ಕಾಳುಮೆಣಸು ಧಾರಣೆ ದಿನೇ ದಿನೇ ಏರುತ್ತಿದ್ದು ಐನೂರರ ಗಡಿ ದಾಟಿದೆ.ಬೆಲೆ ಏರುಮುಖದಲ್ಲಿದ್ದರೂ ಆಕಾಲಿಕ ಮಳೆಗೆ ಕಾಳುಮೆಣಸು ಬಳ್ಳಿಗೆ ಸೊರಗು ರೋಗ(ಕ್ವಿಕ್ ವಿಲ್ಟ್) ಹಬ್ಬುತ್ತಿದೆ.ಬಳ್ಳಿಯಲ್ಲಿರುವ ಎಳೆ ಫಸಲು ಬಾಡಿ ಉದುರುತ್ತಿರುವುದು ಬೆಲೆ ಏರಿಕೆಯ ಖುಷಿಯಲ್ಲಿದ್ದ ಬೆಳೆಗಾರರನ್ನು ಕಂಗೆಡಿಸಿದೆ.
ಕಾಸರಗೋಡು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಿಶ್ರ ಬೆಳೆಯಾಗಿ ಕಪ್ಪು ಚಿನ್ನ ಖ್ಯಾತಿಯ ಕಾಳುಮೆಣಸು ಬಳ್ಳಿ ಬೆಳೆಸಲಾಗುತ್ತಿದೆ. ಅಡಕೆ, ತೆಂಗು ಮರದಲ್ಲಿ ಎಡೆ ಬೆಳೆಯಾಗಿ ಹಬ್ಬಿಸಲಾಗುವ ಕಾಳುಮೆಣಸು ಬಳ್ಳಿಗೆ ಹೆಚ್ಚಿನ ಆರೈಕೆ ಮತ್ತು ನಿರ್ವಹಣೆಯ ಅಗತ್ಯವಿಲ್ಲ.ಆದರೆ ಪ್ರಸ್ತುತ ಹವಾಮಾನ ವೈಪರೀತ್ಯ, ಸೊರಗು ರೋಗ ಬಾಧೆಯಿಂದ ಬಳ್ಳಿಯಲ್ಲಿರುವ ಎಳೆ ಫಸಲು ಬಾಡಿ ಉದುರುತ್ತಿರುವುದು, ಬಳ್ಳಿ ಸಾಯುತ್ತಿರುವುದು ಬೆಳೆಗಾರರನ್ನು ಸೊರಗುವಂತೆ ಮಾಡಿದೆ.
ಶಿಲೀಂಧ್ರಗಳ ಹಾವಳಿ
ಫೈಟೋಫೋರಾ ಕ್ಯಾಪ್ಸಿಸಿ ಎಂಬ ಶಿಲೀಂಧ್ರ ಸೊರಗು ರೋಗ ಹರಡಲು ಕಾರಣವಾಗಿದೆ.ಸೊರಗು ರೋಗ ಮುಖ್ಯವಾಗಿ ಗಾಳಿ ಹಾಗೂ ಮಣ್ಣಿನ ಮೂಲಕ ಕೇಂದ್ರೀಕೃತ ಮಾದರಿಯಲ್ಲಿ ಹರಡುತ್ತವೆ.ಬೇಸಗೆಯಲ್ಲಿ ಮಣ್ಣಿನಲ್ಲಿ ಸುಪ್ತವಾಗಿರುವ ಶಿಲೀಂದ್ರವು ಮಳೆಗಾಲದಲ್ಲಿ ಮಣ್ಣಿನ ತೇವಾಂಶ ಹೆಚ್ಚಾದಂತೆ ಸಕ್ರಿಯಗೊಳ್ಳುತ್ತದೆ. ತೋಟದ ಮಣ್ಣಿನ ನೀರು, ಮಳೆ ಹನಿ, ಆರೋಗ್ಯಕರ ಮತ್ತು ಸೋಂಕಿತ ಬಳ್ಳಿಗಳ ನಡುವಿನ ಸಂಪರ್ಕ, ಕಲುಷಿತ ಕೃಷಿ ಬಳಕೆ ಉಪಕರಣ, ಮಾನವ, ಪ್ರಾಣಿಗಳ ಚಲನೆ, ಗೆದ್ದಲು, ಕೀಟಗಳು ರೋಗ ವಾಹಕಗಳಾಗಿ ಕಾರ್ಯ ನಿರ್ವಹಿಸುತ್ತವೆ.