ಕಟೀಲ್ : ನ 30 : ಕಳೆದೆರಡು ವರ್ಷಗಳಿಂದ ಕೊವೀಡ್ ಮಹಾಮಾರಿಯ ಕಾರಣದಿಂದ ಕರವಾಳಿಯ ಪ್ರಧಾನ ಕಲೆ ಯಕ್ಷಗಾನ ತೀವ್ರ ಸಮಸ್ಯೆಯನ್ನು ಎದುರಿಸಿತ್ತು. ಈ ಬಾರಿ ಕೊರೊನಾ ಇಳಿಮುಖವಾದ ಹಿನ್ನಲೆಯಲ್ಲಿ ಬಯಲಾಟ ಮತ್ತೆ ಹೊಸ ಹುರುಪನೊಂದಿಗೆ ಮೇಳಗಳು ತಿರುಗಾಟ ಆರಂಭಿಸಿವೆ.
ಕರ್ನಾಟಕದ ಗಡಿಜಿಲ್ಲೆಯಾದ ಕಾಸರಗೋಡು, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿಯಿಂದ ಹಾಗೂ ಉತ್ತರ ಕನ್ನಡ ಜಿಲ್ಲೆಯವರೆಗೂ ಯಕ್ಷಗಾನದ ವ್ಯಾಪ್ತಿಯಿದೆ. ಬದಲಾದ ಕಾಲಮಾನದಲ್ಲೂ, ತಲೆಮಾರುಗಳ ಬದಲಾವಣೆಯ ಬಳಿಕವೂ ಯಕ್ಷಗಾನ ಈಗಲೂ ತನ್ನದೇ ಆದ ಪ್ರೇಕ್ಷಕರ ಬಳಗವನ್ನು ಹೊಂದಿದೆ.
ಮೇಳಗಳು ತಮ್ಮ ತಿರುಗಾಟವನ್ನು ಆರಂಭಿಸಲು ಹೆಜ್ಜೆ ಇಡುವಾಗಲೇ ರೂಪಾಂತರಿ ಕೊರೊನಾ ಭೀತಿ ಎದುರಾಗಿದೆ . ಈ ಆತಂಕದ ನಡುವೆಯೂ ಎಲ್ಲ ಯಕ್ಷಗಾನ ತಂಡಗಳು ತಮ್ಮ ತಿರುಗಾಟವನ್ನು ಆರಂಭಿಸಲು ಸಜ್ಜಾಗಿದೆ. ಈಗಾಗಲೇ ಕೆಲ ಮೇಳಗಳು ತಿರುಗಾಟ ಆರಂಭಿಸಿವೆ.

ನ .29 ರಂದು ತೆಂಕುತಿಟ್ಟಿನ ಪ್ರಸಿದ್ಧ ಹರಕೆಯಾಟದ ಯಕ್ಷಗಾನ ಮೇಳ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ 6 ಮೇಳಗಳು ತನ್ನ ತಿರುಗಾಟವನ್ನು ಆರಂಭಿಸಿದೆ. ದೇವರ ಸೇವೆಯಾಟವೆಂದು ದೇವಸ್ಥಾನದಲ್ಲಿ ಆರೂ ರಂಗಸ್ಥಳದಲ್ಲಿ ಏಕಕಾಲದಲ್ಲಿ ಯಕ್ಷಗಾನ ಸೇವೆಯಾಟ ಜರುಗಿತು. ಇಂದಿನಿಂದ ಭಕ್ತರು ಸೇವೆ ನೀಡುವಲ್ಲಿಗೆ ಹೋಗಿ ಯಕ್ಷಗಾನ ಪ್ರಸಂಗವನ್ನು ಕಲಾವಿದರು ಆಡಿ ತೋರಿಸುತ್ತಾರೆ.

