ಪುತ್ತೂರು : ನ 30 : ಮೈಸೂರಿನ ಪೋಟೊಗ್ರಾಫರ್ ಜಗದೀಶ್ ಹತ್ಯೆಯ ಸಂಚನ್ನು ಕೊಲೆ ನಡೆಸುವ ಹತ್ತು ದಿನ ಮೊದಲೆ ಹೆಣೆಯಲಾಗಿತ್ತು ಎನ್ನುವ ಸ್ಪೋಟಕ ಮಾಹಿತಿ ಪೊಲೀಸ್ ತನಿಖೆಯ ವೇಳೆ ಬಹಿರಂಗವಾಗಿದೆ. ಪ್ರಕರಣದಲ್ಲಿ ಒಟ್ಟು ಐವರನ್ನು ಪೊಲೀಸರು ಬಂಧಿಸಿದ್ದು ಅವರಿಗೆ ನ 6ರ ವರೆಗೆ ನ್ಯಾಯಾಲಯವೂ ನ್ಯಾಯಾಂಗ ಬಂಧನ ವಿಧಿಸಿದೆ.
ಪಡುವನ್ನೂರು ಗ್ರಾಮದ ಪಟ್ಲಡ್ಕ ದಿ. ಐತ್ತಪ್ಪ ರೈ ಅವರ ಪುತ್ರ ಬಾಲಕೃಷ್ಣ ರೈ ಯಾನೆ ಸುಬ್ಬಯ್ಯ (59 ವ), ಪತ್ನಿ ಜಯಲಕ್ಷ್ಮೀ(56 ವ), ಅವರ ಪುತ್ರ ಪ್ರಶಾಂತ್ ರೈ(28 ವ), ಪಟ್ಲಡ್ಕ ನಿವಾಸಿ ಸಂಜೀವ ಗೌಡ ಅವರ ಪುತ್ರ ಜೀವನ್ ಪ್ರಸಾದ್(28 ವ), ಬಡಗನ್ನೂರು ಗ್ರಾಮದ ಅನಿಲೆ ದಿ.ರಮಾನಾಥ ಶೆಟ್ಟಿಯವರ ಪುತ್ರ ಜಯರಾಜ್ ಶೆಟ್ಟಿ(47 ವ ) ಬಂಧಿತರು .
ಇವರ ಪೈಕಿ ಕೊಲೆಯಲ್ಲಿ ನೇರ ಭಾಗಿಯಾದ ಭಾಲಕೃಷ್ಣ, ಪ್ರಶಾಂತ್ ಹಾಗೂ ಜೀವನ್ ಪ್ರಸಾದ್ ರವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ ವೇಳೆ ಅವರನ್ನು 5 ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು .ನ .30ರಂದು ಅವರ ಪೊಲೀಸ್ ಕಸ್ಟಡಿ ಅವಧಿ ಮುಗಿದಿದ್ದು ಅವರನ್ನು ಮತ್ತೆ ಪುತ್ತೂರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು ಅವರಿಗೆ ಡಿ .6 ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾದೀಶರು ಆದೇಶಿಸಿದ್ದಾರೆ. ಇನ್ನಿಬ್ಬರು ಆರೋಪಿಗಳಿಗೆ ಈ ಹಿಂದೆಯೆ ನ 6 ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.

ಹತ್ಯೆಗೆ ಹೇತುವಾಯಿತು ಜಮೀನು
ಜಗದೀಶ್ ರವರು ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ಪಟ್ಲಡ್ಕ ಎಂಬಲ್ಲಿ ಜಾಗವೊಂದನ್ನು ಖರೀದಿಸಿದ್ದು ಹಣ ನೀಡಿದ ಬಳಿಕವೂ ಅದನ್ನು ತನ್ನ ಹೆಸರಿಗೆ ಮಾಡಿಸಿಕೊಂಡಿರಲಿಲ್ಲ. ಈ ಜಮೀನು ಜಗದೀಶ್ ಹತ್ಯೆಯ ಪ್ರಮುಖ ಆರೋಪಿ ಭಾಲಕೃಷ್ಣ ರೈ ಯಾನೆ ಸುಬ್ಬಯ ರೈಯವರ ಹತ್ತಿರದ ಸಂಬಂಧಿಯಾಗಿದ್ದು , ಜಮೀನಿನ ಕ್ರಯ ಪತ್ರ ಮಾಡಿಸಿ ಕೊಡುವ ಜವಬ್ದಾರಿಯನ್ನು ಅವರೇ ವಹಿಸಿಕೊಂಡಿದ್ದರು ಎನ್ನಲಾಗಿದೆ.
ಜಗದೀಶ್ ಖರೀದಿಸಿದ ಈ ಜಮೀನನ್ನು ಬಾಲಕೃಷ್ಣ ರೈ ಯೂ ಉಪಾಯವಾಗಿ ಇತ್ತೀಚೆಗೆ ತನ್ನ ಹೆಸರಿಗೆ ವರ್ಗಾಯಿಸಿಕೊಂಡು ಬೇರೊಬ್ಬರಿಗೆ ಮಾರಾಟ ಮಾಡಿದ್ದ. ಅದರೆ ಇದರ ಮಾಹಿತಿ ಇಲ್ಲದ ಜಗದೀಶ್ ರವರು ಪದೇ ಪದೇ ಬಾಲಕೃಷ್ಣ ಬಳಿ ಜಾಗವನ್ನು ತನ್ನ ಹೆಸರಿಗೆ ಮಾಡಿಕೊಡುವಂತೆ ಕೇಳಿಕೊಂಡಿದ್ದು ಪ್ರತಿ ಬಾರಿಯೂ ಏನಾದರೊಂದು ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದ ಎನ್ನಲಾಗಿದೆ .
