ಬೆಂಗಳೂರು: ನ 28 : ಕೇಂದ್ರ ಸರಕಾರದ ಉನ್ನತ ಅಧಿಕಾರಿ ಎಂದು ಬಿಂಬಿಸಿ ರಾಜ್ಯ ರಾಜಧಾನಿಯಲ್ಲಿ ಕೋಟ್ಯಾಂತರ ರೂಪಾಯಿ ವಂಚಿಸಿದ ಕುಂದಾಪುರ ಮೂಲದ ವಂಚಕನನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದು , ಈತ ಒಟ್ಟು ಮೂರು ವಿವಾಹವಾಗಿರುವ ವಿಚಾರ ಈ ವೇಳೆ ಬೆಳಕಿಗೆ ಬಂದಿದೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಬಸ್ರೂರು ಮೂಲದ ಜೆಪಿ ನಗರದ ನಿವಾಸಿ ರಾಘವ ಅಲಿಯಾಸ್ ರಾಘವೇಂದ್ರ (39) ಬಂಧಿತ. ಈತ ತಾನೂ ಕೇಂದ್ರ ಸರಕಾರದ ಸರ್ವೆ ಇಲಾಖೆಯಲ್ಲಿ ಉನ್ನತ ಅಧಿಕಾರಿ ಎಂದು ನಂಬಿಸಿ 15ಕ್ಕೂ ಹೆಚ್ಚು ಜನರಿಂದ 1.3 ಕೋಟಿ ರೂ. ಪಡೆದು ವಂಚಿಸಿದ್ದಾನೆ
ಈತ ದಾವಣಗೆರೆ, ಬಾಗಲಕೋಟೆ ಹಾಗೂ ಬೆಂಗಳೂರು ಮೂಲದ ಮೂವರು ಯುವತಿಯರನ್ನು ವಿವಾಹವಾಗಿರುವ ವಿಚಾರ ಆರೋಪಿಯ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ . ಅಚ್ಚರಿಯ ವಿಚಾರವೆಂದರೇ ಆತನ ಮೂವರು ಪತ್ನಿಯರಿಗೂ ಈತ ತನ್ನನ್ನೂ ಬಿಟ್ಟು ಬೇರೆಯವರನ್ನು ಮದುವೆಯಾಗಿರುವ ವಿಚಾರ ತಿಳಿದಿರಲಿಲ್ಲ ಎನ್ನಲಾಗಿದೆ .ಅಷ್ಟು ಜಾಣ್ಮೆಯಿಂದ ಯಾರಿಗೂ ಸ್ವಲ್ಪವೂ ಅನುಮಾನ ಬಾರದಂತೆ ಈತ ಗೌಪ್ಯತೆ ಕಾಪಾಡಿಕೊಂಡಿದ್ದ ಎಂದು ತಿಳಿದು ಬಂದಿದೆ.
ಆರೋಪಿ ರಾಘವೇಂದ್ರ 10 ವರ್ಷಗಳ ಹಿಂದೆ ಕುಂದಾಪುರದಲ್ಲಿ ಖಾಸಗಿಯಾಗಿ ಸರ್ವೆ ಕೆಲಸ ಮಾಡಿಕೊಂಡಿದ್ದ ಆದರೇ ವೇಗವಾಗಿ ಹೆಚ್ಚಿನ ಹಣ ಗಳಿಸುವ ಆಶೆಗೆ ಬಿದ್ದ ಈತ ಇದಕ್ಕಾಗಿ ನಕಲಿ ಸರಕಾರಿ ಅಧಿಕಾರಿ ಸೋಗಿನಲ್ಲಿ ವಂಚನೆಗೆ ಇಳಿದಿದ್ದ. ಕಳೆದ ಐದಾರು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ. ಈ ವೇಳೆ ಸರ್ವೆ ಇಲಾಖೆಯ ಡೆಪ್ಯುಟಿ ಕಮಿಷನರ್ ಎಂದು ನಕಲಿ ಗುರುತಿನ ಚೀಟಿ ಮಾಡಿಕೊಂಡು ತನ್ನ ಕಾರಿಗೆ ಭಾರತ ಸರಕಾರದ ಬೋರ್ಡ್ ಅಳವಡಿಸಿಕೊಂಡಿದ್ದ. ಅಲ್ಲದೇ, ಇನ್ನು ಟ್ರೂ ಕಾಲರ್ ಆಪ್ ನಲ್ಲಿ ಈ ಖದೀಮನ ಮೊಬೈಲ್ ನಂಬರ್ ಪರಿಶೀಲಿಸಿದರೆ ರೆವೆನ್ಯೂ ಕಮಿಷನರ್, ಡೆಪ್ಯುಟಿ ಕಮಿಷನರ್ ಎಂದು ತೋರಿಸುತ್ತಿದ್ದು ಆ ರೀತಿ ಬರುವಂತೆ ಆರೋಪಿಯೇ ಮಾಡಿಸಿಕೊಂಡಿದ್ದ.