ಯಕ್ಷಗಾನ ಹರಕೆಯಾಟ ‘ಯಕ್ಷಗಾನ ಪ್ರಿಯೆ’ ಕಟೀಲು ಶ್ರೀ ದುರ್ಗೆಗೆ ಅತಿ ಪ್ರಿಯವಾದದು ಹಾಗೆಯೇ ದೊಡ್ಡ ಸೇವೆಯೂ ಆಗಿದೆ. ಆದ್ದರಿಂದ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ತಾಯಿಗೆ ಯಕ್ಷಗಾನ ಸೇವೆ ನೀಡುತ್ತೇವೆ ಎಂದು ಹರಕೆ ಹೊರುತ್ತಾರೆ. ಯಕ್ಷಗಾನ ನಡೆಯುವಲ್ಲಿಗೆ ಸಾಕ್ಷಾತ್ ಕಟೀಲು ಶ್ರೀ ದೇವಿಯೇ ಬರುತ್ತಾಳೆಂಬ ಪ್ರತೀತಿ ಈಗಲೂ ಇದೆ.

ಕಾರ್ತಿಕ ಪಂಚಮಿಯಂದು ಕಟೀಲು ದೀಪೋತ್ಸವ ನಡೆಯುತ್ತದೆ. ಬಳಿಕ ದೇವರ ತಾರಾನುಕೂಲದ ದಿನದಂದು ದೇವಸ್ಥಾನದ ಯಕ್ಷಗಾನ ಮೇಳಗಳ ತಿರುಗಾಟವನ್ನು ನಡೆಸಲಾಗುತ್ತದೆ. ವೃಷಭ ಸಂಕ್ರಮಣದ ಬಳಿಕ 11 ನೇ ದಿನದಂದು (ಮೇ 25 ರ ಸುಮಾರಿಗೆ) ವರ್ಷದ ತಿರುಗಾಟ (ಜೈತ್ರಯಾತ್ರೆ) ಮುಕ್ತಾಯವಾಗುತ್ತದೆ.ದೇವಿ ಸಮ್ಮುಖದಲ್ಲಿ ಕುಣಿದ ಕಲಾವಿದರುಯಕ್ಷಗಾನ ತಿರುಗಾಟ ಆರಂಭದ ದಿನವಾದ ನಿನ್ನೆ ಕಲಾವಿದರು ಶ್ರೀದೇವಿಯ ಸಮ್ಮುಖದಲ್ಲಿಯೇ ಗಜ್ಜೆಕಟ್ಟಿ ಕುಣಿದರು.

ಬಳಿಕ ಕಲಾವಿದರು ದೇವಸ್ಥಾನದ ಪ್ರಾಂಗಣದಲ್ಲಿ ಹಾಕಲಾಗುವ ಆರೂ ರಂಗಸ್ಥಳಗಳಲ್ಲಿ ಪೂರ್ವರಂಗ ಕುಣಿತವನ್ನು ಪ್ರದರ್ಶಿಸಿ ‘ಪಾಂಡವಾಶ್ವಮೇಧ’ ಪ್ರಸಂಗವನ್ನು ಪ್ರದರ್ಶಿಸಿದರು. ನಾಳೆಯಿಂದ ಆರು ಮೇಳಗಳು ತಿರುಗಾಟವನ್ನು ಆರಂಭಿಸಿ, ಮುಂದಿನ ಆರು ತಿಂಗಳ ಕಾಲ ವಿವಿಧ ಕಡೆಗಳಲ್ಲಿ ಯಕ್ಷಗಾನ ಹರಕೆಯಾಟ ಸೇವೆ ನಡೆಯುತ್ತದೆ. ನವೆಂಬರ್ 29ರಿಂದ ಆರಂಭವಾದ ಕಟೀಲು ಯಕ್ಷಗಾನ ಪ್ರದರ್ಶನ ಮೇ 25ರವರೆಗೆ ಅಂದರೆ ಸರಿಸುಮಾರು 167 ದಿನಗಳ ಕಾಲ ಪ್ರದರ್ಶನ ನಡೆದು ವರ್ಷದ ತಿರುಗಾಟ ಮುಕ್ತಾಯವಾಗುತ್ತದೆ.