ಮಳೆಗಾಲದಲ್ಲಿ ಹೊಸದಾಗಿ ಚಿಗುರಿ ಮಣ್ಣಿನ ಮೇಲೆ ಸಾಗುವ ಕಾಳುಮೆಣಸು ಬಳ್ಳಿ, ಎಳೆ ಚಿಗುರು ಮತ್ತು ಎಲೆಗಳನ್ನು ಶಿಲೀಂದ್ರಗಳು ಆಕ್ರಮಿಸುತ್ತವೆ.ಸೋಂಕಿಗೆ ಒಳಗಾದ ಈ ಬಳ್ಳಿಗಳು ಕಂದು ಬಣ್ಣಕ್ಕೆ ತಿರುಗುತ್ತದೆ.ಈ ಹಂತದಲ್ಲಿ ನಿಯಂತ್ರಣ ಕ್ರಮ ಕೈಗೊಳ್ಳದಿದ್ದರೆ ಶಿಲೀಂದ್ರಗಳು ಪ್ರಮುಖ ಬಳ್ಳಿ ಹಾಗೂ ಎಲೆಗಳನ್ನು ಆಕ್ರಮಿಸುತ್ತವೆ.ರೋಗ ತಗುಲಿದ ಬಳ್ಳಿಗಳ ಎಲೆ ಹಳದಿ ಬಣ್ಣಕ್ಕೆ ತಿರುಗಿ ಸಂಪೂರ್ಣ ಎಲೆ, ಹಾಗೂ ಮೆಣಸು ಕಾಳು ಉದುರುತ್ತವೆ.
ಕಾಳು ಮೆಣಸು ಬಳ್ಳಿ ಹಳದಿಯಾಗಿ ಒಣಗಿ ಬೂದು ಮಿಶ್ರಿತ ಕಪ್ಪು ಬಣ್ಣಕ್ಕೆ ತಿರುಗಿ ಸಾಯುತ್ತವೆ.ಬಳ್ಳಿ ಹಾಗೂ ಎಲೆಗಳಲ್ಲಿರುವ ಶಿಲೀಂಧ್ರದ ಬೀಜಾಣುಗಳು ಸುಲಭವಾಗಿ ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ಹರಡುತ್ತವೆ.ಕಾಳುಮೆಣಸಿನ ಬಳ್ಳಿಯ ಬೇರುಗಳನ್ನು ಆಕ್ರಮಿಸುವುದರಿಂದ ಬೇರುಗಳು ಸಾಯುತ್ತದೆ.ನಂತರ ಬಳ್ಳಿ ಹಾಗೂ ಎಲೆ, ಕಾಳುಗಳನ್ನು ಆಕ್ರಮಿಸುತ್ತದೆ.ಒಂದು ತಿಂಗಳೊಳಗೆ ಸಂಪೂರ್ಣ ಬಳ್ಳಿ ಸಾಯುತ್ತದೆ. ಶಿಲೀಂದ್ರಗಳ ಆಕ್ರಮಣದ ಅಪಾಯಕಾರಿ ಹಂತವನ್ನು ‘ ಕರೆಯಲಾಗುತ್ತದೆ.ಕಡಿಮೆ ತಾಪಮಾನ ೨೨.೭ರಿಂದ ೨೯.೮೦ ಸೆ., ಅಲ್ಪಾವಯ ಬಿಸಿಲು, ಭಾರೀ ಮಳೆ ಮತ್ತು ೮೧ರಿಂದ ೯೯ ಶೇಕಡಾ ಆರ್ ಎಚ್ ವಾತಾವರಣದ ತೇವಾಂಶ ರೋಗ ವ್ಯಾಪನೆಗೆ ಅನುಕೂಲಕರವಾಗಿ ಪರಿಣಮಿಸುತ್ತದೆ.