ಪುತ್ತೂರು: ಡಿ 3 : ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪಶ್ಚಿಮ ದಿಕ್ಕಿನಲ್ಲಿರುವ ಕೆರೆಯ ನೀರಿಗೆ ಸಂಜೀವಿನಿ ಶಕ್ತಿಯಿದೆ. ಈ ವಿಚಾರ ಜನರಿಗೆ ತಿಳಿದಿಲ್ಲ. ಈ ನೀರನ್ನು ಶಾಸ್ರೋಕ್ತವಾಗಿ ಅಭಿಮಂತ್ರಿಸಿದಲ್ಲಿ ರೋಗನಿವಾರಕ ಶಕ್ತಿಯಾಗಿ ಬಳಸಬಹುದು ಎಂದು ದೇವಸ್ಥಾನದಲ್ಲಿ ನಡೆಯುತ್ತಿರುವ ಅಷ್ಟಮಂಗಲ ಪ್ರಶ್ನೆ ಚಿಂತನೆಯಲ್ಲಿ ಕಂಡು ಬಂದಿದೆ.
ಜ್ಯೋತಿರ್ವಿದ್ವಾನ್ ವಳಕ್ಕುಂಜ ವೆಂಕಟರಮಣ ಭಟ್ ಮತ್ತು ಡಾ|ವಳಕ್ಕುಂಜ ಮುರಳೀಕೃಷ್ಣ ಭಟ್ ನೇತೃತ್ವದಲ್ಲಿ ದೇವಾಸ್ಥಾನದ ಸಭಾಭವನದಲ್ಲಿ ಕಳೆದ ಐದು ದಿನಗಳಿಂದ ಅಷ್ಟಮಂಗಲ ಪ್ರಶ್ನೆ ಚಿಂತನೆ ನಡೆಯುತ್ತಿದೆ
ಶ್ರೀ ಮಹಾಲಿಂಗೇಶ್ವರ ದೇವರಿಗೆ ಈ ಕೆರೆ ಎಷ್ಟು ಪ್ರೀತಿಪಾತ್ರವೋ, ವಿಷ್ಣು ದೇವರಿಗೂ ಇದು ಪ್ರೀತಿ ಪಾತ್ರವಾಗಿದೆ.ಅದೇ ರೀತಿ ಈ ಕೆರೆಗೆ ಸಂಬಂಧಿಸಿ ಭಗವತಿ(ಪಾರ್ವತಿ ಸಾಮೀಪ್ಯದ ಅಂಶವೂ ಸೇರಿಕೊಂಡಿದೆ.ಶಿವ ಸುಬಂಧವಾದ ಮೃತ್ಯುಂಜಯ ಮಂತ್ರ ಮತ್ತು ವೈದ್ಯನಾಥ ಮಂತ್ರ ಹಾಗೂ ವಿಷ್ಣು ಸಂಬಂಧವಾದ ಧನ್ವಂತರಿ ಮಂತ್ರವನ್ನು ಅಭಿಮಂತ್ರಿಸಿ ಈ ನೀರನ್ನು ನೀಡಿದಲ್ಲಿ ರೋಗ ನಿವಾರಕವಾಗಿ ಕೆಲಸ ಮಾಡಬಲ್ಲುದು ಎಂದು ದೈವಜ್ಞರ ನುಡಿಯಲ್ಲಿ ಕೇಳಿ ಬಂತು.

