ನೆಲ್ಯಾಡಿ: ನ 27 : ಸಾರ್ವಜನಿಕ ಶೌಚಾಲಯ ಕಟ್ಟಡದ ವಿದ್ಯುತ್ ಸಂಪರ್ಕದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದ ಸಂದರ್ಭ ಮೆಸ್ಕಾಂ ನೆಲ್ಯಾಡಿ ಶಾಖೆಯ ಜೆಇ ಹಾಗೂ ಜತೆಯಲ್ಲಿದ್ದ ಇಬ್ಬರು ಸಿಬಂದಿಗಳಿಗೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಬೈದು ಕರ್ತವ್ಯಕ್ಕೆ ಅಡ್ಡಿಪಡಿಸಿ ಜೀವಬೆದರಿಕೆ ಒಡ್ಡಿರುವ ಬಗ್ಗೆ ಶಿರಾಡಿ ಗ್ರಾ. ಪಂ ಉಪಾಧ್ಯಕ್ಷ ಹಾಗೂ ಸದಸ್ಯನ ವಿರುದ್ದ ಉಪ್ಪಿನಂಗಡಿ ಠಾಣೆಯಲ್ಲಿ ನ .25 ರಂದು ಪ್ರಕರಣ ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರಾಡಿ ಗ್ರಾ.ಪಂ. ಉಪಾಧ್ಯಕ್ಷ ಕಾರ್ತಿಕೇಯನ್ ಹಾಗೂ ಸದಸ್ಯ ಎಂ.ಕೆ. ಪೌಲೋಸ್ ರವರನ್ನು ಪೊಲೀಸರು ಬಂಧಿಸಿದ್ದು, ಬಳಿಕ ನ್ಯಾಯಾಲಯವೂ ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ.
ಮೆಸ್ಕಾಂನ ನೆಲ್ಯಾಡಿ ಕಾರ್ಯ ಮತ್ತು ಪಾಲನ ಶಾಖೆಯಲ್ಲಿ ಕಿರಿಯ ಇಂಜಿನಿಯರ್ ಆಗಿರುವ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಹಿರೇಮಲ್ಲನ ಹೊಳೆ ಗ್ರಾಮದ ರಮೇಶ್ ಬಿ ಠಾಣೆಗೆ ದೂರು ನೀಡಿದವರು. ನನ್ನ ಮೇಲೆ ಹಾಗೂ ನನ್ನ ಜೊತೆಯಲ್ಲಿದ್ದ ಇಲಾಖಾ ಸಿಬ್ಬಂದಿಗಳಾದ ರಜಾಕ್ ಮೌಲಾಸಾಬ ನದಾಫ್ ಮತ್ತು ಆಡಿವೆಪ್ಪ ಮಾದರ ರವರ ಮೇಲೆ ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈದು , ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದರು. ಈ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ: 323, 353, 504,506ರಂತೆ ಪ್ರಕರಣ: ದಾಖಲಾಗಿದೆ.

ದೂರಿನಲ್ಲಿ ಏನಿದೆ ?
ನ.25ರಂದು ಸಂಜೆ 6 ಗಂಟೆ ವೇಳೆಗೆ ಕರ್ತವ್ಯ ನಿಮಿತ್ತ ಕಡಬ ತಾಲೂಕಿನ ಶಿರಾಡಿ ಗ್ರಾಮದ ಗುಂಡ್ಯ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 75ರ ಪಕ್ಕದಲ್ಲಿರುವ ಸಾರ್ವಜನಿಕ ಶೌಚಾಲಯ ಕಟ್ಟಡದ ವಿದ್ಯುತ್ ಸಂಪರ್ಕದ ಬಗ್ಗೆ ದೂರುದಾರರು ಹಾಗೂ ಇತರ ಇಬ್ಬರು ಸಂತ್ರಸ್ತ ಸಿಬಂದಿಗಳು ಪರಿಶೀಲನೆ ನಡೆಸುತ್ತಿರುವ ವೇಳೆ ಅಲ್ಲಿಗೆ ಆರೋಪಿಗಳಾದ ಶಿರಾಡಿ ಗ್ರಾ.ಪಂ. ಉಪಾಧ್ಯಕ್ಷರಾಗಿರುವ ಕಾರ್ತಿಕೇಯನ್ ಹಾಗೂ ಸದಸ್ಯ ಎಂ.ಕೆ ಪೌಲೋಸ್‌ರವರು ಬಂದಿದ್ದಾರೆ.
ಅಲ್ಲಿ ಕರ್ತವ್ಯ ನಿರತರಾಗಿದ್ದ ರಮೇಶ್ ಬಿ, ರಜಾಕ್ ಮೌಲಾಸಾಬ ನದಾಫ್ ಮತ್ತು ಆಡಿವೆಪ್ಪ ಮಾದರರವರ ಬಳಿ ಸಾರ್ವಜನಿಕ ಶೌಚಾಲಯ ಕಟ್ಟಡದ ವಿದ್ಯುತ್ ಸಂಪರ್ಕದ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈದು ಇಲಾಖಾ ಸಾರ್ವಜನಿಕ ಕರ್ತವ್ಯ ನಿರ್ವಹಿಸದಂತೆ ತಡೆಯೊಡ್ಡಿದ್ದಾರೆ. ಈ ವೇಳೆ ಎಂ.ಕೆ ಪೌಲೋಸ್‌ರವರು ಮೂವರನ್ನು ಜೋರಾಗಿ ದೂರಕ್ಕೆ ತಳ್ಳಿದ್ದುದ್ದಾರೆ. ಅಲ್ಲದೇ ಕಾರ್ತಿಕೇಯನ್‌ರವರು ನನ್ನ ಶರ್ಟಿನ ಕಾಲರ್ ಪಟ್ಟಿ ಹಿಡಿದು ಎಳೆದಾಡಿ ಕೈಯಿಂದ ಕುತ್ತಿಗೆಗೆ ಹೊಡೆದು ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ರಮೇಶ್ ರವರು ದೂರಿನಲ್ಲಿ ಆರೋಪಿಸಿದ್ದರು.
ಜಾಮೀನು:
ಉಪ್ಪಿನಂಗಡಿ ಪೊಲೀಸರು ನ.25ರಂದು ರಾತ್ರಿ ಶಿರಾಡಿ ಗ್ರಾ.ಪಂ.ಉಪಾಧ್ಯಕ್ಷ ಕಾರ್ತಿಕೇಯನ್ ಹಾಗೂ ಸದಸ್ಯ ಎಂ.ಕೆ.ಪೌಲೋಸ್‌ರನ್ನು ಬಂಧಿಸಿ ನ.26ರಂದು ಪುತ್ತೂರು ಕೋರ್ಟ್‌ಗೆ ಹಾಜರುಪಡಿಸಿದ್ದರು. ನ್ಯಾಯಾಲಯ ಇಬ್ಬರಿಗೂ ಜಾಮೀನು ಮಂಜೂರು ಮಾಡಿದೆ. ಆರೋಪಿಗಳ ಪರ ವಕೀಲರಾದ ಸಂತೋಷ್ ಕುಮಾರ್ ಉಪ್ಪಿನಂಗಡಿ, ಕು. ಹರ್ಷಿತಾ ವಾದಿಸಿದ್ದರು.