ಮಳೆಗಾಲದಲ್ಲಿ ನೆಲದ ಮೂಲಕ ಹರಡುವ ರನ್ನರ್ ಚಿಗುರುಗಳನ್ನು ಮರಕ್ಕೆ ಕಟ್ಟುವ ಅಥವಾ ಕತ್ತರಿಸುವುದರಿಂದ ಪ್ರಾರಂಭಿಕ ಹಂತದಲ್ಲೇ ಸೊರಗು ರೋಗ ನಿಯಂತ್ರಿಸಬಹುದು. ‘ಮೆಲೋಯ್ಡೋಗೈನ್ ಇಂಕಾಗ್ನಿಟ’ ಎಂಬ ಜಂತು ಹುಳದಿಂದಲೂ ಸೊರಗು ರೋಗ ಹರಡುತ್ತಿದೆ.

ಬೋರ್ಡೋ ಮಿಶ್ರಣ ಸಿಂಪಡಣೆಯಿಂದ ಪರಿಹಾರ
ಸುಣ್ಣ ಮತ್ತು ಕೋಪರ್ ಸಲ್ಫೇಟ್ ಮಿಶ್ರಣ ಬೋರ್ಡೋ ಸಿಂಪಡಣೆಯಿಂದ ಸೊರಗು ರೋಗ ಹರಡುವುದನ್ನು ತಡೆಯಬಹುದು.ತಾಮ್ರದ ಮುಕ್ತ ವಿದ್ಯುದ್ವಾಹಿ ಕಣಗಳು ಶಿಲೀಂಧ್ರ ನಾಶಕವಾಗಿ ಕಾರ್ಯ ನಿರ್ವಹಿಸುತ್ತದೆ. ಬೋರ್ಡೊ ದ್ರಾವಣವನ್ನು ಆಗಾಗ ಚೆನ್ನಾಗಿ ಕಲಸಿ ಬಳ್ಳಿಗಳ ಮೇಲೆ ಸಿಂಪಡಿಸಬೇಕು.ಬಳ್ಳಿ, ಎಲೆಗಳ ಮೇಲಿನ ರಸ ಹೀರುವ ಕೀಟಗಳಿಂದ ಬಳ್ಳಿಗಳು ಸಂಪೂರ್ಣ ಹಳದಿ ಬಣ್ಣಕ್ಕೆ ತಿರುಗಿ ಒಣಗುವ ಸಮಸ್ಯೆ ಕಾಣಿಸಿದರೆ ಕೀಟನಾಶಕ, ಅಥವಾ ನೀರಿಗೆ ೩.೦ ಮಿ.ಲೀ. ಬೇವಿನ ಎಣ್ಣೆ ಮಿಶ್ರಣ ಮಾಡಿ ಸಿಂಪಡಿಸಬೇಕು.ಗೆದ್ದಲು ಬಾಧೆಯಿಂದಲೂ ಕಾಳು ಮೆಣಸು ಬಳ್ಳಿಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ.ಇದರ ಹತೋಟಿಗೆ ಪ್ರತಿ ಲೀ. ನೀರಿಗೆ ೨.೦ ಮಿ.ಲಿ. ಕ್ಲೋರೋಫೈರಿಫಾಸ್ ಎಂಬ ಕೀಟನಾಶಕ ಬೆರೆಸಿ ಈ ದ್ರಾವಣವನ್ನು ಎಲೆಗಳಿಗೆ ಸಿಂಪಡಿಸಬೇಕು. ಬಳ್ಳಿ ಹಬ್ಬಿಸಿದ ಅಡಕೆ ಅಥವಾ ತೆಂಗಿನ ಬುಡಕ್ಕೆ ದ್ರಾವಣ ಸುರಿದು ಗೆದ್ದಲು ಕೀಟಗಳನ್ನು ನಿಯಂತ್ರಿಸಬಹುದು.