ಅಂಡಾಲ ದೇವಿ ಪ್ರಸಾದ ಶೆಟ್ಟಿ, ಬಲಿಪ ಪ್ರಸಾದ ಭಟ್, ದೇವಿಪ್ರಸಾದ ಆಳ್ವ ತಲಪಾಡಿ, ಶ್ರೀನಿವಾಸ ಬಳ್ಳಮಂಜ, ಪದ್ಯಾಣ ಗೋವಿಂದ ಭಟ್ ಮತ್ತು ಪುಂಡಿಕಾಯ್ ಗೋಪಾಲಕೃಷ್ಣ ಭಟ್ ರವರ ಪ್ರಧಾನ ಭಾಗವತಿಕೆಯಲ್ಲಿ ಈ ಆರು ಮೇಳಗಳು ಈ ಸಾಲಿನ ತಿರುಗಾಟ ನಡೆಸಲಿವೆ
ಕಟೀಲು ಯಕ್ಷಗಾನ ಮಂಡಳಿಯಲ್ಲಿ ಆರು ಮೇಳಗಳಿದ್ದರೂ, 20 ವರ್ಷಕ್ಕೆ ಯಕ್ಷಗಾನ ಮುಂಗಡ ಬುಕ್ಕಿಂಗ್ ಆಗಿದೆ ಅನ್ನುವುದು ಕರಾವಳಿಗರ ಯಕ್ಷಗಾನದ ಮೇಲಿನ ಶ್ರದ್ಧೆ, ಕಟೀಲು ದುರ್ಗೆಯ ಮೇಲಿನ ಭಕ್ತಿಗೆ ದ್ಯೋತಕವಾಗಿದೆ. ಕಟೀಲು ಮೇಳದಲ್ಲಿ ‘ಶ್ರೀ ದೇವಿ ಮಹಾತ್ಮೆ’ ಪ್ರಸಂಗಕ್ಕೆ ವಿಶೇಷ ಪ್ರಾಶಸ್ತ್ಯವಿದ್ದು, ಒಂದೊಂದು ಮೇಳಗಳಲ್ಲಿಯೂ ವರ್ಷಕ್ಕೆ ಕನಿಷ್ಠ 90ರಿಂದ 100ರಷ್ಟು ಇದೇ ಪ್ರಸಂಗವನ್ನು ಆಡಿಸಲಾಗುತ್ತದೆ. ಉಳಿದಂತೆ “ಶ್ರೀದೇವಿ ಲಲಿತೋಪಾಖ್ಯಾನ’, ಕಟೀಲು ಕ್ಷೇತ್ರ ಮಹಾತ್ಮೆ ಸೇರಿದಂತೆ ಎಲ್ಲಾ ಪೌರಾಣಿಕ ಪ್ರಸಂಗಗಳನ್ನು ಆಡಿಸಲಾಗುತ್ತದೆ.

ಈಗಾಗಲೇ ಹಟ್ಟಿಯಂಗಡಿ, ಮಂದಾರ್ತಿ, ಬಪ್ಪನಾಡು, ಪಾವಂಜೆ ಮೇಳಗಳು ತಿರುಗಾಟ ಆರಂಭಿಸಿದೆ. ಧರ್ಮಸ್ಥಳ ಮೇಳವು ಒಂದು ತಿಂಗಳ ಕಾಲ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿಯೇ ಪ್ರದರ್ಶನ ನೀಡಲಿದೆ. ಡಿಸೆಂಬರ್ 5ರ ಬಳಿಕ ತಿರುಗಾಟ ಆರಂಭಿಸಲಿದೆ.

