೇ ಅಪಾಯಕಾರಿ
ಮಲೆನಾಡು ಮತ್ತು ಕರಾವಳಿ ಭಾಗದ ಕಾಡಿನಲ್ಲಿ ಸಿಗುವ ಅಣಬೆಗಳಲ್ಲಿ ಕೆಲವು ವಿಷಪೂರಿತ ಅಣಬೆಗಳಾಗಿರುತ್ತವೆ. ಆಹಾರಕ್ಕೆ ಬಳಸುವ ಮೊದಲು ಇವನ್ನು ಸರಿಯಾಗಿ ಪರಿಶೀಲಿಸುವುದು ಮುಖ್ಯ. ಗ್ರಾಮೀಣದ ಭಾಗದ ಪರಿಣತರು ಇದನ್ನು ನೋಡಿದೊಡನೆ ಗುರುತಿಸುತ್ತಾರೆ. ಆದರೆ ನೋಡಲು ಒಂದೇ ತೆರನಾಗಿ ಗೋಚರಿಸುವುದರಿಂದ ಗುರುತಿಸುವಲ್ಲಿ ಎಡವಟ್ಟಾದಲ್ಲಿ ಖಂಡಿತಕ್ಕೂ ಅಪಾಯಕಾರಿ.
ಅಣಬೆಗಳನ್ನು ಅವುಗಳ ಬಣ್ಣಗಳ ಮೂಲಕ ಗುರುತಿಸಿ ಉಪಯೋಗಿಸಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಕಾಡಿನಲ್ಲಿ ‘ಅಮಾನಿಟ'(Amanita) ಎಂಬ ಜಾತಿಯ ಅಣಬೆಗಳು ಸಾಮಾನ್ಯವಾಗಿ ಸಿಗುತ್ತವೆ. ಇವು ತೀವ್ರ ವಿಷಕಾರಿ ಹಾಗೂ ಇವನ್ನು ಸೇವಿಸಿದರೆ ಸಾವು ಸಂಭವಿಸುವ ಸಾಧ್ಯತೆ ಇದೆ ಎಂದು ವಿಷಯ ತಜ್ಙರು ಮಾಹಿತಿ ನೀಡಿದ್ದಾರೆ
ಸಾಮಾನ್ಯವಾಗಿ ಆಹಾರಕ್ಕೆ ಬಳಸುವ ‘ಪ್ಲೀವ್ ರೋಟಸ್'(Pleurotus) ಜಾತಿಯ ಅಣಬೆಗಳನ್ನು ಎರಡು ಮೂರು ದಿನ ಯಾವುದೇ ಮುಂಜಾಗ್ರತೆ ವಹಿಸದೆ ಇಟ್ಟು ಸೇವಿಸಿದರೆ ಇದರಲ್ಲೂ ತೀವ್ರ ರೀತಿಯ ಅನಾರೋಗ್ಯ ಬರುವ ಸಂಭವ ಇದೆ ಎಂದು ಕೂಡ ಅವರು ಮಾಹಿತಿ ನೀಡಿದ್ದಾರೆ.