‘1 ಲೀಟರ್ ನೀರಿಗೆ 5ಮಿಲೀ.ಅಕೋಮಿನ್ ಮತ್ತು ಬೋರ್ಡೋ ಮಿಶ್ರಣ ಸಿಂಪಡಿಸಿ ಆರಂಭ ಹಂತದಲ್ಲೆ ಸೊರಗು ರೋಗ ನಿಯಂತ್ರಿಸಬೇಕು.ರೋಗ ವ್ಯಾಪಿಸಿದಲ್ಲಿ ಸತ್ತ ಬಳ್ಳಿಗಳನ್ನು ಬೇರು ಸಮೇತ ಕಿತ್ತು ತೋಟದಿಂದ ಹೊರಗಡೆ ನಾಶಪಡಿಸಬೇಕು.ಬುಡದಲ್ಲಿ ಹೊಸ ಬಳ್ಳಿ ನೆಟ್ಟರೂ ಪ್ರಯೋಜನವಾಗದು.’ : ಗಿರೀಶ್ ಬಿ. ಕೃಷಿ ಅಕಾರಿ, ಬೆಳ್ಳೂರು

ಕಾಳು ಮೆಣಸಿಗೆ ಏರಿದ ಬೇಡಿಕೆ; ಮತ್ತಷ್ಟು ಬೆಲೆ ಏರಿಕೆ ನಿರೀಕ್ಷೆಯಲ್ಲಿ ಮಾರಾಟಕ್ಕೆ ಮುಂದಾಗದ ಬೆಳೆಗಾರರು
ಅಗಷ್ಟ್ ತಿಂಗಳಿನಲ್ಲಿ 350 ರ ಅಸುಪಾಸಿನಲ್ಲಿ ಗಿರಕಿ ಹೊಡೆಯುತ್ತಿದ ಕರಿ ಮೆಣಸಿನ ದರ ಸೆಪ್ಟಂಬರ್ ಹಾಗೂ ಆಕ್ಟೋಬರ್ ತಿಂಗಳಿನಲ್ಲಿ ನಿಧಾನವಾಗಿ ಏರು ಮುಖವಾಗಿ ನವೆಂಬರ್ ತಿಂಗಳ ಆರಂಭದಲ್ಲಿ 500 ರ ಗಡಿಯನ್ನು ದಾಟಿದೆ . ವಾರದ ಹಿಂದೆ ಖಾಸಗಿ ಮಾರುಕಟ್ಟೆಯಲ್ಲಿ ದಾರಣೆ 550ರ ಸನಿಹಕ್ಕೂ ತಲುಪಿತ್ತು. ಆದರೆ ಕ್ಯಾಂಪ್ಕೂ ದಲ್ಲಿ ಕಳೆದೊಂದು ತಿಂಗಳಿನಿಂದ ದಾರಣೆ ಸ್ಥಿರವಾಗಿದ್ದು ರೂ 510 ಹಾಗೂ ಅದರ ಅಸುಪಾಸಿನಲ್ಲಿದೆ . ಖಾಸಗಿ ಮಾರುಕಟ್ಟೆಯಲ್ಲಿ ಇದಕ್ಕಿಂತ ತುಸು ಹೆಚ್ಚು ರೇಟ್ ಗೆ ಕಾಳು ಮೆಣಸು ಖರೀದಿಸುತ್ತಿರುವುದು ಕಂಡು ಬಂದಿದೆ

