ಮಂಗಳೂರು : ಹಿಂದೂ ಧಾರ್ಮಿಕ ಭಾವನೆಗೆ ಘಾಸಿ ಉಂಟು ಮಾಡುವ ಮೂಲಕ ಭಾರೀ ವಿವಾದಕ್ಕೆ ಕಾರಣವಾಗಿದ್ದ ಮಂಗಳೂರಿನ ನಾಗ ದೇವರ ಮೂರ್ತಿಗಳ ಧ್ವಂಸ ಪ್ರಕರಣವನ್ನು ಪೊಲೀಸರು ಭೇದಿಸುವಲ್ಲಿ ಸಪಲರಾಗಿದ್ದಾರೆ.
ತಿಂಗಳ ಅಂತರದಲ್ಲಿ ಮಂಗಳೂರಿನ ಉರ್ವಾದ ಕೋಡಿಕಲ್, ಕಾವೂರು, ಪಣಂಬೂರು ಎಂಬಲ್ಲಿ ನಾಗ ದೇವರ ಬಿಂಬಗಳನ್ನು ದುಷ್ಕರ್ಮಿಗಳು ಭಗ್ನ ಮಾಡಿ ವಿವಾದ ಸೃಷ್ಟಿಸಿದ್ದರು.
ಮಂಗಳೂರು ಪೊಲೀಸರಿಗೆ ಸವಾಲಾಗಿದ್ದ ಈ ನಾಗದೇವರ ಮೂರ್ತಿಗಳಿಗೆ ಹಾನಿಗೊಳಿಸಿದ ಸರಣಿ ಪ್ರಕರಣಗಳ ತನಿಖೆ ನಡೆಸಿದ ತನಿಖಾ ತಂಡವೂ ಮಹತ್ವದ ಕಾರ್ಯಾಚರಣೆ ನಡೆಸಿ 8 ಮಂದಿ ಆರೋಪಿಗಳನ್ನು ಬಂಧಿಸಿದರು.
ಕಾವೂರು ನಿವಾಸಿ ಸಫ್ವಾನ್ , ಮೊಹಮ್ಮದ್ ಸುಹೈಲ್ , ಪ್ರವೀಣ್ ಅನಿಲ್ ಮೊಂತೆರೊ, ನಿಖಿಲೇಶ್, ಸುರತ್ಕಲ್ ನ ಜಯಂತ್ ಕುಮಾರ್, ಬಂಟ್ವಾಳ ದ ಪ್ರತೀಕ್ ,ಕೂಳೂರಿನ ಮಂಜುನಾಥ್ , ಹಾಸನ ನಿವಾಸಿ ನೌಷಾದ್ ಬಂಧಿತ ಆರೋಪಿಗಳಾಗಿದ್ದಾರೆ.
ಕೋಮು ಗಲಭೆ ಸೃಷ್ಟಿಸುವ ಮೂಲಕ ನಗರದ ಶಾಂತಿ ಕದಡುವ ಯೋಜನೆಯಿಂದ ಆರೋಪಿಗಳ ತಂಡ ನಾಗದೇವರ ಮೂರ್ತಿ ಭಗ್ನಗೊಳಿಸುವ ಸಂಚು ರೂಪಿಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ಕುರಿತಂತೆ ಮಾಹಿತಿ ನೀಡಿದ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್, ಸರ ಕಳವು ಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿದ್ದ ಜಾಮೀನು ಪಡೆದು ಹೊರ ಬಂದಿರುವ ಇರ್ಷಾದ್ ಮತ್ತು ಅಚ್ಚಿ ಎಂಬ ಆರೋಪಿಗಳು ಪ್ರಕರಣದ ಮೂಲ ಸೂತ್ರದಾರರು ಎಂದಿದ್ದಾರೆ.
ಪೊಲೀಸರು ಕಳವು ಪ್ರಕರಣಗಳನ್ನು ತಡೆಯಲು ಬಿಗಿ ಕ್ರಮಗಳನ್ನು ಕೈ ಗೊಂಡಿದ್ದು ನಗರ ಗಸ್ತನ್ನು ತೀವ್ರಗೊಳಿಸಿದರು. ಪೊಲೀಸರನ್ನು ಈ ಕಾರ್ಯ ಚಟುವಟಿಕೆ ಯಿಂದ ದೂರ ಇಡಲು, ಅದಕ್ಕಾಗಿ ಅವರನ್ಮು ಈ ರೀತಿಯ ಕೋಮು ಸೂಕ್ಷ್ಮ ವಿಚಾರಗಳಲ್ಲಿಯೇ ವ್ಯಸ್ತವಾಗಿರಿಸುವ ಉದ್ದೇಶದಿಂದಲೇ ದುಷ್ಕರ್ಮಿಗಳು ನಾಗ ಬಿಂಬಕ್ಕೆ ಹಾನಿ ಮಾಡುವ ದುಷ್ಕೃತ್ಯ ಎಸಗಿದ್ದರು ಎಂಬ ಸ್ಪೋಟಕ ಮಾಹಿತಿ ತನಿಖೆಯಿಂದ ಬಹಿರಂಗವಾಗಿದೆ.
ಪೊಲೀಸರ ಗಮನ ಬೇರಡೆ ಸೆಳೆಯಲು ಸಂಚು ರೂಪಿಸುವ ಉದ್ದೇಶದಿಂದ ಈ ದುಷ್ಕೃತ್ಯವನ್ನು ಮಾಡುವ ಬಗ್ಗೆ ಆರೋಪಿಗಳ ಪೈಕಿ ಸಫ್ವಾನ್ ಕಾವೂರು ತನ್ನ ತಂಡದ ಇತರ ಸದಸ್ಯರ ಗಮನಕ್ಕೆ ತಂದಿದ್ದರು.
ಬಳಿಕ ದುಷ್ಕರ್ಮಿಗಳ ತಂಡವೂ ಹಂತ ಹಂತವಾಗಿ ಧಾರ್ಮಿಕ ಕೇಂದ್ರಗಳನ್ನು ಅಪವಿತ್ರಗೊಳಿಸಿದೆ.
ಸರಣಿಯಾಗಿ ಈ ರೀತಿಯ ಕೃತ್ಯಗಳು ನಡೆಯುತ್ತಾಲೆ ಹಿಂದೂ ಸಂಘಟನಗೆಳಿಂದ ಭಾರೀ ಅಕ್ರೋಶ ವ್ಯಕ್ತವಾಗಿತ್ತು, ಅಲ್ಲದೆ ಪ್ರತಿಭಟನೆಗಳು ನಡೆದಿದ್ದವು.
ಈ ಹಿನ್ನಲೆಯಲ್ಲಿ ಮಂಗಳೂರು ಪೊಲೀಸ್ ಆಯುಕ್ತರು 40 ಮಂದಿಯ ಪೊಲೀಸರ ತಂಡವನ್ನು ರಚಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು