ಕೋಲ್ಕತ್ತಾ: ಎರಡು ಬಾರಿ ಕ್ಯಾನ್ಸರ್ ಗೆದ್ದು ಚೇತರಿಕೆಯಾಗಿದ್ದ ಬೆಂಗಾಲಿ ಸಿನಿಮಾರಂಗದ ಖ್ಯಾತ ನಟಿ ಆಯಂಡ್ರಿಲಾ ಶರ್ಮಾ (24) ಇತ್ತೀಚೆಗೆ ಪಾರ್ಶ್ವವಾಯುವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಇದೀಗ ನಟಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಐಂದ್ರಿಲಾ ಶರ್ಮಾ ಬೆಂಗಾಲಿ ಸಿನಿಮಾ ರಂಗದ ಜನಪ್ರಿಯ ನಟಿ. ಜುಮೂರ್, ಭೋಲೋ ಬಾಬಾ ಪರ್ ಕರೇಗಾ ಚಿತ್ರಗಳಲ್ಲಿ ನಟಿಸಿ, ಪ್ರಸಿದ್ಧಿ ಪಡೆದಿದ್ದರು.
ನ. 1 ರಂದು ಬ್ರೈನ್ ಸ್ಟ್ರೋಕ್ ನಿಂದ ಆಸ್ಪತ್ರೆಗೆ ದಾಖಲಾಗಿದ್ದ ಆಯಂಡ್ರಿಲಾ ಶರ್ಮಾ ಅವರ ಪರಿಸ್ಥಿತಿ ದಿನ ಕಳೆದಂತೆ ಹದಗೆಟ್ಟಿತ್ತು. ಅವರನ್ನು ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ನ.14 ರಂದು ಆಯಂಡ್ರಿಲಾ ಶರ್ಮಾರಿಗೆ ಅನೇಕಾ ಬಾರಿ ಹೃದಯ ಸ್ತಂಭನ (ಕಾರ್ಡಿಯಾಕ್ ಅರೆಸ್ಟ್) ಉಂಟಾಗಿತ್ತು. ನ.20 ( ಭಾನುವಾರ) ಅವರು ಕೊನೆಯುಸಿರೆಳೆದಿದ್ದಾರೆ ಎಂದು ವರದಿ ತಿಳಿಸಿದೆ.
ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ನಟಿಗೆ ಕ್ಯಾನ್ಸರ್ ರೋಗ ವಕ್ಕರಿಸುತ್ತದೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆದ ಪರಿಣಾಮ ಕ್ಯಾನ್ಸರ್ ನಿಂದ ಆಯಂಡ್ರಿಲಾ ಹೊರ ಬಂದಿದ್ದರು. ಆದರೆ ಸ್ವಲ್ಪ ಸಮಯದ ಬಳಿಕ ಮತ್ತೆ ಚಿತ್ರರಂಗಕ್ಕೆ ಮರಳಿದ ಮೇಲೆ ಅವರಿಗೆ ಮತ್ತೊಮ್ಮೆ ಕ್ಯಾನ್ಸರ್ ಕಾಡುತ್ತದೆ. ಈ ಬಾರಿಯೂ ದಿಟ್ಟೆಯಾಗಿ ಹೋರಾಡಿ, ಆಪರೇಷನ್ ಮೂಲಕ ಕ್ಯಾನ್ಸರ್ ಗೆಡ್ಡೆ ತೆಗೆದು, ಕೀಮೋಥೆರಪಿಗೆ ಒಳಗಾಗಿ ಕ್ಯಾನ್ಸರ್ ಗೆದ್ದು, ಇತರರಿಗೆ ಸ್ಪೂರ್ತಿಯಾಗಿದ್ದರು.

ಬಂಗಾಳಿ ಜನಪ್ರಿಯ ಧಾರಾವಾಹಿಯಾದ ‘ಜೀಬನ್ ಜ್ಯೋತಿ, ಜೀಬನ್ ಕಾತಿ’ಯಲ್ಲಿ ಅವರು ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದರು. ಅಲ್ಲದೇ ಅನೇಕ, ಧಾರಾವಾಹಿಗಳಲ್ಲಿ, ವೆಬ್ಸಿರೀಸ್ಗಳಲ್ಲಿ ನಟಿಸಿದ್ದರು. ಸೋಶಿಯಲ್ ಮಿಡಿಯಾದಲ್ಲಿ ಸಕ್ರಿಯರಾಗಿದ್ದರು.
ಕಳೆದ ವಾರವಷ್ಟೇ ‘ಕುಸುಮ್’, ‘ಕಸೌತಿ ಝಿಂದಗಿ ಕಿ’ ಮತ್ತು ‘ಝಿದ್ದಿ ದಿಲ್ ಮಾನೆ ನಾ’ ನಂತಹ ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ಕಿರುತೆರೆ ನಟ ಸಿದ್ಧಾಂತ್ ಸೂರ್ಯವಂಶಿ (46) ಅವರು ಜಿಮ್ನಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತದಿಂದ ಮುಂಬೈನಲ್ಲಿ ನಿಧನರಾಗಿದ್ದರು.