ಮಹಾದೇವನಿಗೆ ಈ ನೆಲದಲ್ಲಿ ಮೊದಲು ಅರ್ಪಣೆಯಾಗಿದ್ಧೇ ಅವಲಕ್ಕಿ ನೈವೇದ್ಯ
ಪುತ್ತೂರು : ಡಿ 3 : ಶ್ರೀ ಮಹಾಲಿಂಗೇಶ್ವರ ಈ ಮಣ್ಣಿನಲ್ಲಿ ಲಿಂಗ ಸ್ವರೂಪಿಯಾಗಿ ಮೊದಲ ಬಾರಿ ಪ್ರಕಟಗೊಂಡಾಗ ಪ್ರಥಮವಾಗಿ ಸಮರ್ಪಣೆಯಾಗಿದ್ದೇ ಅವಲಕ್ಕಿ ನೈವೇದ್ಯ. ಇದನ್ನು ಜನ ಸಮುದಾಯದ ವರ್ಗದವರೇ ತಯಾರಿಸಿ ಮಣ್ಣಿನ ಮಡಕೆಯಲ್ಲಿ ತುಂಬಿಸಿ ತಂದು ದೇವರಿಗೆ ಅರ್ಪಿಸಿದ್ದರು. ಇದು ಶಿವನಿಗೆ ಅತ್ಯಂತ ಪ್ರಿಯವಾಗಿದೆ.ಈ ಸಂಪ್ರದಾಯ ನಂತರ ನಿಂತಿದೆ. ವರ್ಷದ ನಿರ್ದಿಷ್ಟ ಉತ್ಸವಗಳ ಸಂದರ್ಭದಲ್ಲಾದರೂ ಮಣ್ಣಿನ ಮಡಕೆಯಲ್ಲಿ ಅವಲಕ್ಕಿ ನೈವೇದ್ಯ ಮಾಡಿ ತಂದು ಅರ್ಪಿಸಬೇಕು. ನೈವೇದ್ಯವನ್ನು ಸೆಗಣಿ ಸಾರಿಸಿದ ಸಹಜ ನೆಲದಲ್ಲಿ ತಯಾರಿಸಬೇಕು ಎಂದು ಪ್ರಶ್ನೆಯಲ್ಲಿ ಕಂಡು ಬಂದಿದೆ.
ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಲಿಂಗೇಶ್ವರನಿಗೆ ಪ್ರಿಯವಾದ ಶಾಸ್ತ್ರೀಯವಾದ ಮತ್ತು ಧರ್ಮಪರವಾದ ಕಲೆಗಳನ್ನು ಪೋಷಿಸತಕ್ಕದ್ದು. ಆಡಳಿತ ಮಂಡಳಿಯವರು ಇತ್ತೀಚೆಗೆ ಧಾರ್ಮಿಕ ಶಿಕ್ಷಣ ಶಿಬಿರ ಪ್ರಾರಂಭಿಸಿದ್ದು ಉತ್ತಮ ವಿಚಾರ ಎಂದರು. ಸಾಮಗಾನ ದೇವಳದಲ್ಲಿ ನಡೆಯುತ್ತಿತ್ತು.ವಿಶಿಷ್ಟ ಪರಾತನ ವಾದ್ಯವೊಂದರಿಂದ ದೇವರಿಗೆ ಸೇವೆ ನಡೆಯುತ್ತಿತ್ತು.ಅದೆಲ್ಲ ಈಗ ನಿಂತಿದೆ ಎಂಬುದು ಚಿಂತನೆಯಲ್ಲಿ ಕಂಡು ಬಂದಿದೆ.

ಕಲಾತಂಡದಿಂದ ಲೋಕ ಕೀರ್ತಿ :
ವರ್ಷಕ್ಕೊಮ್ಮೆಯಾದರೂ ದೇವಳದಲ್ಲಿ ಚತುರ್ವೇದ ಪಾರಾಯಣ ನಡೆಯಬೇಕು.ಇದಲ್ಲದೆ ಅಷ್ಟಾವಧಾನ ಸೇವೆಯೂ ನಡೆಯಬೇಕು.ದೇವಳದಲ್ಲಿ ಸಂಗೀತ, ನಾಟ್ಯ, ವಾದನ, ಅಭಿನಯ ಸಂಬಂಧಿ ಕಲಾಪ್ರಕಾರಗಳನ್ನು ಮಾಡುವುದು ದೇವರಿಗೆ ಪ್ರೀತ್ಯರ್ಥ ಇದನ್ನು ಮಾಡುವವನಿಗೂ ಕೀರ್ತಿ ಸಿಗುತ್ತದೆ. ಪೌರಾಣಿಕ, ಧಾರ್ಮಿಕ ಕಥಾನಕಗಳನ್ನೇ ಪ್ರದರ್ಶಿಸುವ ಕಲಾತಂಡವನ್ನು ದೇವಳದ ವತಿಯಿಂದ ಮಾಡಿದರೂ ಲೋಕಕೀರ್ತಿ ಸಂಪಾದನೆಯಾಗಲಿದೆ ಎಂದು ಪ್ರಶ್ನೆಯಲ್ಲಿ ಕಂಡುಬಂತು. ಸಾಧ್ಯವಾದಷ್ಟು ಹೊಸ ಯೋಜನೆಗಳಿಗಿಂತ ಹಿಂದೆ ಇದ್ದಂತಹ ಆಚರಣೆಗಳೇನಿತ್ತೋ ಅದನ್ನು ಚಾಲನೆ ಮಾಡಿ, ಆ ರೀತಿಯಾಗಿ ಮಾಡಿದರೆ ಮಹಾಲಿಂಗೇಶ್ವರನಿಗೆ ಪ್ರಿಯವಾದೀತು ಎಂದರು.
