ಚೆನ್ನೈ: ದುರಂತ ಘಟನೆಯೊಂದರಲ್ಲಿ, ಕೊಯಮತ್ತೂರಿನ ಮಧುಕ್ಕರೈ ಪ್ರದೇಶದಲ್ಲಿ ಶುಕ್ರವಾರ ರೈಲು ಹಳಿ ದಾಟಲು ಯತ್ನಿಸುತ್ತಿದ್ದ 25 ವರ್ಷದ ಹೆಣ್ಣು ಆನೆ ಹಾಗೂ ಎರಡು ಮರಿ ಆನೆಗಳು ವೇಗವಾಗಿ ಬಂದ ರೈಲಿನಡಿಗೆ ಸಿಲುಕಿ ಸಾವನ್ನಪ್ಪಿವೆ.
ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಆನೆ ಹಾಗೂ ಅದರ ಹಿಂಡು ಮದುಕ್ಕರೈ ಬಳಿ ರೈಲ್ವೆ ಹಳಿ ದಾಟಲು ಯತ್ನಿಸಿವೆ. ವೇಗವಾಗಿ ಬಂದ ಮಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ರೈಲಿನಡಿ ಸಿಲುಕಿದ ಒಂದು ಹೆಣ್ಣು ಆನೆ ಹಾಗೂ ಎರಡು ಮರಿಯಾನೆಗಳು ಸ್ಥಳದಲ್ಲೇ ಸಾವನ್ನಪ್ಪಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರೈಲು ಕರ್ನಾಟಕದ ಮಂಗಳೂರಿನಿಂದ ಕೇರಳದ ಕೋಝಿಕ್ಕೋಡ್ ಹಾಗೂ ಪಾಲಕ್ಕಾಡ್ ಮೂಲಕ ಚೆನ್ನೈಗೆ ತೆರಳುತ್ತಿತ್ತು. ಅಗ್ನಿಶಾಮಕ ರಕ್ಷಣಾ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಮಿಳುನಾಡು ಸರ್ಕಾರದ ಅರಣ್ಯ ಇಲಾಖೆಯ ಮುಖ್ಯ ಕಾರ್ಯದರ್ಶಿ ಸುಪ್ರೀಯ ಸಾಹು ಐಎಎಸ್ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.