ಡಿ :3 : ಪುತ್ತೂರಿನ ಕೊಂಬೆಟ್ಟು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎರಡು ಅನ್ಯ ಕೋಮಿನ ವಿದ್ಯಾರ್ಥಿಗಳೊಳಗೆ ನಡೆದ ಗಲಾಟೆ ಪೂರ್ವನಿಯೋಜಿತ ಕೃತ್ಯವಾಗಿದ್ದು ಇದರ ಹಿಂದೆ ಸಂಘಟನೆಯ ಕೆಲ ಮುಖಂಡರ ಪಾತ್ರವಿದೆ ಎಂದು ವ್ಯಕ್ತಿಯೊಬ್ಬರು ನೀಡಿರುವ ದೂರನ್ನು ಸ್ವೀಕರಿಸಿರುವ ಪುತ್ತೂರು ಠಾಣೆ ಪೊಲೀಸರು ಡಿ 2 ರಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎಸ್ಡಿಪಿಐ ಪಕ್ಷ ಹಾಗೂ ಅದರ ವಿದ್ಯಾರ್ಥಿ ಸಂಘಟನೆಯಾದ ಸಿಎಫ್‌ಐ ನ ಪುತ್ತೂರಿನ ಮುಖಂಡರುಗಳಾದ ಮಹಮ್ಮದ್ ಜಾಬೀರ್, ಸವಾದ್ ಕಲಾರ್ಪೆ ಮತ್ತು ಇನ್ನಿತರ ಸಂಘಟನೆಯ ಪ್ರಮುಖರ ವಿರುದ್ದ ಪ್ರಕರಣ ದಾಖಲಾಗಿದೆ. ಬೆಟ್ಟಂಪಾಡಿಯ ಪುರುಷೋತ್ತಮ ಆಚಾರ್ಯ ಎಂಬವರು ಆರೋಪಿಗಳ ವಿರುದ್ದ ದೂರು ನೀಡಿದ್ದರು
ಸವಾದ್ ಕಲರ್ಪೆ ಹಾಗೂ ಮಹಮ್ಮದ್ ಜಾಬೀರ್ ಎಂಬುವವರು ನ 23 ರಂದು ಬಹಿರಂಗವಾಗಿ ವಿದ್ಯಾರ್ಥಿಗಳನ್ನು ಗಲಭೆಗೆ ಪ್ರಚೋದಿಸುವ ಅನ್ನ ಕೋಮಿನವರ ವಿರುದ್ಧ ಎತ್ತಿಕಟ್ಟುವ ಪ್ರಚೋದನಾತ್ಮಕ ಭಾಷಣ ಮಾಡಿರುತ್ತಾರೆ. ಕಾಲೇಜಿನ ವಿದ್ಯಾರ್ಥಿಗಳ ನಡುವೆ ಕೋಮು ಉದ್ವಿಗ್ನತೆಯನ್ನು ಉಂಟು ಮಾಡಿ ಕಾಲೇಜಿನ ಪರಿಸರದಲ್ಲಿ ಶಾಂತಿ ಕದಡುವ ಸ್ಥಿತಿಯನ್ನು ಉಂಟು ಮಾಡಿರುತ್ತಾರೆ ಅಲ್ಲದೇ ಅನ್ಯ ಕೋಮುಗಳ ವಿರುದ್ಧ ಕೋಮು ಪ್ರಚೋದನೆ ಬರುವ ರೀತಿಯಲ್ಲಿ ಸಂದೇಶವನ್ನು ರವಾನಿಸಿ ಜನರನ್ನು ದಾರಿ ತಪ್ಪಿಸುವ ಹುನ್ನಾರವನ್ನು ಮಾಡಿದ್ದಾರೆ ಎಂದು ಆಚಾರ್ಯರವರು ದೂರಿನಲ್ಲಿ ಆರೋಪಿಸಿದ್ದರು.
ಆರೋಪಿಗಳ ವಿರುದ್ದ ದೊಂಬಿಗೆ ಪ್ರಚೋಧನೆ ನೀಡಿದ ಆರೋಪದಲ್ಲಿ ಐಪಿಸಿ ಸೆಕ್ಷನ್ 1860 (U/S 153 A 34) ನಂತೆ ಪ್ರಕರಣ ದಾಖಲಾಗಿದೆ.

ಕಳೆದ ಕೆಲ ವಾರಗಳಿಂದ ಮಗ್ಗಲ ಮುಳ್ಲಾಗಿ ಕಾಡುತ್ತಿರುವ ಪುತ್ತೂರು ಜ್ಯೂ. ಕಾಲೇಜ್ ವಿವಾದವನ್ನು ತಣ್ಣಗಾಗಿಸುವ ನಿಟ್ಟಿನಲ್ಲಿ ಪುತ್ತೂರು ಪೊಲೀಸರು ಕೊನೆಗೂ ಕಾರ್ಯೋನ್ಮುಖರಾದಂತೆ ಕಂಡು ಬರುತ್ತಿದೆ. ಮೊದಲು ವಿದ್ಯಾರ್ಥಿಗಳ ನಡುವಿನ ಹೊಡೆದಾಟವನ್ನು ಮಕ್ಕಳ ಜಗಳ ಎಂದು ಪೊಲೀಸರು ಒಂದಷ್ಟು ರಿಯಾಯಿತಿ ತೋರಿಸಿದ್ದರು. ಇದನ್ನೆ ದುರುಪಯೋಗ ಪಡಿಸಿಕೊಂಡು ಇರಿತದಂತಹ ಕೃತ್ಯಕ್ಕೆ ಮುಂದಾದಾಗ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ ಈಗ ಪ್ರಕರಣದಲ್ಲಿ ಬಾಗಿಯಾದವರನ್ನು ಹುಡುಕಿ ಹುಡುಕಿ ಪ್ರಕರಣ ದಾಖಲಿಸುತ್ತಿದೆ.
ಕಳೆದ ಒಂದು ವಾರದಲ್ಲಿ ಕಾಲೇಜ್ ವಿದ್ಯಾರ್ಥಿಗಳ ಹೊಡೆದಾಟದ ಸುತ್ತ ನಾಲ್ಕಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇನ್ನು ಈ ಪ್ರಕರಣ ತಹಬದಿಗೆ ಬಾರದಿದ್ದರೇ ಪೊಲೀಸ್ ಇಲಾಖೆ ಇನ್ನಷ್ಟು ಕಠಿನ ಕ್ರಮಕ್ಕೆ ಮುಂದಾಗುವ ಸಾಧ್ಯತೆ ಇದೆಯೆಂದು ಮೂಲಗಳಿಂದ ತಿಳಿದು ಬಂದಿದೆ.
ಸ್ತನ ಕ್ಯಾನ್ಸರ್ – ಲಕ್ಷಣಗಳು ಆಧುನಿಕ ಚಿಕಿತ್ಸಾ ವಿಧಾನ ಮತ್ತು ತಡೆಗಟ್ಟುವ ಬಗೆ ಇಲ್ಲಿದೆ ಮಾಹಿತಿ : ಮಹಿಳೆಯರು/ ಯುವತಿಯರು ನೋಡಲೇಬೇಕಾದ ವಿಡಿಯೋ