ವಿಷ್ಣು ಕೋಪ
ದೇಗುಲದ ಪಶ್ಚಿಮ ದಿಕ್ಕಿನಲ್ಲಿ 2, ಉತ್ತರ ಮತ್ತು ದಕ್ಷಿಣ ದಿಕ್ಕಿನಲ್ಲಿ ತಲಾ ಒಂದೊಂದು ವಿಷ್ಣು ಸಾನಿಧ್ಯಗಳು ಇದ್ದವು. ಪ್ರಸ್ತುತ ಅವುಗಳು ಅಸ್ತಿತ್ವದಲ್ಲಿ ಇಲ್ಲ ಎಂದು ಕಂಡು ಬಂತು. ಇದರಿಂದ ವಿಷ್ಣು ಕೋಪದ ಲಕ್ಷಣ ಕಾಣುತ್ತಿದೆ. ದೇವಳದ ಉತ್ತರ ದಿಕ್ಕಿನಲ್ಲಿ ಮಠವೊಂದು ಅಸ್ತಿತ್ವದಲ್ಲಿ ಇದ್ದ ಬಗ್ಗೆ ಗೋಚರವಾಗುತ್ತಿದೆ. ಅಲ್ಲಿ ನಾಗದೇವರಿಗೆ ಹೆಚ್ಚಿನ ಪ್ರಾಶಸ್ತ ಇದ್ದಿದ್ದು ಕಾಣುತ್ತಿದೆ.
ಉತ್ತರ ಈಶಾನ್ಯ ದಿಕ್ಕಿನಲ್ಲಿ ಪುರಾತನ ನಾಗಬ್ರಹ್ಮ ಸಾನಿಧ್ಯವೊಂದು ಇರುವ ಬಗ್ಗೆ ಇನ್ನಷ್ಟು ಅಳವಾಗಿ ಶೋಧಿಸಬೇಕಾಗಿದೆ. ದೇಗುಲದ ಉತ್ತರ ದಿಕ್ಕಿನಲ್ಲಿ ಕುಂಬಾರ ಸಮುದಾಯದ ಮನೆತನ ಇದ್ದಿದ್ದು, ಇವರಿಗೂ ದೇಗುಲದ ಸೇವೆಗೂ ಸಂಬಂಧವಿತ್ತು ಎಂದು ಕಂಡು ಬಂತು.
ಅರ್ಚಕರ ಬಗ್ಗೆ
ಮಹಾಲಿಂಗೇಶ್ವರ ದೇವಾಲಯದ ಅರ್ಚಕ ವರ್ಗಕ್ಕೆ ಸಂಬಂಧಿಸಿ ಪ್ರಾಚೀನ ಕಾಲದಲ್ಲಿ 2 ಕುಟುಂಬಗಳು ಪ್ರಧಾನವಾಗಿ ಇದ್ದುದು ಗೋಚರಿಸುತ್ತಿದೆ.ವಿಶೇಷವಾಗಿ ಸಾಮವೇದಿಗಳು ಮತ್ತು ಯಜುರ್ವೇದಿಗಳ ಸೇವೆ ಕಂಡು ಬರುತ್ತಿದೆ.
