Hate Speach : ಪುತ್ತೂರು: ನ 21 : ಕಾಣಿಯೂರಿನಲ್ಲಿ ವಾರದ ಹಿಂದೆ ನಡೆದ ಹಿಂದೂ ಬೃಹತ್ ಜಾಗೃತಿ ಸಮಾವೇಶದಲ್ಲಿ ದ್ವೇಷ ಭಾಷಣ ಮಾಡಿ, ಕೋಮು ಸಂಘರ್ಷ ನಡೆಸಲು ಹುನ್ನಾರ ನಡೆದಿದೆ. ಇದರ ವಿರುದ್ದ ಪೊಲೀಸ್ ಇಲಾಖೆಯೂ ಸುಪ್ರೀಂ ಕೋರ್ಟ್ ಆದೇಶದಂತೆ ಸುಮೋಟೋ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಕಾಂಗ್ರೆಸ್ ನಿಯೋಗವು ಪುತ್ತೂರು ಪೊಲೀಸ್ ಉಪ ಅಧೀಕ್ಷಕರ ಆಗ್ರಹಿಸಿದೆ
ನ.13 ರಂದು ಕಾಣಿಯೂರಿನಲ್ಲಿ ವಿಶ್ವ ಹಿಂದೂ ಪರಿಷದ್, ಭಜರಂಗದಳ, ಮಾತೃವಾಹಿನಿ ಹಾಗೂ ಹಿಂದೂ ಜಾಗರಣ ವೇದಿಕೆ ಸಂಘಟನೆಗಳು ಹಿಂದೂ ಬೃಹತ್ ಜಾಗೃತಿ ಸಮಾವೇಶ ಆಯೋಜಿಸಿತ್ತು. ಅದರಲ್ಲಿ ಹಿಂದೂ ಮುಖಂಡರುಗಳಾದ ರಘು ಸಕಲೇಶಪುರ, ಮುರಳಿಕೃಷ್ಣ ಹಸಂತ್ತಡ್ಕ, ಅರುಣ್ ಕುಮಾರ್ ಪುತ್ತಿಲ ಹಾಗೂ ಚಿನ್ಮಯ್ ರೈ ಈಶ್ವರಮಂಗಲರವರು ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು.
ಈ ವೇಳೆ ಈ ಭಾಷಣಕಾರರು ಅನ್ಯಧರ್ಮಗಳನ್ನು ಹೀಯಾಳಿಸಿ, ಅವರನ್ನು ದ್ವೇಷಿಸುವಂತೆ ಸ್ವಧರ್ಮೀಯರನ್ನು ಪ್ರೇರೇಪಿಸುವ ಮತ್ತು ಕಾನೂನನ್ನು ಕೈಗೆತ್ತಿಕೊಂಡು ಹಿಂಸಾಚಾರ ಎಸಗುವಂತೆ ಜನರನ್ನು ಉದ್ರೇಕಿಸುವ ದ್ವೇಷ ಭಾಷಣವನ್ನು ಮಾಡಿದ್ದಾರೆ ಎಂದು ನಿಯೋಗವು ಡಿವೈಎಸ್ ಪಿಯವರಿಗೆ ವಿವರಿಸಿದ್ದಾರೆ
ದೇಶದ ಸರ್ವೋಚ್ಚ ನ್ಯಾಯಾಲಯವು ದ್ವೇಷ ಭಾಷಣ ಮಾಡುವವರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತರಾಗಿ ಸುಮೋಟೋ ಪ್ರಕರಣ ದಾಖಲಿಸುವಂತೆ ಆದೇಶಿಸಿರುತ್ತದೆ. ಈ ಹಿನ್ನೆಲೆ ಸುಪ್ರೀಂ ಕೋರ್ಟ್ ಆದೇಶದಂತೆ ದ್ವೇಷ ಭಾಷಣ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿ ಕೋಮು ಸಾಮಾರಸ್ಯವನ್ನು ಕಾಪಾಡುವಂತೆ ದೂರಿನಲ್ಲಿ ತಿಳಿಸಲಾಗಿದೆ.
