ಪುತ್ತೂರು : ಡಿ 2 : ನಿರಂತರವಾಗಿ ಮರ ಕಳ್ಳತನವಾಗುತ್ತಿರುವ ಕುರಿತು ಪ್ರಖ್ಯಾತ ಕನ್ನಡ ವಾಹಿನಿ ಏಷ್ಯಾನೆಟ್ ಸುವರ್ಣ ನ್ಯೂಸ್ ಚಾನೆಲ್‌ನ ಕವರ್ ಸ್ಟೋರಿಯಲ್ಲಿ ವರದಿ ಪ್ರಸಾರವಾದ ಹಿನ್ನೆಲೆಯಲ್ಲಿ ಪುತ್ತೂರಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಟಿ.ಪಿ. ಕಾರ್ಯಪ್ಪರವರಿಗೆ ಮಂಗಳೂರು ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ದಿನೇಶ್ ಕುಮಾರ್ ಅವರು ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದ್ದಾರೆ.
ಏಷ್ಯಾ ನೆಟ್ ಸುವರ್ಣ ನ್ಯೂಸ್ ಚಾನಲ್ ಕೆಲವು ದಿನಗಳ ಹಿಂದೆ, ಮರ ಕಡಿದ ಪ್ರಕರಣದ ಬಗ್ಗೆ ರಹಸ್ಯ ಕಾರ್ಯಾಚರಣೆ ನಡೆಸಿ ಕವರ್ ಸ್ಟೋರಿಯಲ್ಲಿ ವಿಸ್ಮತ ವರದಿ ಪ್ರಕಟಿಸಿತ್ತು. ಬೆಳ್ತಂಗಡಿ ತಾಲೂಕಿನ ಕೊಟ್ಟೂರು. ಗ್ರಾಮದ ಅದ್ಯಾಲು ಅರಣ್ಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಅರಣ್ಯ ಇಲಾಖೆಯವರ ಬೆಂಬಲದೊಂದಿಗೆ ಮರಗಳ ಮಾರಣಹೋಮ ನಡೆಯುತ್ತಿದೆ. ಟಿಂಬರ್ ಮಾಫಿಯಾ ಜೊತೆ ಶಾಮೀಲಾಗಿ ಮರಗಳ್ಳತನ ಆಗುತ್ತಿದೆ. ವಾರಗಳ ಕಾಲ ಮರಗಳ ಮಾರಣಹೋದು ನಡೆದಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ ಎ೦ದು ವರದಿಯಲ್ಲಿ ತಿಳಿಸಲಾಗಿತ್ತು .
ಈ ನಿಟ್ಟಿನಲ್ಲಿ ಕಾರಣ ಕೇಳಿ ನೊಟೀಸ್ ಜಾರಿಗೊಳಿಸಲಾಗಿದ್ದು, ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ವೈಫಲ್ಯದ ಬಗ್ಗೆ ಉಲ್ಲೇಖಿಸಲಾಗಿದೆ. ಮರ ಕಡಿದು ದಿಮ್ಮಿಗಳಾಗಿ ಪರಿವರ್ತಿಸಿದ್ದರೂ ಪತ್ತೆ ಹಚ್ಚುವಲ್ಲಿ ಇಲಾಖಾ ಸಿಬ್ಬಂದಿ ಸಂಪೂರ್ಣ ವಿಫಲವಾಗಿದ್ದಾರೆ, ಇಡೀ ಪ್ರಕರಣದಲ್ಲಿ ಇಲಾಖಾ ಸಿಬ್ಬಂದಿಯ ಸಂಪೂರ್ಣ ನಿರ್ಲಕ್ಷ್ಯ ಇದೆ, ಮುಂಚೂಣಿ ಸಿಬ್ಬಂದಿ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಮತ್ತು ಮೇಲಾಧಿಕಾರಿಗೆ ಅವರ ಮೇಲೆ ನಿಯಂತ್ರಣ ಇಲ್ಲ ಎಂದು ನೋಟಿಸ್ ನಲ್ಲಿ ತಿಳಿಸಲಾಗಿದ್ದು ಇಡೀ ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸಿ, ಯಾರು ಹೊಣೆಗಾರರು ಎಂಬ ಬಗ್ಗೆ ವರದಿ ನೀಡಿ ಉತ್ತರ ನೀಡಲು ಸೂಚಿಸಲಾಗಿದೆ.
ಈ ಘಟನೆ ಮೇಲಾಧಿಕಾರಿಯಾದ ನಿಮ್ಮ ಗಮನಕ್ಕೆ ಬಾರದಿರುವುದು ಮತ್ತು ಕ್ರಮ ಕೈಗೊಳ್ಳದಿರುವುದು ವಿಪರ್ಯಾಸವಾಗಿದೆ. ಈ ಬಗ್ಗೆಯೂ ವಿವರಣೆ ನೀಡಬೇಕು ಎಂದು ಪುತ್ತೂರು ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ.ಪಿ.ಕಾರ್ಯಪ್ಪಗೆ ನೋಟೀಸ್ ಜಾರಿ ಮಾಡಿರುವ ಡಿಎಫ್ ಓ ದಿನೇಶ್ ಕುಮಾರ್ ಅವರು, ಘಟನಾ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯ ನಿವಾಸಿಗಳಿಂದ ಮರ ಕಡಿದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.

ಎಫ್.ಐ.ಆರ್. ಆಗಿದೆ, ತನಿಖೆ ನಡೆಯುತ್ತಿದೆ- ಕಾರ್ಯಪ್ಪ
ಡಿ.ಎಫ್.ಓ. ಅವರಿಂದ ನೋಟಿಸ್ ಜಾರಿಯಾಗಿರುವ ವಿಚಾರಕ್ಕೆ ಸಂಬಂಧಿಸಿ ಮಾಹಿತಿ ಕೇಳಿದಾಗ ಪ್ರತಿಕ್ರಿಯಿಸಿರುವ ಎ.ಸಿ.ಎಫ್. ಕಾರ್ಯಪ್ಪರವರು ‘ಕಂದಾಯ ಇಲಾಖೆಯ ಸ್ಥಳದಲ್ಲಿ ಮರ ಕಳವು ನಡೆಯುತ್ತಿರುವ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಯವರು ಈಗಾಗಲೇ ಕೇಸು ದಾಖಲಿಸಿ ಈರ್ವರ ಬಂಧನವೂ ಆಗಿದೆ. ಅವರಿಗೆ ಜಾಮೀನೂ ಆಗಿದೆ. ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ. ವಿಸ್ತೃತ ವರದಿ ನೀಡಲು ಸೂಚಿಸಿದ್ದಾರೆ ಎಂದು ಟಿ.ವಿ.ಯಲ್ಲಿ ವರದಿ ಬಂದಿದೆ. ನೊಟೀಸ್ ಇನ್ನೂ ತಲುಪಿಲ್ಲ. ಘಟನೆಯ ಬಗ್ಗೆ ಪರಿಶೀಲನೆ ನಡೆಸಲಾಗುವುದು’ ಎಂದು ತಿಳಿಸಿದ್ದಾರೆ.
ಸ್ತನ ಕ್ಯಾನ್ಸರ್ – ಲಕ್ಷಣಗಳು ಆಧುನಿಕ ಚಿಕಿತ್ಸಾ ವಿಧಾನ ಮತ್ತು ತಡೆಗಟ್ಟುವ ಬಗೆ ಇಲ್ಲಿದೆ ಮಾಹಿತಿ : ಮಹಿಳೆಯರು/ ಯುವತಿಯರು ನೋಡಲೇಬೇಕಾದ ವಿಡಿಯೋ