ಬಂಟ್ವಾಳ : ನ 27 : ಎರಡು ವಾಹನಗಳ ನಡುವೆ ಡಿಕ್ಕಿ ಸಂಭವಿಸಿದ್ದು ಬಳಿಕ ಇದು ಎರಡು ಕೋಮಿನ ಯುವಕರ ಮಧ್ಯೆದ ಸಂಘರ್ಷವಾಗಿ ಬದಲಾಗಿ, ಹೊಡೆದಾಡಿಕೊಂಡ ಘಟನೆ ಬಂಟ್ವಾಳ ನಗರ ಠಾಣೆ ವ್ಯಾಪ್ತಿಯಲ್ಲಿ ನ .27 ರಂದು ನಡೆದಿದ್ದು ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಟ್ವಾಳ ಪೊಲೀಸರು ವಶಕ್ಕೆ ಪಡೆದಿದ್ದಾರೆ
ಬಂಟ್ವಾಳ ಬಾರೆಕಾಡು ನಿವಾಸಿ ಇರ್ಶಾದ್ , ಬಾರೆಕಾಡು ಶಾಹಿಲ್ ಹಾಗೂ ಬಂಟ್ವಾಳ ನಿವಾಸಿಗಳಾದ ಧನುಷ್ ಆಚಾರ್ಯ ಹಾಗೂ ಕೀರ್ತನ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಿ ಕಸಬಾ ಗ್ರಾಮದ ತುಂಬ್ಯಾ ಜಂಕ್ಷನ್ ಬಳಿ ಬೈಕ್ ಮತ್ತು ಆಟೋ ರಿಕ್ಷಾ ಮಧ್ಯೆ ಅಪಘಾತ ಸಂಭವಿಸಿದೆ. ಮೂಲಗಳ ಪ್ರಕಾರ ಈ ವಿಚಾರವಾಗಿ ಬೈಕ್ ಸವಾರನ ಪರವಾಗಿರುವ ಯುವಕರು ಹಾಗೂ ಆಟೋ ರಿಕ್ಷಾ ಚಾಲಕನ ಮಧ್ಯೆ ವಾಗ್ವಾದ ಹೋಯ್ ಕೈ ನಡೆದಿದೆ ಎನ್ನಲಾಗಿದೆ. ಈ ವೇಳೆ ಅಲ್ಲಿಂದ ತೆರಳಿದ ಅಟೋ ಚಾಲಕ ತನ್ನ ಸಂಬಂಧಿಗಳನ್ನು ಕೂಡಿಕೊಂಡು ವಾಪಸ್ಸು ಬಂದಿದ್ದಾನೆ . ಈ ವೇಳೆ ಮತ್ತೆ ಈ ಎರಡು ತಂಡಗಳ ಮಧ್ಯೆ ಮಾರಾಮಾರಿಯಾಗಿದೆ ಎಂದು ಹೇಳಲಾಗುತ್ತಿದೆ.

ಗಲಾಟೆಯ ಬಳಿಕ ಇತ್ತಂಡದ ತಲಾ ಇಬ್ಬರು ಸ್ಥಳೀಯ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಗಲಾಟೆಯ ಮಾಹಿತಿ ಪಡೆದ ಪೊಲೀಸರು ಆಸ್ಪತ್ರೆಯಲ್ಲಿ ದಾಖಲಾಗಿದ್ದ ನಾಲ್ಕು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದರಿಂದ ಅಲ್ಲಿ ಒಂದಷ್ಟು ಕಾಲ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು ಎಂದು ತಿಳಿದು ಬಂದಿದೆ.