ಸುಪ್ರೀಂ ಆದೇಶದ ಉಲ್ಲಂಘನೆ
ಈ ದ್ವೇಷ ಭಾಷಣ ನಡೆದು ಇಂದಿಗೆ 8 ದಿನಗಳು ಆಗಿಹೋದರೂ ತಮ್ಮ ಪೊಲೀಸ್ ಇಲಾಖೆಯಿಂದ ಯಾವುದೇ ಕ್ರಮ ಕೈಗೊಳ್ಳದಿರುವುದು ಅತ್ಯಂತ ಆತಂಕಕಾರಿಯಾಗಿದೆ.ಇಲಾಖೆಯು ಈ ಪ್ರಕರಣದಲ್ಲಿ ಕೇಸು ದಾಖಲಿಸದೇ ಸುಮ್ಮನಿರುವುದು ಸುಪ್ರೀಂ ಕೋರ್ಟ್ ನ ಆದೇಶದ ಸ್ಪಷ್ಟ ಉಲ್ಲಂಘನೆ ಆಗಿರುತ್ತದೆ ಈ ಪ್ರಕರಣ ನಡೆದಿರುವುದು ದ ಕ ಜಿಲ್ಲೆಯ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಾಗಿರುತ್ತದೆ ,ಕಾಣಿಯೂರು ನಲ್ಲಿ ನಡೆದ ಈ ಸಭೆಗೆ ಬೆಳ್ಳಾರೆ ಪೊಲೀಸರು ಬಂದೋ ಬಸ್ತ್ ಮಾಡಿರುತ್ತಾರೆ ಮತ್ತು ಈ ಸಭೆಯ ಭಾಷಣವನ್ನು ವಿಡಿಯೋ ರೆಕಾರ್ಡ್ ಮಾಡಿರುತ್ತಾರೆ,
ಈ ಹಿಂದೆ ಇದೇ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಸೂದ್ ಹಾಗೂ ಪ್ರವೀಣ್ ನೆಟ್ಟಾರ್ ಎಂಬ ಯುವಕರ ಹತ್ಯೆ ನಡೆಡಿದ್ದು, ಇದರ ಮಾರನೇ ದಿನವೇ ಮಂಗಳೂರು ನಲ್ಲಿ ಫಾಝಿಲ್ ಎಂಬ ಯುವಕನ ಹತ್ಯೆ ನಡೆದಿರುವುದು ಪರಸ್ಪರ ಕೋಮು ದ್ವೇಷದಿಂದಾಗಿರುತ್ತದೆ ಈ ಸಂದರ್ಭದಲ್ಲಿ ಜಿಲ್ಲೆಯುಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣ ಆಗಿರುವುದು ಪೊಲೀಸ್ ಇಲಾಖೆಗೆ ಗೊತ್ತಿರುವ ವಿಷಯವಾಗಿರುತ್ತದೆ.
ಪ್ರಸ್ತುತ ಜಿಲ್ಲೆಯಲ್ಲಿ ಶಾಂತಿ – ನೆಮ್ಮದಿ ನೆಲೆಸಿದೆ. ಆದರೆ ಇದನ್ನು ಹಾಳು ಮಾಡುವ ವ್ಯವಸ್ಥಿತ ಷಡ್ಯಂತ್ರದ ಭಾಗವಾಗಿ ಹಾಗೂ ಮತ್ತೆ ಕೋಮು ಸಂಘರ್ಷ ಉಂಟಾಗಿ ಇನ್ನು ಹಲವು ಹತ್ಯೆಗಳು ನಡೆಯಲಿ ಎಂಬ ದುರುದ್ದೇಶ ಇಟ್ಟುಕೊಂಡು ಈ ಮೇಲಿನ ವ್ಯಕ್ತಿಗಳು ಕಾಣಿಯೂರಿನಲ್ಲಿ ಸಭೆ ನಡೆಸಿ,ಜನರನ್ನು ಉದ್ರೇಕಿಸುವ ರೀತಿಯಲ್ಲಿ ದ್ವೇಷ ಬಾಷಣ ಮಾಡಿರುತ್ತಾರೆ, ಯಾವುದೇ ವ್ಯಕ್ತಿ ಹಾಗೂ ಧರ್ಮಗಳ ವಿರುದ್ಧ ದ್ವೇಷ ಮಾಡುವುದನ್ನು ಕಾಂಗ್ರೆಸ್ ಪಕ್ಷ ಸಹಿಸುವುದಿಲ್ಲ. ಹಾಗಾಗಿ ಸುಪ್ರೀಂ ಕೋರ್ಟ್ ನ ಆದೇಶದಂತೆ ಕಾಣಿಯೂರಿನಲ್ಲಿ ದ್ವೇಷ ಬಾಷಣ ಮಾಡಿರುವ ಆರೋಪಿಗಳ ವಿರುದ್ದ ಕೇಸು ದಾಖಲಿಸಿ ,ಜಿಲ್ಲೆಯ ಕೋಮು ಸಾಮಾರಸ್ಯವನ್ನು ಕಾಪಾಡಬೇಕು ಎಂದು ಅಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಶಿವರಾಮ್ ಆಳ್ವ ಎನ್., ಚಂದ್ರಹಾಸ ಶೆಟ್ಟಿ, ಮುರಳೀಧರ ರೈ ಮಠಂತಬೆಟ್ಟು, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ್ ರೈ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ಕೆ. ಬಿ., ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ, ವಿಶಾಲಾಕ್ಷಿ ಬನ್ನೂರು, ಮುಕೇಶ್ ಕೆಮ್ಮಿಂಜೆ, ಅಮಲ ರಾಮಚಂದ್ರ, ನಗರಸಭಾ ಸದಸ್ಯ ಮಹಮ್ಮದ್ ರಿಯಾಝ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.