ಮಂಗಳೂರು (ನ.21): ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆಯನ್ನು ಎನ್ ಐಎಗೆ ವಹಿಸಿದ ಬಳಿಕ ನಡೆದ ಮಹತ್ವದ ಬೆಳವಣಿಗೆಯಲ್ಲಿ ಪಾಪ್ಯುಲರ್ ಫ್ರಂಟ್ ಆಪ್ ಇಂಡಿಯಾ ಸಂಘಟನೆಯನ್ನು ಕೇಂದ್ರ ಸರಕಾರ ಐದು ವರ್ಷಗಳ ಕಾಲ ನಿಷೇಧಿಸಿತ್ತು. ಇದೆ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ನಡೆದಿದೆಯೇ ಎನ್ನುವ ಸಂಶಯ ಪೊಲೀಸ್ ಇಲಾಖೆಯನ್ನು ಇದೀಗ ಕಾಡುತ್ತಿದೆ.
ಪಿಎಫೈ ಸಂಘಟನೆ ದೇಶದಲ್ಲಿ ಸಂಘಟನಾತ್ಮಕವಾಗಿ ಪ್ರಭಲವಾಗಿರುವುದು ದಕ್ಷಿಣ ಭಾರತದ ಮೂರು ರಾಜ್ಯಗಳಲ್ಲಿ ಮಾತ್ರ. ಕೇರಳ ಪಿಎಫೈ ಸಂಘಟನೆಯ ಕೇಂದ್ರ ಸ್ಥಾನವಾದರೇ ಅಸುಪಾಸಿನ ರಾಜ್ಯಗಳಾದ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಅದು ತನ್ನ ಜಾಲವನ್ನು ವಿಸ್ತರಿಸಿದೆ. ಕರ್ನಾಟಕದಲ್ಲಿ ಪಿಎಫ್ಐ ಬಲಿಷ್ಠವಾಗಿರುವುದು. ಕರಾವಳಿ ಕರ್ನಾಟಕದಲ್ಲಿ. ಅದರಲ್ಲೂ ದಕ್ಷಿಣ ಕನ್ನಡ ಭಾಗದಲ್ಲಿ. ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದಲ್ಲಿ ಪಿಎಫ್ಐನ ಹಲವು ಮುಖಂಡರನ್ನು NIA ಹಾಗೂ ಪೊಲೀಸರು ಬಂಧಿಸಿದ್ದರು. ಅಲ್ಲದೇ ಸಂಘಟನೆಗೂ ದೇಶವ್ಯಾಪಿ ನಿಷೇಧಿಸಲಾಯಿತು.
ಇದಕ್ಕೆ ಪ್ರತೀಕಾರವಾಗಿ ಕರಾವಳಿ ಜಿಲ್ಲೆಯಲ್ಲಿ ಈ ರೀತಿ ದೊಡ್ಡಮಟ್ಟದ ದಾಳಿಗೆ ಉಗ್ರರು ಸಂಚು ನಡೆಸಿದ್ದರೇ ಎಂಬ ಸಂಶಯ ಇದೀಗ ವ್ಯಕ್ತವಾಗಿದೆ. ಇದೇ ದ್ವೇಷದಿಂದ ಏನಾದರೂ ದುಷ್ಕೃತ್ಯ ಎಸಗಿರಬಹುದೇ ಎಂಬ ನಿಟ್ಟಿನಲ್ಲಿ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಹಲವು ಮಂದಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ. ನಿಷೇಧಿತ ಸಂಘಟನೆಯ ಇನ್ನೂ ಹಲವರ ಲೋಕೇಶನ್ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದು, ಈ ಕೃತ್ಯದೊಂದಿಗೆ ಅವರ ಶಾಮೀಲಾಗಿದ್ದಾರೆಯೇ ಎಂಬ ಕುರಿತೂ ಪರಿಶೀಲನೆ ನಡೆಯುತ್ತಿದೆ. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಸುಮಾರು 15 ಪಿಎಫ್ಐ ಕಾರ್ಯಕರ್ತರು, ಮುಖಂಡರನ್ನು ಬಂಧಿಸಲಾಗಿತ್ತು.