ಆದರೇ ಇತ್ತೀಚೆಗೆ ಜಾಗದ ನೋಂದಣಿ ಮಾಡಿಕೊಳ್ಳುವಂತೆ ಪದೇ ಪದೇ ಒತ್ತಾಯಿಸಿದ್ದು , ಇದರಿಂದ ವಿಚಲಿತನಾದ ಆರೋಪಿಯೂ ಜಗದೀಶ್ ಅವರನ್ನು ಕೊಲೆ ಮಾಡುವ ತೀರ್ಮಾನಕ್ಕೆ ಬಂದಿದ್ದಾನೆ. ಹೀಗಾಗಿ ಅವರು ಪುತ್ತೂರಿಗೆ ಬರುವ ಸೂಚನೆ ಸಿಕ್ಕ ಕೂಡಲೇ ಹತ್ಯೆಗೆ ಹತ್ತು ದಿನ ಮೊದಲೇ ಬಾಲಕೃಷ್ಣ ತನ್ನ ಪತ್ನಿ ಮಗ ಹಾಗೂ ಇತರ ಇಬ್ಬರು ಆರೋಪಿಗಳ ಜತೆ ಸೇರಿ ಸಂಚು ರೂಪಿಸಿದ್ದಾರೆ ಎನ್ನುವ ವಿಚಾರ ಪೊಲೀಸ್ ತನಿಖೆಯಲ್ಲಿ ಪತ್ತೆಯಾಗಿದೆ.
ಕೊಲೆಯ ಮಾಸ್ಟರ್ ಪ್ಲ್ಯಾನಿಗೆ ಪರಿಣಿತನ ಮಾರ್ಗದರ್ಶನ

ಕೊಲೆಯನ್ನು ಸುವ್ಯವಸ್ಥಿತವಾಗಿ ಮಾಡಿ ತಪ್ಪಿಸಿಕೊಳ್ಳುವ ಉದ್ದೇಶದಿಂದ ಈ ಹಿಂದೆ ಕೊಲೆ ಕೃತ್ಯವೊಂದರಲ್ಲಿ ಪ್ರಮುಖ ಆರೋಪಿಯಾಗಿ ಜೈಲಿಗೆ ಹೋಗಿದ್ದ ಸದ್ಯ ಆ ಪ್ರಕರಣದಿಂದ ಖುಲಾಸೆಗೊಂಡಿರುವ ಆರೋಪಿಯೊಬ್ಬನ ನೆರವು ಪಡೆದು ಆತನ ಮಾರ್ಗದರ್ಶನದಂತೆ ಕೃತ್ಯ ಎಸಗಲಾಗಿದೆ. ಬಂಧಿತ 5 ನೇ ಆರೋಪಿ ಅಣಿಲೆ ಜಯರಾಜ್ ಶೆಟ್ಟಿ ಆರೋಪಿಗಳಿಗೆ ಕೊಲೆಯ ಸ್ಕೆಚ್ ಹೆಣೆದು ಕೊಟ್ಟ ಮಾಸ್ಟರ್ ಪ್ಲ್ಯಾನರ್. ಕುತೂಹಲದ ವಿಷಯ ಎಂದರೇ ಜಗದೀಶ್ ಕೊಲೆ ಮತ್ತು ಇದೆ ಅನಿಲೆ ಜಯರಾಜ್ ಶೆಟ್ಟಿ ಪ್ರಮುಖ ಆರೋಪಿಯಾಗಿದ್ದ 11 ವರ್ಷಗಳ ಹಿಂದೆ ನಡೆದಿದ್ದ ಕಲ್ಲುಗುಡ್ಡೆ ಉಮೇಶ್ ರೈ ಹತ್ಯೆ ಪ್ರಕರಣಕ್ಕೂ ಬಹುತೇಕ ಹತ್ತಿರದ ಸಾಮ್ಯತೆ ಇರುವುದು.
18 ಪ್ರಕರಣ ಎದುರಿಸುತ್ತಿದ್ದ ರೌಡಿಶೀಟರ್ ತಿಂಗಳಾಡಿ ಸಮೀಪದ ಕಲ್ಲುಗುಡ್ಡೆ ಉಮೇಶ್ ರೈಯನ್ನು 11 ವರ್ಷ ಗಳ ಹಿಂದೆ ಹತ್ಯೆ ಮಾಡಲಾಗಿತ್ತು. ಉಮೇಶ್ ರೈ ಕೊಲೆ ಬಡಗನ್ನೂರು ಗ್ರಾಮದಲ್ಲಿ ನಡೆದಿದ್ದು, ಜಗದೀಶ್ ಕೊಲೆ ಪಕ್ಕದ ಗ್ರಾಮ ಪಡವನ್ನೂರಿನಲ್ಲಿ ನಡೆದಿದೆ. 2010ರ ಮಾ.26ರಂದು ಮಧ್ಯಾಹ್ನ ಉಮೇಶ್ ರೈ ಹತ್ಯೆ ನಡೆದಿತ್ತು .