ಪ್ರಸ್ತುತ ಧಾರಣೆ ಏರಿಕೆಯಾದರೂ ಮತ್ತಷ್ಟು ಬೆಲೆಯೇರಿಕೆ ನಿರೀಕ್ಷೆಯಲ್ಲಿರುವ ಬೆಳೆಗಾರರು ಕಳೆದ ಒಂದೆರಡು ವರ್ಷದಿಂದ ಶೇಖರಿಸಿಟ್ಟಿರುವ ಕಾಳುಮೆಣಸುನ್ನು ಇನ್ನಷ್ಟೂ ದಾರಾಣೆ ಏರಿಕೆಯಾಗುವ ನಿರೀಕ್ಷೆಯಲ್ಲಿ ಮಾರಾಟ ಮಾಡಲು ಹಿಂದೇಟು ಹಾಕಿದ್ದು ಬೇಡಿಕೆ ಏರಲು ಕಾರಣವಾಗಿದೆ. ನವರಾತ್ರಿ ಹಬ್ಬಾಚರಣೆ ಹಿನ್ನೆಲೆಯಲ್ಲಿ ಉತ್ತರ ಭಾರತದಲ್ಲಿ ಕಾಳು ಮೆಣಸು ಬೇಡಿಕೆ ಹೆಚ್ಚಾಗಿರುವುದೇ ಬೆಲೆ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ದೀಪಾವಳಿ ಸಂದರ್ಭದಲ್ಲಿ ಮತ್ತಷ್ಟು ಬೆಲೆ ಏರಿದೆ. ದೀಪಾವಳಿ ಬಳಿಕವೂ ಕಾಳುಮೆಣಸು ಬೇಡಿಕೆ ಕಡಿಮೆಯಾಗಿಲ್ಲ.ಜನರ ಆಹಾರ ಪದ್ಧತಿಯಲ್ಲಿನ ಬದಲಾವಣೆ ಕಾಳುಮೆಣಸು ಮಾರುಕಟ್ಟೆ ಮೇಲೆ ಪ್ರಭಾವ ಬೀರುತ್ತಿದೆ.ಹೊಸ ತಲೆಮಾರಿನ ನೆಚ್ಚಿನ ಆಹಾರ ಪದಾರ್ಥಗಳಲ್ಲಿ ಕಾಳುಮೆಣಸು ಪ್ರಧಾನವಾಗಿದೆ.

ಕೋವಿಡ್ ಹಿನ್ನೆಲೆಯಲ್ಲಿ ಮುಚ್ಚಿದ್ದ ದೊಡ್ಡ ರೆಸ್ಟೋರೆಂಟ್‌ಗಳು ಮತ್ತೆ ತೆರೆದಿರುವುದು ಬೇಡಿಕೆ ಏರಲು ಕಾರಣವಾಗಿದೆ.ಆಹಾರೋದ್ಯಮ ವಲಯದಲ್ಲಿ ಕಾಳುಮೆಣಸಿನ ಅವಶ್ಯಕತೆ ವರ್ಧಿಸುತ್ತಿದೆ. ಮಸಾಲೆ ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ಕಾಳುಮೆಣಸು ಶೇಖರಿಸುತ್ತಿವೆ. ಕೋವಿಡ್ ಹಿನ್ನೆಲೆಯಲ್ಲಿ ಮುಚ್ಚಿದ್ದ ಮಾಸಾಲೆ ತಯಾರಿ ಕಂಪನಿಗಳು ಮತ್ತೆ ತೆರೆದಿರುವುದು ಬೇಡಿಕೆ ಹೆಚ್ಚಲು ಇನ್ನೊಂದು ಕಾರಣವಾಗಿದೆ. ಗಾರ್ಬಲ್ಡ್ ಕಾಳುಮೆಣಸು ಬೆಲೆ 500ರ ಗಡಿ ದಾಟಿದೆ.