ಅದೇ ರೀತಿ ತೆಂಕಿನ ಗಜಮೇಳವಾದ ಹನುಮಗಿರಿ, ತುಳು ಪ್ರಸಂಗಗಳನ್ನು ಪ್ರದರ್ಶಿಸುವ ಸುಂಕದಕಟ್ಟೆ, ಸಸಿಹಿತ್ಲು, ಮಂಗಳಾದೇವಿ, ದೇಂತಡ್ಕ ಮೇಳಗಳು ತಿರುಗಾಟಕ್ಕೆ ಸಜ್ಜಾಗುತ್ತಿವೆ. ಬಡಗಿನ ಟೆಂಟ್ ಮೇಳಗಳಾದ ಪೆರ್ಡೂರು, ಸಾಲಿಗ್ರಾಮ ಮೇಳಗಳು ಹೊಸ ಪ್ರಸಂಗಗಳೊಂದಿಗೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದು, ಉಳಿದಂತೆ ಬಡಗಿನ ಕಮಲಶಿಲೆ, ಗೋಳಿಗರಡಿ, ಸೌಕೂರು ಮುಂತಾದ ಮೇಳಗಳು ತಿರುಗಾಟಕ್ಕೆ ಅಣಿಯಾಗುತ್ತಿದೆ.

ಒಟ್ಟಾರೆಯಾಗಿ ಕಳೆದೆರಡು ವರ್ಷದಿಂದ ಪೂರ್ಣ ಪ್ರಮಾಣದ ಯಕ್ಷಗಾನ ತಿರುಗಾಟ ನಡೆಯದೇ ಅದನ್ನೆ ನಂಬಿಕೊಂಡು ಜೀವನ ನಡೆಸುತ್ತಿರುವ ಕಲಾವಿದರು ಕಂಗಾಲಾಗಿದ್ದರು. ಆದರೆ ಈ ಬಾರಿ ಪೂರ್ಣ ಪ್ರಮಾಣದ ಯಕ್ಷಗಾನ ನಡೆಯಲಿದೆ ಎಂಬ ವಿಶ್ವಾಸದಿಂದ ಯಕ್ಷ ಕಲಾವಿದರು ಗೆಜ್ಜೆ ಕಟ್ಟಿ ರಂಗಸ್ಥಳದಲ್ಲಿ ಹೆಜ್ಜೆ ಹಾಕಲು ತಯಾರಾಗಿದ್ದಾರೆ. ಯಕ್ಷಗಾನವನ್ನೇ ನಂಬಿ ಬದುಕು ಕಟ್ಟಿಕೊಂಡ ಕಲಾವಿದರು ಕರಾವಳಿಯಲ್ಲಿ ಸಾವಿರಾರು ಮಂದಿ ಇದ್ದಾರೆ. ಯಕ್ಷಗಾನ ತಿರುಗಾಟ ಪೂರ್ಣ ಪ್ರಮಾಣದಲ್ಲಿ ನಡೆಯದೇ ಹೋದರೆ ಜೀವನಕ್ಕಾಗಿ ತುಂಬಾ ಕಷ್ಟ ಪಡುವ ಸ್ಥಿತಿ ಈ ಕಲಾವಿದರ ಕುಟುಂಬದ್ದು. ಹೀಗಾಗಿ ಈ ಬಾರಿ ಆದರೂ ಯಾವುದೇ ಅಡೆ ತಡೆ ಬಾರದೆ ಇರಲಿ ಅಂತ ದೇವರ ಮೇಲೆ ಭಾರ ಹಾಕಿ ವಿಶ್ವಾಸದೊಂದಿಗೆ ಗೆಜ್ಜೆ ಕಟ್ಟಲು ಸಿದ್ದತೆ ಮಾಡಿಕೊಂಡಿದ್ದಾರೆ ಯಕ್ಷಗಾನ ಕಲಾವಿದರು.




ಪೋಟೊ : ಟೆಲಿಗ್ರಾಮ್