ಪುತ್ತೂರು: ಡಿ 1 : ರೈತರ ಬೆಳವಣಿಗೆಗಾಗಿ ಬದುಕು ತೇದ ಹಿರಿಯರನ್ನು ಗೌರವಿಸುವುದು ರೈತ ಸಂಘಕ್ಕೆ ಹೆಮ್ಮೆಯ ವಿಚಾರವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿ ಬೈಲುಗುತ್ತು ಹೇಳಿದರು.
ಅವರು ಬುಧವಾರ ಕರ್ನಾಟಕ ರಾಜ್ಯ ರೈತಸಂಘ ಹಸಿರು ಸೇನೆಯ ವತಿಯಿಂದ ಪುತ್ತೂರಿನ ರೈತ ಸಂಘದ ಕಚೇರಿಯ ಬಳಿ ನಡೆದ ಹಿರಿಯ ರೈತ ಮುಖಂಡರಾದ ಮುರುವ ಮಹಾಬಲ ಭಟ್, ಡಾ. ಪಿ.ಕೆ.ಎಸ್.ಭಟ್ ಮತ್ತು ಪುತ್ತೂರಿನ ಖ್ಯಾತ ಪತ್ರಕರ್ತ ರಾದ ಬಿ.ಟಿ. ರಂಜನ್ ಅವರ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸನ್ಮಾನಗೊಳ್ಳುವ ಮೂವರು ಹಿರಿಯರೂ ಇಲ್ಲಿನ ರೈತರ ಅಭಿವೃದ್ಧಿಗಾಗಿ ತನ್ನದೇ ಆದ ಕೊಡುಗೆಯನ್ನು ನೀಡಿದ್ದಾರೆ. ಅವರಿಂದಾಗಿ ಇಲ್ಲಿನ ರೈತರು ಸಂಘಟಿತರಾಗುವ ಜೊತೆಗೆ ಇಲ್ಲಿನ ಪ್ರಮುಖ ಬೆಳೆಯಾದ ಅಡಕೆ ಧಾರಣೆಯ ಸುಧಾರಿಕೆಯಾಗಿದೆ ಎಂದು ಹೇಳಿದರು.

ರಾಜ್ಯ ರೈತ ಸಂಘ ಹಸಿರು ಸೇನೆಯ ಮಾಜಿ ರಾಜ್ಯ ಕಾರ್ಯದರ್ಶಿ ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ ಮಾತನಾಡಿ ಜಿಲ್ಲೆಯಲ್ಲಿ ರೈತರ ಬದುಕು ಸುಗಮವಾಗಲು ಮೂವರು ಸಾಧಕರ ಶ್ರಮ ಅಪಾರವಾಗಿದೆ. ಅವರ ಕೊಡುಗೆಯನ್ನು ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ. 2010ರಲ್ಲಿ ಪುತ್ತೂರಿನಲ್ಲಿ ರೈತ ಸಂಘ ಸ್ಥಾಪನೆಯಾಗಿದ್ದು ಬಳಿಕದ ಎಲ್ಲಾ ಹೋರಾಟಗಳಲ್ಲಿಯೂ ಅವರು ನೀಡಿದ ಸರ್ವ ರೀತಿಯ ಬೆಂಬಲಗಳು ಸ್ಥುತಾರ್ಹವಾಗಿದೆ. ಪುತ್ತೂರಿನ ಪತ್ರಿಕಾ ಮಾಧ್ಯಮದವರು ನಮ್ಮ ಹೋರಾಟವನ್ನು ಮನೆ ಮನೆಗೆ ತಪುಪಿಸುವ ಕೆಲಸ ಮಾಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಹಿರಿಯರಾದ ಮುರುವ ಮಹಾಬಲ ಭಟ್, ಡಾ.ಪಿ.ಕೆ.ಎಸ್ ಭಟ್ ಮತ್ತು ಪತ್ರಕರ್ತ ಬಿ.ಟಿ. ರಂಜನ್ ಅವರನ್ನು ರೈತ ಮುಖಂಡರು ಸನ್ಮಾನಿಸಿ ಗೌರವಿಸಿದರು. ಸನ್ಮಾನ ಸ್ವೀಕರಿಸಿದ ಮುರುವ ಮಹಾಬಲ ಭಟ್ ಮತ್ತು ಡಾ.ಪಿ.ಕೆ.ಎಸ್. ಭಟ್ ಮಾತನಾಡಿ ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು. ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ಶುಭ ಹಾರೈಸಿದರು.
ರೈತ ಮುಖಂಡರಾದ ಈಶ್ವರ ಭಟ್ ಬಡಿಲ, ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ, ಪತ್ರಕರ್ತ ಸಂಶುದ್ದೀನ್ ಸಂಪ್ಯ ಸನ್ಮಾನಿತರ ಪರಿಚಯ ಮಾಡಿದರು. ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿ ಸ್ವಾಗತಿಸಿದರು. ಶೇಖರ್ ರೈ ಕುಂಬ್ರ ವಂದಿಸಿದರು. ಭರತ್ ರೈ ಕಾರ್ಯಕ್ರಮ ನಿರೂಪಿಸಿದರು.