ಪರಿಚಯಸ್ಥನಾದ ಉಮೇಶ್ ರೈಯನ್ನು ಪ್ರಕರಣದ ಪ್ರಮುಖ ಆರೋಪಿ ಅನಿಲೆ ಜಯರಾಜ್ ನೂ ಮನೆಗೆ ಊಟಕ್ಕೆಂದು ಕರೆದಿದ್ದು , ಗೆಳೆಯ ಎಂಬ ವಿಶ್ವಾಸದಿಂದಲೇ ಆತ ಕಾರಿನಲ್ಲಿ ಅಲ್ಲಿಗೆ ಹೋಗಿದ್ದ. ಅಲ್ಲದೆ, ಗೆಳೆಯನ ಮನೆ ತಲುಪಿದ ಉಮೇಶ್ ತನ್ನ ಪತ್ನಿಗೆ ಕರೆ ಮಾಡಿ ತಾನೂ ಅನಿಲೆಗೆ ಬಂದಿರುವುದಾಗಿಯೂ ತಿಳಿಸಿದ್ದ. ಭರ್ಜರಿ ಭೋಜನ ಉಣಬಡಿಸಿದ ಮೇಲೆ ಕೂತಲ್ಲಿಗೇ ಹಿಂಬ್ಬದಿಯಿಂದ ಸುತ್ತಿಗೆಯಲ್ಲಿ ಬಡಿದು ಉಮೇಶ್ ಕೊಲೆ ಮಾಡಲಾಗಿತ್ತು
ಬಳಿಕ ಶವವನ್ನು ಉಮೇಶ್ ಕಾರಲ್ಲೇ ಹಲ್ಲೆಗೈದ ಸ್ವಲ್ಪ ದೂರದಲ್ಲೆ ಜನ ಓಡಾಟ ವಿರಳವಾಗಿರುವ ತೋಡು ಒಂದರ ಬಳಿ ಕೊಂಡೊಯ್ದು ಹೂತು ಹಾಕಲಾಗಿತ್ತು. ಬಳಿಕ ಉಮೇಶ್ ರೈ ಕಾರನ್ನು ಗಡಿಯಾಚೆ ಕಾಸರಗೋಡು ಜಿಲ್ಲೆಗೆ ಸೇರಿದ ಪ್ರದೇಶದಲ್ಲಿ ಬಿಟ್ಟು ಬರಲಾಗಿತ್ತು.

ಮನೆಗೆ ಬಾರದ ಪತಿಯ ಬಗ್ಗೆ ವಿಚಾರಿಸಲು ಮಾ .27 ರಂದು ಕರೆ ಮಾಡಿದ ಉಮೇಶ್ ಪತ್ನಿಯೂ ಜಯರಾಜ್ ಗೆ ಕರೆ ಮಾಡಿದ್ದು. ಇಔೇಳೆ ಬೆಳಗಾವಿ ಪೊಲೀಸರು ಯಾವುದೋ ಪ್ರಕರಣ ನಿಮಿತ್ತ ಉಮೇಶನನು ಕೊಂಡೋಯ್ದಿದ್ದಾರೆ .ಇನ್ನೊಂದು ಹದಿನೈದು ದಿನ ಆತ ಬರುವ ಸಾಧ್ಯತೆ ಇಲ್ಲ ಎಂದು ತಿಳಿಸಿದ. ಆದರೇ ಇದರಲ್ಲಿ ಸಂಶಯ ಕಂಡ ಉಮೇಶ್ ಪತ್ನಿಯೂ ಮಾ. 30 ರಂದು ಸಂಪ್ಯ ಠಾಣೆಯಲ್ಲಿ ಉಮೇಶ್ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದರು. ಮುಂದಿನ ಆರು ತಿಂಗಳುಗಳ ಕಾಲ ಪ್ರಕರಣವೂ ನಿಗೂಢವಾಗಿಯೇ ಉಳಿದಿತ್ತು. ಈ ಹಂತದಲ್ಲಿ ಒಂದೂವರೆ ತಿಂಗಳುಗಳ ಕಾಲ ಜಯರಾಜ್ ಕೂಡ ನಾಪಾತ್ತೆಯಾಗಿದ್ದ. ಸೆ. 23 ರಂದು ಮರಳಿ ಊರಿಗೆ ಬಂದ ಆತನನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ಕೃತ್ಯ ಹಾಗೂ ಶವ ಹೂತು ಹಾಕಿರುವ ಕಾರನ್ನು ಗಡಿಯಾಚೆ ಬಿಟ್ಟು ಬಂದಿರುವ ವಿಚಾರ ಬಹಿರಂಗವಾಗಿದೆ.