ಈ ನಕಲಿ ಗೆಟಪ್ ಅನ್ನು ಅಸಲಿಯೆಂದೆ ನಂಬಿಸಿ, ಸರ್ವೆ ಇಲಾಖೆ ಮತ್ತು ಇನ್ನಿತರೆ ಸರಕಾರಿ ಇಲಾಖೆಗಳಲ್ಲಿ ಕೆಲಸ ಕೊಡಿಸುವುದಾಗಿ ಆಮೀಷವೊಡ್ಡಿ ಹಲವು ನಿರೂದ್ಯೋಗಿ ಯುವಕರಿಂದ ತಲಾ ತಲಾ 8-10 ಲಕ್ಷ ರೂ. ಪಡೆದುಕೊಂಡು ಕೆಲಸವನ್ನೂ ಕೊಡಿಸದೇ ಹಣವನ್ನೂ ಹಿಂತಿರುಗಿಸದೇ ವಂಚಿಸುತ್ತಿದ್ದ.
ಆರೋಪಿಯೂ ಬಾಗಲಕೋಟೆ, ಬೆಳಗಾವಿ ಹಾವೇರಿ, ಶಿವಮೊಗ್ಗ ಮೂಲದ 15ಕ್ಕೂ ಅಧಿಕ ಮಂದಿಯಿಂದ ಒಟ್ಟು 1.3 ಕೋಟಿ ರೂ. ಪಡೆದಿರುವುದು ಈತನ ತನಿಖೆಯ ವೇಳೆ ಪತ್ತೆಯಾಗಿದೆ. ಕೆಲಸ ಕೊಡಿಸುವುದಾಗಿ ಯುವಕರಿಂದ ಬಾಂಡ್ ಪೇಪರ್‌ಗಳು ಹಾಗೂ ಖಾಲಿ ಚೆಕ್ ಮೇಲೆ ಸಹಿ ಹಾಕಿಸಿಕೊಳ್ಳುತ್ತಿದ್ದ. ಕೆಲಸ ಸಿಗದೆ ವಂಚನೆಗೊಳಗಾದವರು ವಾಪಸ್ ಹಣ ಕೇಳಿದರೆ ಬೆದರಿಸುತ್ತಿದ್ದ. ಹಣ ಪಡೆದ ಬಳಿಕ ಅವರ ವಿರುದ್ಧವೇ ಕೋರ್ಟ್‌ನಲ್ಲಿ ಚೆಕ್ ಬೌನ್ಸ್ ಕೇಸ್ ಹಾಕುತ್ತಿದ್ದ.
ಆರೋಪಿಯಿಂದ ವಂಚನೆಗೊಳಗಾದ ವ್ಯಕ್ತಿಯೊಬ್ಬರು ಈ ಬಗ್ಗೆ ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ವೇಳೆ ಈತನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ ಪೊಲೀಸರಿಗೆ ಈತನ ವಂಚನೆಯ ಕೃತ್ಯಗಳು ಒಂದೊಂದಾಗಿ ಗೊತ್ತಾಗಿದೆ. ಈ ವೇಳೆ ಜೆ.ಪಿ.ನಗರ, ಯಶವಂತಪುರ, ಬನವಾಸಿ ಪೊಲೀಸ್ ಠಾಣೆ ಹಾಗೂ ಇನ್ನಿತರ ಜಿಲ್ಲೆಗಳಲ್ಲಿಯೂ ಸಹ ದಾಖಲಾಗಿರುವ ಈತನ ವಿರುದ್ಧ ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿವೆ. ಹೀಗಾಗಿ ಈ ವಂಚನೆಯ ಸಿಸಿಬಿ ಪೊಲೀಸರಿಗೆ ವರ್ಗಾವಣೆ ಮಾಡಲಾಗಿತ್ತು.
ಸಿಸಿಬಿ ಎಸಿಪಿ ಧರ್ಮೇಂದ್ರ ನೇತೃತ್ವದ ತಂಡ ರಾಘವೇಂದ್ರನನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ತಾನು ಮೋಸ ಮಾಡಿ ಗಳಿಸಿದ ಹಣದಲ್ಲಿ ಸ್ವಂತ ಊರಿನಲ್ಲಿ ವಾಸದ ಮನೆ, ತುಮಕೂರಿನಲ್ಲಿ ಹೋಟೆಲ್, ಕೆಂಗೇರಿಯಲ್ಲಿ ಫ್ಲ್ಯಾಟ್, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, 2 ಕಾರುಗಳನ್ನು ಖರೀದಿಸಿರುವುದಾಗಿ ತಿಳಿಸಿದ್ದಾನೆ.
ಆರೋಪಿಯಿಂದ 1 ದ್ವಿಚಕ್ರ ವಾಹನ, ಮೊಬೈಲ್, ಟ್ಯಾಬ್ಸ್, ಲ್ಯಾಪ್‌ಟಾಪ್‌ಗಳು, ಚೆಕ್‌ಗಳು, ಬಾಂಡ್ ಪೇಪರ್‌ಗಳು, ಆತ ಖರೀದಿಸಿದ್ದ ಆಸ್ತಿಯ ದಾಖಲಾತಿಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು. ,