ನಿಷೇಧಿತ ಪಿಎಫ್ಐ ಮುಖಂಡ ಮಂಗಳೂರು ಏರ್ಪೋರ್ಟ್ನಲ್ಲಿ ವಶ:
ಮಂಗಳೂರು ವಿಮಾನ ನಿಲ್ದಾಣದ ಮೂಲಕ ದುಬೈಗೆ ತೆರಳಲು ಯತ್ನಿಸಿದ್ದ ನಿಷೇಧಿತ ಸಂಘಟನೆ ಪಿಎಫ್ಐನ ದ.ಕ.ಜಿಲ್ಲಾಧ್ಯಕ್ಷನಾಗಿದ್ದ ಇಜಾಜ್ ಅಹ್ಮದ್ನನ್ನು ಎನ್ಐಎ ವಶಕ್ಕೆ ಪಡೆದಿದೆ. ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ನಿವಾಸಿಯಾಗಿರುವ ಇಜಾಜ್ ಅಹ್ಮದ್ನನ್ನು ಪಿಎಫ್ಐ ಸಂಘಟನೆ ನಿಷೇಧದ ಬಳಿಕ ಅ.27ರಂದು ಬಂಧಿಸಲಾಗಿತ್ತು. ಅದಾಗಿ ಹತ್ತು ದಿನಗಳ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಈ ನಡುವೆ ಭಾನುವಾರ ದುಬೈಗೆ ತೆರಳಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಗುರುತು ಪತ್ತೆ ಹಚ್ಚಿದ ಎನ್ಐಎ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದಾರೆ.

ತಮಿಳುನಾಡು ವ್ಯಕ್ತಿಯ ವಿಚಾರಣೆ
ಮಂಗಳೂರಿನಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದ ಶಂಕಿತ ಆರೋಪಿ ಬಳಸಿದ ಮೊಬೈಲ್ ನಂಬರ್ ಅನ್ನು ತಮಿಳುನಾಡಿನ ವ್ಯಕ್ತಿಯೊಬ್ಬರ ಆಧಾರ್ ಕಾರ್ಡ್ ಬಳಸಿ ಪಡೆದುಕೊಳ್ಳಲಾಗಿತ್ತು ಎಂಬ ಶಂಕೆಯ ಮೇರೆಗೆ ನೀಲಗಿರಿ ಜಿಲ್ಲೆಯ ಸುರೇಂದ್ರನ್ ಅವರನ್ನು ತಮಿಳುನಾಡು ಪೊಲೀಸರು ಭಾನುವಾರ ವಿಚಾರಣೆಗೆ ಒಳಪಡಿಸಿದ್ದಾರೆ.