ಉದ್ಯಮಿ ಹಾಗೂ ಮಾಜಿ ಅಂಡರ್ ವರ್ಲ್ಡ್ ಡಾನ್ ಎನ್. ಮುತ್ತಪ ರೈ ಕೊಲೆಗೆ ಉಮೇಶ್ ರೈ ಸ್ಕೆಚ್ ಹಾಕಿದ್ದ ಎಂಬ ಗುಮಾನಿಯಲ್ಲಿ ಮುತ್ತಪ್ಪ ರೈ ಯವರ ಹತ್ತಿರದ ಸಂಬಂಧಿಯೊಬ್ಬರ ಇಷಾರೆಯ ಮೇರೆಗೆ ಈ ಕೃತ್ಯ ನಡೆದಿತ್ತು ಎಂದು ಅಂದಿನ ಜಿಲ್ಲಾ ಪೊಲೀಸ್ ಅಧಿಕ್ಷಕರು ಮಾಧ್ಯಮಗಳಿಗೆ ತಿಳಿಸಿದ್ದರು. ಬಳಿಕ ಈ ಪ್ರಕರಣ ನ್ಯಾಯಾಲಯದಲ್ಲಿ ಬಿದ್ದು ಹೋಗಿದ್ದು ಎಲ್ಲ ಆರೋಪಿಗಳು ಖುಲಾಸೆಗೊಂಡಿದ್ದರು.
ಸಿದ್ದ ಮಾದರಿ
ಅದೇ ರೀತಿ ಜಗದೀಶ್ ಅವರ ಹತ್ಯೆಯೂ ನಡೆದಿದೆ. ಇಲ್ಲೂ ಮೊದಲು ಉಮೇಶ್ ರವರಂತೆ ಜಗದೀಶ್ ರವರು ನಾಪತ್ತೆಯಾಗಿದ್ದಾರೆ ಎಂದು ದೂರು ದಾಖಲಾಗಿತ್ತು. ಉಮೇಶ್ ಪತ್ನಿಗೆ ಹತ್ಯೆ ಆರೋಪಿಯೂ ಬೆಳಗಾವಿ ಪೊಲೀಸರು ಕರೆದುಕೊಂಡು ಹೋಗಿದ್ದಾರೆ ಎಂದು ಸುಳ್ಳು ಹೇಳಿದಂತೆ ಜಗದೀಶ್ ಪತ್ನಿ ಶರ್ಮಿಳಾ ಬಳಿಯೂ ಪ್ರಮುಖ ಆರೋಪಿಯೂ ಕಟ್ಟು ಕಥೆಯೊಂದನ್ನು ಕಟ್ಟಿ ಹೇಳಿದ್ದ. ಜಗದೀಶ್ ರವರನ್ನು ಸಂಜೆ ವೇಳೆ ತನ್ನ ಪಟ್ಲಡ್ಕದ ಮನೆಯಿಂದ ಮೈಸೂರಿಗೆ ಹೋಗಿದ್ದು ಅವರನ್ನು ಕಾವು ಬಳಿ ನಾನೇ ಸುಳ್ಯ ಕಡೆ ಹೋಗುವ ಒಮ್ನಿ ಹತ್ತಿಸಿದೆ ಎಂದು ಹೇಳಿದ್ದ.
ಈ ಸುಳ್ಳು ಮುಂದಿನ ಹಂತದಲ್ಲಿ ಪ್ರಕರಣ ಬೇಧಿಸಲು ದೊಡ್ಡ ಸುಳಿವಾಗಿ ಮಾರ್ಪಾಟ್ಟಿತ್ತು. ಕಾವು ಬಳಿಯ ಸಿಸಿಟಿವಿಗಳ ಪರಿಶೀಲನೆ ವೇಳೆ ನ 18 ರಂದು ಮಧ್ಯಾಹ್ನದ ವೇಳೆ ಜಗದೀಶ್ ರವರು ಈಶ್ವರಮಂಗಲದತ್ತ ನಡಕೊಂಡು ಹೋಗುವುದು ಪತ್ತೆಯಾಗಿತ್ತೆ ಹೊರತು ಸಂಜೆ ವಾಪಸ್ಸು ಬಂದದ್ದಾಗಲಿ, ಅಥಾವ ಒಮ್ನಿ ಹತ್ತಿದ್ದಾಗಲಿ ಕಾಣಿಸಿರಲಿಲ್ಲ .ಇದು ಆರೋಪಿಗಳ ಮೇಲಿನ ಪೊಲೀಸರ ಸಂಶಯಕ್ಕೆ ಪ್ರಭಲ ಕಾರಣವಾಗಿತ್ತು.
ಇನ್ನೂ ಉಮೇಶ್ ಪ್ರಕರಣದಲ್ಲಿ ಆತನ ಕಾರನ್ನು ಗಡಿಯಾಚೆ ಬಿಟ್ಟು ಪ್ರಕರಣದ ಹಾದಿ ತಪ್ಪಿಸಿದರೆ, ಈ ಪ್ರಕರಣದಲ್ಲಿ ಜಗದೀಶ್ ರವರ ಮೊಬೈಲನ್ನು ಮೈಸೂರು ಬಳಿ ಎಸೆದು ಪೊಲೀಸರ ದಾರಿ ತಪ್ಪಿಸುವ ಯತ್ನ ಮಾಡಲಾಗಿತ್ತು . ಉಮೇಶ್ ಪ್ರಕರಣದಲ್ಲಿ ಆರೋಪಿಯ ಮನೆ ಬಳಿ ನಿರ್ಜನ ಪ್ರದೇಶದಲ್ಲಿ ಆತನ ಶವವನ್ನು ಹೂತು ಹಾಕಿದ್ದರೆ, ಈ ಪ್ರಕರಣದಲ್ಲಿ ಆರೋಪಿಯ ಮನೆ ಸಮೀಪದ ಕಾಡಿನಲ್ಲಿ ಮೃತದೇಹವನ್ನು ಹೂತು ಹಾಕಲಾಗಿತ್ತು . ಇನ್ನು ಅತೀ ಪ್ರಮುಖ ಸಾಮ್ಯತೆ ಎಂದರೇ ಹತ್ಯೆಗೆ ಬಳಸಿದ ಸಾಧನ ಮತ್ತು ವಿಧಾನ. ಎರಡು ಪ್ರಕರಣದಲ್ಲೂ ಹತ್ಯೆಗೆ ಬಳಸಿದ ಆಯುಧ ಸುತ್ತಿಗೆಯಾಗಿತ್ತು. ಹತ್ಯೆಯಾದ ಇಬ್ಬರನ್ನು ಸ್ನೇಹಾಚಾರದ ವಿಶ್ವಾಸದಲ್ಲಿ ಬಳಿ ಕರೆಸಿಕೊಂಡು ಮಾಹಾಮೋಸದಿಂದ ಹತ್ಯೆಗೆಯ್ಯಲಾಗಿತ್ತು.
