ವಿಟ್ಲ / ಪುತ್ತೂರು : ನ 21 : ಅಪ್ರಾಪ್ತ ಹಿಂದೂ ಬಾಲಕಿಯನ್ನು ಅನ್ಯ ಕೋಮಿನ ಇಬ್ಬರು ಯುವಕರು ಅಪಹರಿಸಿ ಪುತ್ತೂರು – ವಿಟ್ಲ ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ಅಳಕಮಜಲು ಸಮೀಪದ ನಿನ್ನಿಕಲ್ಲು ಗುಡ್ಡಕ್ಕೆ ಕರೆದುಕೊಂಡು ಹೋಗಿರುವುದಾಗಿ ಬಾಲಕಿಯ ಪೋಷಕರು ಅ 20 ರಂದು ರಾತ್ರಿ ವಿಟ್ಲ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಕಾರದ ವತಿಯಿಂದ ಕಬಕ ಗ್ರಾಮ ಪಂಚಾಯತ್ ನ ಸಭಾಂಗಣದಲ್ಲಿ ಕಂಪ್ಯೂಟರ್ ಶಿಕ್ಷಣ ಆಯೋಜಿಸಲ್ಲಾಗಿದ್ದು ಅಲ್ಲಿಗೆ ಸಂತ್ರಸ್ತ ಯುವತಿ ಎಂದಿನಂತೆ ನ 20 ರಂದು ತೆರಳಿದ್ದಳು. ಒಬ್ಬ ಅಪ್ರಾಪ್ತ ಬಾಲಕನ ಸಹಿತ ಇಬ್ಬರು ಯುವಕರು ಆ ಬಾಲಕಿಯನ್ನು ಪುಸಲಾಯಿಸಿ ಅಲ್ಲಿಂದ ಹೊರಗೆ ಕರೆದುಕೊಂಡು ಬಂದಿದ್ದಾರೆ. ಬಳಿಕ ಅಲ್ಲಿಂದ ಆಕೆಯನ್ನು ಅಪಹರಿಸಿಕೊಂಡು ಇಡ್ಕಿದು ಗ್ರಾಮದ ನಿನ್ನಿಕಲ್ಲು ಎಂಬಲ್ಲಿಗೆ ಕರೆದುಕೊಂಡು ಹೋಗಿದ್ದಾರೆ ಎಂದು ದೂರಲಾಗಿದೆ.
ಈ ವಿಚಾರವನ್ನು ಮಗಳು ಸಂಜೆ 5.30 ಗಂಟೆಗೆ ಪೋಷಕರಿಗೆ ಕರೆ ಮಾಡಿ ತಿಳಿಸಿದ್ದಾಳೆ. ಪೋಷಕರು ನಿನ್ನಿಕಲ್ಲು ಎಂಬಲ್ಲಿನ ಎತ್ತರದ ಗುಡ್ಡ ಪ್ರದೇಶದ ಕಡೆಗೆ ಹೋಗಿ ನೋಡಿದಾಗ ಅಲ್ಲಿ ಇಬ್ಬರು ಹುಡುಗರು ಇರುವುದು ಪತ್ತೆಯಾಗಿದೆ. ಅಲ್ಲಿ ತನ್ನ ಮಗಳನ ಹೆಸರನ್ನು ಕೂಗಿ ಕರೆದಾಗ ಯುವಕರಿಬ್ಬರು ಅಲ್ಲಿಂದ ಓಡಿ ಹೋಗಿದ್ದಾರೆ. ನಂತರ ಮಗಳನ್ನು ಮನೆಗೆ ಕರೆದುಕೊಂಡು ಹೋಗಿದ್ದೇವೆ. ಯಾವುದೋ ದುರುದ್ಧೇಶದಿಂದ ಬಾಲಕಿಯನ್ನು ಅಲ್ಲಿಗೆ ಕರೆದುಕೊಂಡು ಹೋಗಿರುವುದಾಗಿ ಬಾಲಕಿಯ ಪೋಷಕರು ದೂರಿನಲ್ಲಿ ಆರೋಪಿಸಿದ್ದಾರೆ.
ನಿನ್ನೆ ಸಂಜೆ ನಿನ್ನಿಕಲ್ಲು ಗುಡ್ಡದಲ್ಲಿ ಇಬ್ಬರು ಮುಸ್ಲಿಂ ಯುವಕರು , ಓರ್ವ ಮುಸ್ಲಿಂ ಯುವತಿ ಹಾಗು ಓರ್ವ ಅಪ್ರಾಪ್ತ ಯುವತಿ ಜತೆಯಾಗಿ ಸಮಯ ಕಳೆಯುತ್ತಿದ್ದ ವೇಳೆ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದಿದ್ದರು . ಬಳಿಕ ಬಾಲಕಿಯ ಪೋಷಕರಿಗೆ ಮಾಹಿತಿ ನೀಡಿ ಹಾಗೂ ಸಾರ್ವಜನಿಕರು ಆ ನಾಲ್ವರನ್ನು ವಿಟ್ಲ ಪೊಲೀಸ್ ಠಾಣೆಗೆ ಒಪ್ಪಿಸಿದ್ದರು. ಇದೀಗ ಇದೇ ಪ್ರಕರಣ ತಿರುವು ಪಡೆದು ಬಾಲಕಿಯ ಪೋಷಕರು ಠಾಣೆಗೆ ದೂರು ನೀಡಿರುವುದಾಗಿ ಹೇಳಲಾಗುತ್ತಿದೆ.
ಇನ್ನು ಗುಡ್ಡದಲ್ಲಿ ನಿನ್ನೆ ಸಂಜೆ ಪತ್ತೆಯಾದ ಮುಸ್ಲಿಂ ಯುವತಿ ಕಬಕ ದ ಮೀನು ವ್ಯಾಪಾರಿಯೊಬ್ಬರ ಪುತ್ರಿ. ಆಕೆ ಮುಸ್ಲಿಂ ಯುವಕರಿಗೆ ಹಿಂದೂ ಬಾಲಕಿಯನ್ನು ಪರಿಚಯಿಸಿ ಸ್ನೇಹ ಸಲುಗೆ ಬೆಳೆಸಲು ಸಂಪರ್ಕ ಸೇತುವೆಯಂತೆ ಕಾರ್ಯ ನಿರ್ವಹಿಸಿದ್ದಾಳೆ ಎಂದು ಹಿಂದೂತ್ವವಾದಿ ಸಂಘಟನೆಯ ಕಾರ್ಯಕರ್ತರು ಆರೋಪಿಸಿದ್ದಾರೆ.