ಎನ್ಐಎಯಿಂದ ತನಿಖೆ: ನಳಿನ್ ಕುಮಾರ್ ಕಟೀಲ್
ಸ್ಫೋಟದ ತನಿಖೆಯನ್ನು ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ನಡೆಸಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದಾರೆ. ‘ಈ ಕೃತ್ಯದ ಹಿಂದಿರುವ ಮೂಲಭೂತವಾದಿಗಳ ಜಾಡನ್ನು ಪತ್ತೆ ಹಚ್ಚಲು ಎನ್ಐಎ ತನಿಖೆಯಿಂದ ನೆರವಾಗಲಿದೆ. ಬಾಂಬ್ ಸ್ಫೋಟದ ಹಿಂದೆ ಅಂತರರಾಜ್ಯ ದೇಶದ್ರೋಹಿಗಳ ಕೈವಾಡ ಪತ್ತೆ ಹಚ್ಚಲು ಎನ್ಐಎ ಕಾರ್ಯತತ್ಪರವಾಗಿದೆ. ಉನ್ನತ ಪೊಲೀಸ್ ಅಧಿಕಾರಿಗಳು ಸಹಕರಿಸುತ್ತಿದ್ದಾರೆ. ಮಂಗಳೂರಿನಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಭಯೋತ್ಪಾದಕ ಕೃತ್ಯ ನಡೆಸಲು ಪ್ರಯತ್ನಿಸುವವರ ಜನ್ಮ ಜಾಲಾಡಿ ಶಾಶ್ವತವಾಗಿ ಅವರು ನೆನಪಿಡುವ ಕ್ರಮ ಜರುಗಿಸಲಾಗುವುದು’

‘ಭಯೋತ್ಪಾದಕ ಕೃತ್ಯ ಮಾಡುವ ಮೂಲಕ ರಾಜ್ಯಕ್ಕೆ ಕೆಟ್ಟ ಹೆಸರು ತರುವ ಮತಾಂಧರ ಪ್ರಯತ್ನ ಜಾರಿಯಾಗಲು ಬಿಡುವುದಿಲ್ಲ. ದೇಶದ್ರೋಹಿ ಸಂಘಟನೆಗಳನ್ನು ನಿಷೇಧ ಮಾಡಿದ ಬಳಿಕ ವಿಧ್ವಂಸಕ ಕೃತ್ಯಗಳನ್ನು ಮಾಡಿ ಬಾಲ ಬಿಚ್ಚಲು ಕೆಲವರು ಹೊರಟಿದ್ದಾರೆ. ಭಯೋತ್ಪಾದನೆಯ ವಿರುದ್ಧದ ನಮ್ಮ ಸಮರದಲ್ಲಿ ನಾಗರಿಕರ ಸಹಕಾರ ಮುಖ್ಯ. ಕರ್ನಾಟಕದಲ್ಲಿ ನಮ್ಮ ಪೊಲೀಸ್ ಇಲಾಖೆ ಮಂಗಳೂರಿನ ಸ್ಫೋಟದ ಮೂಲ ಪತ್ತೆಹಚ್ಚುವಲ್ಲಿ ನಿರತವಾಗಿದ್ದು, ಕೇಂದ್ರದಿಂದ ಅಗತ್ಯ ನೆರವು ನೀಡಲಾಗಿದೆ’ ಎಂದು ಅವರು ಟ್ವೀಟ್ನಲ್ಲಿ ಹೇಳಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಸ್ಥಳೀಯ ಶಾಸಕ ವೇದವ್ಯಾಸ ಕಾಮತ್, ‘ಈ ಕೃತ್ಯದ ಬಗ್ಗೆ ಸಮಗ್ರ ತನಿಖೆ ಆಗಬೇಕು. ರಿಕ್ಷಾದಲ್ಲಿ ಪ್ರಯಾಣಿಸಿದ ವ್ಯಕ್ತಿ ಏಕೆ ಕುಕ್ಕರ್ ತಂದಿದ್ದ. ಎಲ್ಲಿ ಏನು ಮಾಡಬೇಕೆಂಬ ಉದ್ದೇಶ ಇತ್ತು ಎಂಬ ಬಗ್ಗೆಯೂ ಕೂಲಂಕಷವಾಗಿ ತನಿಖೆ ನಡೆಸಬೇಕು. ನಗರದಲ್ಲಿ ಯಾವತ್ತೂ ಬಾಂಬ್ ಸ್ಫೋಟ ನಡೆದಿರಲಿಲ್ಲ. ಕರ್ನಾಟಕ ಕೇರಳದ ಗಡಿ ಪ್ರದೇಶವಿದು. ಇಲ್ಲಿ ಘಟನೆ ಆದಾಗ ಕೇರಳಕ್ಕೆ ಪರಾರಿಯಾಗುತ್ತಾರೆ. ಇದನ್ನು ತಪ್ಪಿಸಲು ಎನ್ಐಎ ಘಟಕವನ್ನು ಮಂಗಳೂರಿನಲ್ಲಿ ಸ್ಥಾಪಿಸಬೇಕು’ ಎಂದು ಒತ್ತಾಯಿಸಿದ್ದಾರೆ.