ಕೊನೆಗೆ ತೀರ್ಮಾನ.
ದೈವಜ್ಞರ ತೀರ್ಮಾನ ಅನ್ನುವಂತಹದ್ದು ಪ್ರಶ್ನೆಯ ಕೊನೆಗೆ ಬರುವಂತಹದ್ದು.ಅಲ್ಲಿಯ ತನಕ ಯಾವುದೂ ತೀರ್ಮಾನ ಇಲ್ಲ.ಹಲವು ಆಯಾಮಗಳಲ್ಲಿ ಚಿಂತನೆಗಳು ಹೋಗುತ್ತವೆ. ಚರಿತ್ರೆಯ ಕಥೆಗಳಿರಬಹದು.ಆದರೆ ಸಾಕ್ಷಾತ್ ಮಹಾಲಿಂಗೇಶ್ವರ ದೇವರೇ ತೀರ್ಮಾನ ಮಾಡಿಕೊಳ್ಳುವ ವ್ಯವಸ್ಥೆ ಇಲ್ಲಿದೆ ಎಂದು ದೈವಜ್ಞರು ನುಡಿದಿದ್ದಾರೆ.
ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಸಮಿತಿಯ ಸದಸ್ಯರಾದ ರಾಮಚಂದ್ರ ಕಾಮತ್, ರಾಮದಾಸ್ ಗೌಡ, ರವೀಂದ್ರನಾಥ್ ರೈ ಬಳಮಜಲು, ಬಿ.ಐತ್ತಪ್ಪ ನಾಯ್ಕ, ವೀಣಾ ಬಿ.ಕೆ., ಡಾ.ಸುಧಾ ಎಸ್. ರಾವ್, ಶೇಖರ ನಾರಾವಿ, ಪ್ರಧಾನ ಆರ್ಚಕ ವಿ.ಎಸ್.ಭಟ್, ವಸಂತ ಕೆದಿಲಾಯ, ಜಯರಾಮ ಜೋಯಿಷ, ದೇವಾಲಯದ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಗೋವಿಂದ ಭಟ್ ಮೈಸೂರು, ವಾಸ್ತು ಇಂಜಿನಿಯರ್ ಪಿ.ಜಿ. ಜಗನ್ನಿವಾಸ ರಾವ್, ಮಾಜಿ ಆಡಳಿತ ಮೊಕ್ತಿಸರ ಎನ್.ಕೆ. ಜಗನ್ನಿವಾಸ ರಾವ್, ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ಸಂತೋಷ್ ಕುಮಾರ್ ಎ, ಪ್ರಮುಖರಾದ ಕೇವಳು ಬಾಳಪ್ಪ ಪೂಜಾರಿ, ಕಿಟ್ಟಣ್ಣ ಗೌಡ ಬಪ್ಪಳಿಗೆ, ಮಾಜಿ ಪುರಸಭಾಧ್ಯಕ್ಷ ರಾಜೇಶ್ ಬನ್ನೂರು, ಕಲ್ಲೇಗ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಜಿತ್ ಕುಮಾರ್, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ಕರುಣಾಕರ ಸುವರ್ಣ, ಸದಸ್ಯ ಜಯಂತ ಪರೋಳಿ ಮತ್ತು ಸೀಮೆಯ ಭಕ್ತಾದಿಗಳು ಪ್ರಶ್ನಾ ಚಿಂತನೆಯಲ್ಲಿ ಭಾಗವಹಿಸಿದರು.
ಸ್ತನ ಕ್ಯಾನ್ಸರ್ – ಲಕ್ಷಣಗಳು ಆಧುನಿಕ ಚಿಕಿತ್ಸಾ ವಿಧಾನ ಮತ್ತು ತಡೆಗಟ್ಟುವ ಬಗೆ ಇಲ್ಲಿದೆ ಮಾಹಿತಿ : ಮಹಿಳೆಯರು/ ಯುವತಿಯರು ನೋಡಲೇಬೇಕಾದ ವಿಡಿಯೋ