ಪೊಲೀಸ್ ತನಿಖೆಯಲ್ಲಿ ಬಯಲಾದ ಸಂಗತಿಗಳು
ಪೊಲೀಸರ ಪ್ರಕಾರ “ಜಗದೀಶ್ ಅವರು ನ 16ರಂದು ಆರೋಪಿ ಬಾಲಕೃಷ್ಣ ರೈಗೆ ಕರೆ ಮಾಡಿ ನ .18 ರಂದು ತನ್ನ ಒಡೆತನದ ಆರ್ಯಾಪು ಗ್ರಾಮದ ಕುಂಜೂರುಪಂಜ ಎಂಬಲ್ಲಿನ ಜಾಗದ ಕೃಷಿ ಚಟುವಟಿಕೆ ನೋಡಲು ಹಾಗೂ ತಾನೂ ಹಣ ಕೊಟ್ಟು ಖರೀದಿಸಿರುವ ಹಾಗೂ ಇನ್ನೂ ನೋಂದಣಿಗೆ ಬಾಕಿ ಇರುವ ಪಡುವನ್ನುರು ಗ್ರಾಮದ ಪಟ್ಲಡ್ಕದ ಜಮೀನಿನ ನೊಂದಣಿಯನ್ನು ಮಾಡುವ ವಿಚಾರದಲ್ಲಿ ಮಾತನಾಡಲು ಬರುವುದಾಗಿ ತಿಳಿಸಿದ್ದರು. ಇದೇ ದಿನ ಜಗದೀಶ್ ಹತ್ಯೆ ಮಾಡಲು ಆರೋಪಿಗಳು ಸಂಚು ರೂಪಿಸಿದ್ದಾರೆ. .ಜಗದೀಶ್ ಅವರು ಪ್ರತಿ ಬಾರಿ ಪತ್ನಿಯೊಂದಿಗೆ ಬರುತ್ತಿದ್ದು, ಈ ಬಾರಿ ಒಂಟಿಯಾಗಿ ಬರುವುದನ್ನು ಆರೋಪಿ ಬಾಲಕೃಷ್ಣ ಖಾತರಿಪಡಿಸಿಕೊಂಡಿದ್ದಾನೆ.
ಪುತ್ತೂರಿಗೆ ಬಂದಿಳಿದ ಜಗದೀಶ್
ನ .18 ರಂದು ಬೆಳಿಗ್ಗೆ ಮೈಸೂರಿನಿಂದ ಬಸ್ಸಿನಲ್ಲಿ ಬಂದ ಜಗದೀಶ್ ರವರು 11 ಗಂಟೆ ಸುಮಾರಿಗೆ ಪುತ್ತೂರಿನ ಸಂಪ್ಯ ಬಳಿ ಬಂದಿಳಿದಿದ್ದಾರೆ. ಅಲ್ಲಿಂದ ಅವರನ್ನು ಮೊದಲೆ ಬಂದು ಕಾದು ಕೂತಿದ್ದ ಬಾಲಕೃಷ್ಣ ರೈ ಯವರು ಆಟೋ ರಿಕ್ಷಾದಲ್ಲಿ ಆರ್ಯಾಪು ಗ್ರಾಮದ ಮೇಗಿನ ಪಂಜ ಎಂಬಲ್ಲಿಯ ಜಮೀನಿಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಂದ ಮತ್ತೆ ಜತೆಯಾಗಿ ಪುತ್ತೂರಿಗೆ ಬಂದಿದ್ದಾರೆ. ಅಲ್ಲಿಂದ ಒಟ್ಟಿಗೆ ಸುಳ್ಯ ಬಸ್ಸು ಹತ್ತಿದ ಅವರಿಬ್ಬರು ಕಾವು ಬಳಿ ಇಳಿದಿದ್ದಾರೆ. ಅಲ್ಲಿಂದ ಸ್ವಲ್ಪ ದೂರಕ್ಕೆ ಈಶ್ವರಮಂಗಳ ರಸ್ತೆ ಕಡೆಗೆ ನಡೆದುಕೊಂಡು ಹೋಗಿದ್ದಾರೆ. ಈ ವೇಳೆ ಅದೇ ರಸ್ತೆಯಲ್ಲಿ ಇನ್ನಿಬ್ಬರು ಆರೋಪಿಗಳಾದ ಪ್ರಶಾಂತ ಮತ್ತು ಜೀವನ್ ಪ್ರಸಾದ್ ಕಾರು ಚಲಾಯಿಸಿ ಕೊಂಡು ಬಂದಿದ್ದು ಸುಬ್ಬಯ್ಯ ಹಾಗೂ ಜಗದೀಶ್ ಅವರನ್ನು ಕಾರಿನಲ್ಲಿ ಹತ್ತಿಸಿಕೊಂಡಿದ್ದಾರೆ.
