ಬೆಂಗಳೂರು: ಸಚಿವ ಅಶ್ವತ್ಥ್ ನಾರಾಯಣ (Dr C N Ashwath Narayan) ಅವರ ಸಂಬಂಧಿ ಮಾಲಕತ್ವದ ‘ಹೊಂಬಾಳೆ’ (Hombale) ಕಂಪೆನಿಯಲ್ಲಿರುವ ಸಿಬ್ಬಂದಿಯೇ ಮತದಾರರ ಮತಪಟ್ಟಿ ಅಕ್ರಮ ಪ್ರಕರಣದಲ್ಲಿರುವ ಚಿಲುಮೆ (Chilume) ಸಂಸ್ಥೆಯಲ್ಲೂ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಆರೋಪಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಂಭೀರ ಪ್ರಕರಣ ಬೆಳಕಿಗೆ ಬಂದರೂ, ಚಿಲುಮೆ ಸಂಸ್ಥೆಯ ನಿರ್ದೇಶಕರನ್ನು ಈವರೆಗೂ ಬಂಧಿಸಿಲ್ಲ. ಅಷ್ಟೇ ಅಲ್ಲದೆ, ನಿನ್ನೆ ಆ ಸಂಸ್ಥೆ ಕಚೇರಿಯಲ್ಲಿ ನೋಟು ಏಣಿಕೆ ಯಂತ್ರ ಲಭಿಸಿದೆ. ಇದರ ಹಿಂದೆ ಹಲವು ಶಂಕೆ ಹುಟ್ಟುಹಾಕಿದೆ ಎಂದು ಅವರು ತಿಳಿಸಿದರು.
ಇದರ ನಡುವೆ ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿರುವ ಮತದಾರರ ಮಾಹಿತಿ ಕದ್ದ ‘ಚಿಲುಮೆ’ (Chilume) ಸಂಸ್ಥೆಯ ಪ್ರಕರಣ ಸಂಬಂಧ ಇಬ್ಬರು ನಿರ್ದೇಶಕರನ್ನು ವಶಕ್ಕೆ ಪಡೆದಿರುವ ಇಲ್ಲಿನ ಹಲಸೂರು ಗೇಟ್ ಠಾಣಾ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಇದರ ನಡುವೆ ರಾಜ್ಯ ಸರಕಾರದ ಪ್ರಭಾವಿ ಸಚಿವರೊಬ್ಬರ ಹೆಸರಿನ ಚೆಕ್‍ಗಳನ್ನು ಜಪ್ತಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಇದು ಮತದಾನದ ಹಕ್ಕನ್ನು ಕಸಿದು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುವಂತಹ ಅಪರಾಧವಾಗಿದೆ ಎಂದ ಅವರು, ನಾನು ರಾಜ್ಯ ಹೈಕೋರ್ಟ್ ನ್ಯಾಯಾಧೀಶರಿಗೆ ಕೈಮುಗಿದು ಕೇಳಿಕೊಳ್ಳುತ್ತೇನೆ. ಈ ವಿಚಾರದಲ್ಲಿ ಸುಮೋಟೋ ಪ್ರಕರಣ ದಾಖಲಿಸಿಕೊಳ್ಳಬೇಕು. ಆಕ್ಸಿಜನ್ ದುರಂತ ಪ್ರಕರಣದಲ್ಲಿ ಸುಮೋಟೋ ಪ್ರಕರಣ ದಾಖಲಿಸಿದಂತೆ ಈ ವಿಚಾರದಲ್ಲಿ ಸುಮೋಟೋ ಪ್ರಕರಣ ದಾಖಲಿಸಿ ನಿಮ್ಮ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಎಂದು ಡಿಕೆಶಿ ಆಗ್ರಹಿಸಿದರು.
ಇಬ್ಬರು ವಶಕ್ಕೆ : ಶನಿವಾರವೂ ಕಾರ್ಯಾಚರಣೆ ಮುಂದುವರೆಸಿದ ತನಿಖಾ ತಂಡ, ಆರೋಪಿಗಳ ಮನೆ, ಕಚೇರಿ ಸೇರಿದಂತೆ ಹಲವು ಕಡೆ ದಾಳಿ ನಡೆಸಿ, ಮಾಹಿತಿ ಸಂಗ್ರಹಿಸಿತು. ಆನಂತರ, ಸಂಸ್ಥೆಯ ನಿರ್ದೇಶಕರು ಎಂದು ಗುರುತಿಸಿಕೊಂಡಿದ್ದ ಐಶ್ವರ್ಯಾ ಹಾಗೂ ಶೃತಿ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.ತನಿಖೆ ಕೈಗೆತ್ತಿಕೊಳ್ಳುತ್ತಿದ್ದಂತೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್ ಮತ್ತು ಕೆಂಪೇಗೌಡ ಯಾನೆ ಕೃಷ್ಣೇಗೌಡ ಇಬ್ಬರು ಪರಾರಿಯಾಗಿದ್ದಾರೆ. ಇಬ್ಬರು ಸಹ ಪ್ರಮುಖ ಸ್ಥಾನದಲ್ಲಿದ್ದು, ಚಿಲುಮೆ ನಡೆಸಿದ ಎಲ್ಲ ಸಮೀಕ್ಷೆ ಕಾರ್ಯಗಳ ಜವಾಬ್ದಾರಿ ಅವರೇ ವಹಿಸಿದ್ದರು ಎನ್ನಲಾಗಿದೆ.