
ಮಂಗಳೂರು, ಡಿ.1: ಕೇಳಿದಾಗ ಹಣ ನೀಡಲಿಲ್ಲ ವೆಂದು ಹೆತ್ತ ತಾಯಿಗೆ ಹಲ್ಲೆ ಮಾಡಿದ ಪಾಪಿ ಮಗನನ್ನು ಮಂಗಳೂರಿನ ಕದ್ರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದ್ವಿಚಕ್ರ ವಾಹನ ತೆಗೆಯಲು ಹಣ ನೀಡಲಿಲ್ಲ ಎಂದು ಯುವಕನೊಬ್ಬ ಮಂಗಳವಾರ ತನ್ನ ವಯೊವೃದ್ದ ತಾಯಿಗೆ ಹಲ್ಲೆ ನಡೆಸಿದ ಬಗ್ಗೆ ವರದಿಯಾಗಿತ್ತು.
ಬಂಧಿತ ಆರೋಪಿಯನ್ನು ಕದ್ರಿ ಹಿಲ್‌ನ ಪದವು ಸ್ಕೂಲ್ ಸಮೀಪದ ನಿವಾಸಿ ರೋಶನ್ ರೋಚ್ ಎಂದು ಗುರುತಿಸಲಾಗಿದೆ. ಈತ ಕದ್ರಿ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದು ನಗರದಲ್ಲಿ ಪುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ.
ಮಂಗಳವಾರ ಬೆಳಗ್ಗೆ ಸುಮಾರು 8 ಗಂಟೆಗೆ ತನ್ನ 66ರ ಹರೆಯದ ತಾಯಿ ಐರಿನ್ ಪ್ಯಾಟ್ರಿಕ್ ರೋಚ್ ಎಂಬವರ ಬಳಿ ಆರೋಪಿಯು ಸ್ಕೂಟರ್ ತೆಗೆಯಲು 75 ಸಾವಿರ ರೂ. ಕೊಡಬೇಕು ಎಂದು ಒತ್ತಾಯಿಸಿದ. ಆದರೆ ಐರಿನ್ ಅವರು ಹಣ ಕೊಡಲು ನಿರಾಕರಿಸಿದಾಗ ಆರೋಪಿಯು ತಾಯಿಯ ಕೆನ್ನೆಗೆ ಹೊಡೆದಿರುವುದಾಗಿ ಆರೋಪಿಸಲಾಗಿದೆ.

ಮಗನ ಹಲ್ಲೆಯಿಂದ ಭಯಭೀತರಾದ ತಾಯಿ ಐರಿನ್ ತಪ್ಪಿಸಿಕೊಂಡು ಹೋಗುವಾಗ ಆರೋಪಿಯು ತಡೆದು ನಿಲ್ಲಿಸಿ ಅವಾಚ್ಯ ಶಬ್ದದಿಂದ ಬೈದು ದೋಸೆ ಕಾವಲಿನಿಂದ ತಲೆಗೆ ಚಚ್ಚಿ ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಸಿದ್ದಾನೆ ಎನ್ನಲಾಗಿದೆ.
ಈ ದೂರಿನ ಅನ್ವಯ ಕದ್ರಿ ಪೊಲೀಸರು ಪ್ರಕರಣ ದಾಖಲಿಸಿ ರೋಶನ್ ರೋಚ್ ನನ್ನು ಬಂಧಿಸಿದ್ದಾರೆ.