ಕಾರನ್ನು ಪ್ರಶಾಂತ್ ಡ್ರೈವ್ ಮಾಡುತಿದ್ದು , ಸಹ ಚಾಲಕನ ಸೀಟಿನಲ್ಲಿ ಬಾಲಕೃಷ್ಣ ರೈ ಕೂತಿದ್ದು ಹಿಂಬದಿಯ ಸೀಟಿನಲ್ಲಿ ಜೀವನ್ ಪ್ರಸಾದ್ ಜತೆಗೆ ಜಗದೀಶ ಕೂತಿದ್ದರು. ಈ ವೇಳೆ ಕಾರು ಪುಳಿತ್ತಡಿಯಿಂದ ಮುಂದಕ್ಕೆ ಹೋದಾಗ ಎಲ್ಲಿಗೆ ಹೋಗುತ್ತಿದ್ದಿರಿ ಎಂದು ಜಗದೀಶ್ ಪ್ರಶ್ನಿಸಿದ್ದು ಆಗ ಕತ್ತಿ ಸಾಣೆಗೆ ಕೊಟ್ಟಿದ್ದೇವೆ ಅದನ್ನು ತರಲು ಈಶ್ವರಮಂಗಲಕ್ಕೆ ಹೋಗುವುದಾಗಿ ತಿಳಿಸಿದ್ದು ಇದನ್ನು ಜಗದೀಶ್ ನಂಬಿದ್ದಾರೆ ಎನ್ನಲಾಗಿದೆ.
ಸಿಗ್ನಲ್ ದೊರೆತ ಕೂಡಲೇ ಕೃತ್ಯ
ನೂಜಿ ಬೈಲು ಪರ್ನಾಜೆ ರಸ್ತೆಯಲ್ಲಿ ಸುಮಾರು 4 ಕಿ ಮೀ ದೂರ ಕಾರನ್ನು ಪ್ರಶಾಂತ್ ಚಲಾಯಿಸಿಕೊಂಡು ಹೋಗಿದ್ದು ಬಳಿಕ ಯಾರೂ ಇಲ್ಲದ ನಿರ್ಜನ ಪ್ರದೇಶ ಕಾಣಿಸುತ್ತಲೇ ಕಾರನ್ನು ವಾಪಸ್ಸು ತಿರುಗಿಸಿದ್ದಾರೆ. ಇದು ಹಂತಕರು ಮೊದಲೇ ರೂಪಿಸಿದ್ದ ಸಿಗ್ನಲ್ ಆಗಿದ್ದು ಈ ವೇಳೆ ಅಲರ್ಟ್ ಆದ ಹಿಂಬದಿಯಲ್ಲಿ ಕೂತಿದ್ದ ಜೀವನ್ ಪ್ರಸಾದ್ ನು ತನ್ನಪಕ್ಕ ಕೂತಿದ್ದ ಜಗದೀಶರವರ ಕುತ್ತಿಗೆ ಹಿಡಿದು ಮುಂದೆ ಬಾಗಿಸಿದ್ದಾನೆ . ಆಗ ಎದುರು ಸೀಟಿನಲ್ಲಿ ಕುಳಿತಿದ್ದ ಬಾಲಕೃಷ್ಣ ರೈ ಯೂ ಆದಾಗಲೇ ಕಾರಿನಲ್ಲಿ ತಂದಿಟ್ಟಿದ್ದ ಸುತ್ತಿಗೆಯಲ್ಲಿ ಜಗದೀಶ ರವರ ತಲೆಗೆ ಬಲವಾಗಿ ಹೊಡೆದಿದ್ದಾನೆ. ಇದರಿಂದ ತಲೆ ಒಡೆದು ರಕ್ತ ಕೋಡಿಯಾಗಿ ಹರಿದಿದೆ.
