ನವದೆಹಲಿ: ಭಾರತೀಯ ಜನತಾ ಪಕ್ಷದ ಮೇಲ್ಪಕ್ತಿ ನಾಯಕರ ಸಾಲಿನಲ್ಲಿ ಗುರುತಿಸಿಕೊಂಡಿರುವ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ನೇರ ದಿಟ್ಟ ಮಾತು. ಯಾವುದಕ್ಕೂ ಜಗ್ಗದೇ, ಬಗ್ಗದೇ ತಮಗನಿಸಿದ್ದನ್ನು ನೇರಾನೇರ ಹೇಳುವ ಮೂಲಕ ನಿಷ್ಠೂರವಾದಿ ಎಂದೂ ಗುರುತಿಸಿಕೊಂಡಿರುವ ಸ್ವಾಮಿ ಅವರ ನಡೆಯೊಂದು ಈಗ ರಾಜಕೀಯ ವಲಯದಲ್ಲಿ ಭಾರಿ ಕೋಲಾಹಲವನ್ನೇ ಸೃಷ್ಟಿಸಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಎರಡನೇ ಅವಧಿ ಸರ್ಕಾರದ ಬಗ್ಗೆ ಹಲವು ಬಾರಿ ಟೀಕಿಸಿದ್ದರು. ಇಂಥ ಬೆಳವಣಿಗೆಗಳ ಮಧ್ಯೆ ಕಳೆದ ತಿಂಗಳು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಿಂದ ಅವರನ್ನು ಕೈಬಿಡಲಾಗಿತ್ತು. ಇದರ ಬೆನ್ನಲ್ಲೇ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಈಚೆಗೆ ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ, ಅವರಿಗೊಂದು ಪ್ರಶ್ನೆ ಎದುರಾಗಿತ್ತು. ಅದೇನೆಂದರೆ ನೀವು ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಸೇರುತ್ತೀರಾ? ಎಂದು. ಅದಕ್ಕೆ ನಗುತ್ತಲೇ ಹಾರಿಕೆ ಉತ್ತರ ಕೊಟ್ಟಿದ್ದ ಸ್ವಾಮಿ, ಟಿಎಂಸಿ ಸೇರಬೇಕು ಅಂತೇನಿಲ್ಲ, ನಾನು ಯಾವುಗಲೂ ಮಮತಾ ಬ್ಯಾನರ್ಜಿ ಪರವಾಗಿದ್ದೇನೆ ಎಂದು ಹೇಳಿ ಗೊಂದಲ ಸೃಷ್ಟಿಸಿದ್ದರು.
ನನ್ನ ಪ್ರಕಾರ ಮಮತಾ ಬ್ಯಾನರ್ಜಿ ಪಕ್ಕಾ ಹಿಂದೂ ಮತ್ತು ದುರ್ಗಾ ಭಕ್ತರಾಗಿದ್ದಾರೆ. ಇದರ ಆಧಾರದ ಮೇಲೆ ಅವರು ಕಾರ್ಯ ನಿರ್ವಹಿಸುತ್ತಾರೆ. ಅವರ ರಾಜಕೀಯವೇ ಬೇರೆಯಾಗಿದೆ. ನಾವು ಆ ಮೈದಾನದಲ್ಲಿ ಹೋರಾಡುತ್ತೇವೆ ಎಂಬ ಹೇಳಿಕೆಯನ್ನೂ ಕೊಟ್ಟಿದ್ದರು.
ಇದಿನ್ನೂ ಚರ್ಚೆಯಲ್ಲಿ ಇರುವಾಗಲೇ ಇಂದು ಅವರು ಮಾಡಿರುವ ಟ್ವೀಟ್ ಒಂದು ಇನ್ನಷ್ಟು ಚರ್ಚೆಗೆ ಗ್ರಾಸವಾಗಿದೆ. “ಇಂದು ಬೆಳಗ್ಗೆ ನಾನು ನನ್ನ ಬಹುಕಾಲದ ಗೆಳೆಯರಾದ ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿದ್ದೇನೆ. ಇಡ್ಲಿ, ದೋಸೆ, ವಡ ತಿನ್ನಲು ನನ್ನನ್ನು ಅವರು ಆಹ್ವಾನಿಸಿದ್ದರು. ಹಳೆಯ ನೆನಪುಗಳನ್ನು ಮೆಲಕು ಹಾಕುವ ಜತೆಗೆ ಭವಿಷ್ಯದ ಕುರಿತು ಚರ್ಚಿಸಲಾಯಿತು. ABs (ಅಂಧ ಭಕ್ತಾಸ್) ಮತ್ತು GBsಗೆ (ಗಂಧ್ ಭಕ್ತಾಸ್) ಮತ್ತೊಂದು ಹೃದಯಾಘಾತ ಆಗುವುದಿಲ್ಲ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ!
ಇದರಿಂದಾಗಿ ಸುಬ್ರಮಣಿಯನ್ ಸ್ವಾಮಿ ನಿಜಕ್ಕೂ ಬಿಜೆಪಿ ಬಿಟ್ರಾ? ಸೇರೋದಾದ್ರೆ ಯಾವ ಪಕ್ಷ ಸೇರುತ್ತಾರೆ? ಆಗ ದೀದೀ ಭೇಟಿಯಾದವರು ಈಗ ದೇವೇಗೌಡರನ್ನು ಭೇಟಿಯಾಗಿದ್ದು ಏಕೆ ಇತ್ಯಾದಿಯಾಗಿ ರಾಜಕೀಯ ವಲಯದಲ್ಲಿ ಭಾರಿ ಗುಸುಗುಸು ಶುರುವಾಗಿದೆ.