ಗಂಟೆಗಳ ಕಾಲ ನರಳಾಡಿದ ಬಳಿಕ ಚೂರಿಯಿಂದ ಇರಿದು ಹತ್ಯೆ
ಇದರಿಂದ ಜಗದೀಶ ರವರು ಪ್ರಜ್ಞೆ ತಪ್ಪಿ ಅರೆ ಜೀವದಲ್ಲಿಯೇ ಕಾರಿನಲ್ಲಿಯೇ ಧರಶಾಹಿಯಾಗಿದ್ದಾರೆ. ಇದೆ ವೇಳೆ ಹಿಂದಿನಿಂದ ಯಾವುದೋ ವಾಹನ ಬರುವುತ್ತಿರುವುದನ್ನು ಗಮನಿಸಿದ ಆರೋಪಿಗಳು ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಪಡುವನ್ನೂರು ಗ್ರಾಮ ಪಟ್ಲಡ್ಕದ ಮೂನಡ್ಕ ತೋಟದಲ್ಲಿನ ಕಟ್ಟಡದ ಬಳಿಗೆ ತಂದಿದ್ದಾರೆ. ಅಲ್ಲಿ ಹೋಗಿ ಪರೀಕ್ಷಿಸಿದಾಗ ಜಗದೀಶ ರವರು ಇನ್ನೂ ಉಸಿರಾಡಿಕೊಂಡು ಜೀವಂತವಾಗಿರುವುದು ಕಂಡು ಬಂದಿದೆ. ತಲೆಗೆ ಪೆಟ್ಟು ತಿಂದು ಕಾರಿನಲ್ಲಿ ಶೆಡ್ ಬಳಿ ಬರುವವರೆಗೂ ಸುಮಾರು ಗಂಟೆಗಳ ಕಾಲ ಅವರು ನರಳಾಡುತ್ತಲೇ ಇದ್ದರು. ಇದನ್ನು ಗಮನಿಸಿದ ಆರೋಪಿಗಳು ತಮ್ಮ ಬಳಿಯಿದ್ದ ಚಾಕುವಿನಿಂದ ಶೆಡ್ ನಲ್ಲಿ ಜಗದೀಶ್ ರವರ ಕುತ್ತಿಗೆಗೆ ಮತ್ತು ಬೆನ್ನಿಗೆ ತಿವಿದು ಕೊಲೆ ಮಾಡಿದ್ದಾರೆ . ನಂತರ ಮೃತ ದೇಹವನ್ನು ಪಡುವನ್ನೂರು ಗ್ರಾಮದ ಮುಗುಳಿ ಎಂಬಲ್ಲಿಯ ಅರಣ್ಯ ಇಲಾಖೆಗೆ ಸೇರಿದ ಅಕೆಶಿಯಾ ನೆಡು ತೋಪಿನ ಗುಡ್ಡದಲ್ಲಿ ಹೊಂಡ ತೆಗೆದು ಹೂತು ಹಾಕಿದ್ದಾರೆ.


ಸಾಕ್ಷಿ ನಾಶ
ಕೊಲೆ ಮಾಡಿದ ನಂತರ ಸಾಕ್ಷಿ ನಾಶ ಮಾಡುವ ಹಾಗೂ ತನಿಖೆಯ ದಿಕ್ಕು ತಪ್ಪಿಸುವ ಉದ್ದೇಶದಿಂದ ಜಗದೀಶರವರು ಬಳಸುತ್ತಿದ್ದ ಮೊಬೈಲ್ ನ್ನು ರಾತ್ರೋ ರಾತ್ರಿ ಮೈಸೂರಿಗೆ ಹೋಗಿ ಮೈಸೂರಿನ ಹೂಟಗಲ್ಲಿಯಲ್ಲಿ ಬಿಸಾಡಿದ್ದಾರೆ ನಂತರ ಹತ್ಯೆಗೆ ಬಳಸಿದ ಸುತ್ತಿಗೆ ಮತ್ತು ಚಾಕುವನ್ನು ಕುಶಾಲನಗರ ಶುಂಠಿ ಕೊಪ್ಪ ರಸ್ತೆಯ ಬದಿಯಲ್ಲಿ ಬಿಸಾಡಿದ್ದಾರೆ,ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ ಆಯುಧವನ್ನು ಬಿಸಾಡಲು ಹೋಗುವ ವೇಳೆ ತಮ್ಮ ಸ್ವಂತ ಮೊಬೈಲನ್ನು ಸುಳ್ಯದಲ್ಲಿರಿಸಿ ಪೊಲೀಸರು ಟವರ್ ಲೊಕೇಶನ್ ಪತ್ತೆ ಹಚ್ಚದಂತೆ ಎಚ್ಚರ ವಹಿಸಿದ್ದಾರೆ.
ವಿಶ್ವಾಸ ದ್ರೋಹ
ಜಗದೀಶ ಹಾಗೂ ಬಾಲಕೃಷ್ಣ ರೈ ಹತ್ತಿರದ ಸಂಬಂದಿಕರು. ಜಗದೀಶ ರವರ ತೀರ ನಂಬಿಕಸ್ತನಾಗಿದ್ದ ಬಾಲಕೃಷ್ಣನೂ ಅವರ ಒಡೆತನದ ಪುತ್ತೂರಿನ ಎರಡು ಜಮೀನಿನ ಎಲ್ಲ ವ್ಯಹಾರಗಳನ್ನು ನೋಡಿಕೊಳ್ಳುತ್ತಿದ್ದ . ಆದರೇ ವಿಶ್ವಾಸಘಾತ ಮಾಡಿದ ಆರೋಪಿಯೂ ಜಗದೀಶ್ ಅವರು ಖರೀದಿಸಿದ ಪಟ್ಟಡ ಎಂಬಲ್ಲಿಯ ಜಮೀನನ್ನು ಅವರಿಗೆ ತಿಳಿಯದಂತೆ ತನ್ನ ಹೆಸರಿನಲ್ಲಿ ಮಾಡಿಕೊಂಡಿದ್ದು ಅದನ್ನು ಇತ್ತೀಚೆಗೆ ಬೇರೋಬ್ಬರಿಗೆ ಮಾರಾಟ ಮಾಡಿದ್ದ. ಜಾಗವನ್ನು ಖರೀದಿಸಿದವರು ಕೃಷಿ ಚಟುವಟಿಕೆ ಮಾಡಿಕೊಂಡಿದ್ದು ಈ ವಿಚಾರ ಜಗದೀಶನಿಗೆ ತಿಳಿದರೆ ಮುಂದಕ್ಕೆ ಸಮಸ್ಯೆಯಾಗಬಹುದೆಂದು ಆರೋಪಿಯು ಯೋಚಿಸಿದ್ದಾನೆ. ಜಗದೀಶರವರು ಜೀವಂತ ಇದ್ದರೆ ತೊಂದರೆಯಾಗಬಹುದೆಂದು ಭಾವಿಸಿದ ಈತ ಹತ್ಯೆಗೆ ಸಂಚು ರೂಪಿಸಿದ್ದಾನೆ.
ವಶಪಡಿಸಿಕೊಂಡ ವಸ್ತುಗಳು
ಬಂಧಿತರ ಬಳಿಯಿಂದ ಕೃತ್ಯಕ್ಕೆ ಬಳಸಿದ ಮಾರುತಿ ಸುಜುಕಿ ಕಂಪನಿಯ ಸಲಿರಿಯೋ ಮತ್ತು ಆಲ್ಟೋ ಕಾರನ್ನು ಹಾಗೂ ಸುತ್ತಿಗೆ, ಚಾಕುವನ್ನು ವಶಕ್ಕೆ ಪಡೆದಿದ್ದಾರೆ. ಜತೆಗೆ ಜಗದೀಶ್ ರವರು ಕುತ್ತಿಗೆಯಲ್ಲಿ ಧರಿಸಿಕೊಂಡಿದ್ದ ಚಿನ್ನದ ಸರವನ್ನು ಆರೋಪಿ ಪ್ರಶಾಂತನ ಬಳಿಯಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಪಡಿಸಿ ಕೊಂಡ ಒಟ್ಟು ಸೂತ್ತುಗಳ ಮೌಲ್ಯ ರೂ. 6 ಲಕ್ಷ ಎಂದು ಅಂದಾಜಿಸಲಾಗಿದೆ
ಹಂತಕರ ಪತ್ತೆ ಹಚ್ಚಿದ ತಂಡ

ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ ಈ ಪ್ರಕರಣವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಋಷಿಕೇಶ್ ಭಗವಾನ್ ಸೋನಾವನ, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಡಾ|| ಶಿವ ಕುಮಾರ್, ರವರುಗಳ ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕರಾದ ಡಾ| ಗಾನ, ಪಿ. ಕುಮಾರ್ ನೇತೃತ್ವದಲ್ಲಿ ಪುತ್ತೂರು ಗ್ರಾಮಾಂತರ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರಾದ ಉಮೇಶ್ ಉಪ್ಪಳಿಕ ಮತ್ತು ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಉದಯ ರವಿ ಎಂ ವ್ಯ ಮತ್ತು ಅಪರಾಧ ವಿಭಾಗದ ಪೊಲೀಸ್ ಉಪನಿರೀಕ್ಷಕರಾದ ಅಮೀನ್ ಸಾಬ್ ಅತ್ತಾರ್, ಪ್ರೋ ಪಿಎಸ್‌ಐ ಶ್ರೀಕಾಂತ ರಾಥೋಡ್ ರವರ ಸೂಚನೆಯ ಮೇರೆಗೆ ಸಿಬ್ಬಂದಿಗಳಾದ ಎ.ಎಸ್ ಐ ಜಗನ್ನಾಥ್, ಶಿವರಾಮ ಹೆಚ್, ಧರ್ಣಪ್ಪ ಗೌಡ, ಸಲೀಂ, ದೇವರಾಜ್, ಅದ್ರಾಮ್, ಸ್ಕರಿಯ, ಪ್ರಶಾಂತ್ , ಪ್ರವೀಣ್ ರ ಪಾಲ್ತಾಡಿ, ಪ್ರಶಾಂತ, ಕೃಷ್ಣಪ್ಪ ಗೌಡ, ಲಕ್ಷ್ಮೀಶ ಗೌಡ, ಜಗದೀಶ ಅತ್ತಾಪ, ಹರ್ಷೀತ್, ಲೋಕೇಶ, ಗಿರೀಶ ರೈ, ಮುನಿಯ ನಾಯ್ಕ, ಗುಡದಪ್ಪ ಹೋಟರ್,ಮಪಿಸಿ ಧನ್ಯಶ್ರೀ, ಗಾಯತ್ರಿ, ಜಿಲ್ಲಾ ಗಣಕ ಯಂತ್ರದ ಸಂಪತ್, ದಿವಾಕರ್, ಹಾಗೂ ಚಾಲಕರಾದ ಹರೀಶ ನಾಯ್ಕ, ನವಾಝ್ ಬುದ್ಧಿ, ಮತ್ತು ವಿನೋದ್ ರವರುಗಳ ತಂಡವು ಬೇಧಿಸಿದೆ.
ಬಹುಮಾನ
ಈ ಕ್ಲಿಷ್ಟಕರವಾದ ಪ್ರಕರಣವನ್ನು ಕೇವಲ ಒಂದೇ ವಾರದಲ್ಲಿ ಭೇದಿಸುವಲ್ಲಿ ಸಫಲರಾದ ತನಿಖಾ ತಂಡಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಸೂಕ್ತ ಬಹುಮಾನವನ್ನು ಘೋಷಿಸಿದ್ದಾರೆ