ನಿನ್ನೆ ಬಿಜೆಪಿ ರಾಜ್ಯಸಭಾ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪರಸ್ಪರ ಭೇಟಿಯಾಗಿ ಹಲವು ವಿಷಯಗಳ ಕುರಿತು ಚರ್ಚಿಸಿದ್ದಾರೆ. ಅದರ ಬೆನ್ನಲ್ಲೇ ಇಂದು ಸುಬ್ರಹ್ಮಣಿಯನ್ ಸ್ವಾಮಿ ಮತ್ತೆ ಬಿಜೆಪಿ ಸರ್ಕಾರವನ್ನು ತೀವ್ರವಾಗಿಯೇ ಟೀಕಿಸಿದ್ದಾರೆ. ಕೇಂದ್ರ ಸರ್ಕಾರ ತನ್ನ ಆಡಳಿತದ ಪ್ರತಿ ಅಂಶದಲ್ಲೂ ವಿಫಲವಾಗಿದೆ ಎಂದು ಕಟುವಾಗಿ ಹೇಳಿದ್ದಾರೆ. ಆರ್ಥಿಕತೆ, ಗಡಿ ಭದ್ರತೆ ಸೇರಿ ಪ್ರತಿಯೊಂದರಲ್ಲೂ ಮೋದಿ ಸರ್ಕಾರದ ವಿಫಲತೆ ಎದ್ದು ಕಾಣುತ್ತಿದೆ ಎಂದು ಹೇಳಿರುವ ಸ್ವಾಮಿ, ಪೆಗಾಸಸ್ ಡಾಟಾ ಭದ್ರತೆ ಉಲ್ಲಂಘನೆ, ಅಫ್ಘಾನಿಸ್ತಾನ ಬಿಕ್ಕಟ್ಟನ್ನು ನಿರ್ವಹಣೆ ಮಾಡುತ್ತಿರುವ ರೀತಿಯಲ್ಲೂ ಕೇಂದ್ರ ಸರ್ಕಾರ ನಗೆಪಾಟಲಿಗೀಡಾಗಿದೆ ಎಂದು ಹೇಳಿದ್ದಾರೆ.
ಟ್ವೀಟ್ ಮಾಡಿರುವ ಸುಬ್ರಹ್ಮಣಿಯನ್ ಸ್ವಾಮಿ ಪ್ರಧಾನಿ ಮೋದಿ ಸರ್ಕಾರಕ್ಕೆ ರಿಪೋರ್ಟ್ ಕಾರ್ಡ್ ಕೊಟ್ಟಿದ್ದಾರೆ. ಅದರಲ್ಲಿ ಆರ್ಥಿಕತೆ-ಫೇಲ್, ಗಡಿ ಭದ್ರತೆ-ಫೇಲ್, ವಿದೇಶಾಂಗ ನೀತಿ-ಅಫ್ಘಾನಿಸ್ತಾನ ಬಿಕ್ಕಟ್ಟು ನಿರ್ವಹಣೆ ವೈಫಲ್ಯ, ರಾಷ್ಟ್ರೀಯ ಭದ್ರತೆ-ಪೆಗಾಸಸ್ ಎನ್ಎಸ್ಒ, ಅಂತಾರಾಷ್ಟ್ರೀಯ ಭದ್ರತೆ-ಕಾಶ್ಮೀರದ ಕರಾಳತೆ ಕಾರಣ ಯಾರು? ಸುಬ್ರಹ್ಮಣ್ಯನ್ ಸ್ವಾಮಿ ಎಂದು ಅಣಕಿಸಿ ಠೀಕಿಸಿದ್ಧಾರೆ.

ಬುಧವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದ ಸುಬ್ರಹ್ಮಣಿಯನ್ ಸ್ವಾಮಿ ನಂತರ ಟ್ವೀಟ್ ಮೂಲಕ ಅವರನ್ನು ಹೊಗಳಿದ್ದರು. ಅಷ್ಟೇ ಅಲ್ಲ, ಜಯಪ್ರಕಾಶ್ ನಾರಾಯಣ್, ಮೊರಾರ್ಜಿ ದೇಸಾಯಿ, ರಾಜೀವ್ ಗಾಂಧಿ, ಚಂದ್ರಶೇಖರ್ ಮತ್ತು ಪಿ.ವಿ.ನರಸಿಂಹ ರಾವ್ ಅವರಂಥ ರಾಜಕೀಯ ದಿಗ್ಗಜರೊಂದಿಗೆ ಹೋಲಿಸಿದ್ದರು. ಟ್ವೀಟ್ ಮಾಡಿದ್ದ ಅವರು, ನಾನು ಅನೇಕ ರಾಜಕಾರಣಿಗಳೊಟ್ಟಿಗೆ ಕೆಲಸ ಮಾಡಿದ್ದೇನೆ ಮತ್ತು ಭೇಟಿಯಾಗಿದ್ದೇನೆ. ಅವರಲ್ಲಿ ಮಮತಾ ಬ್ಯಾನರ್ಜಿ, ಜೆಪಿ, ಮೊರಾರ್ಜಿ ದೇಸಾಯಿ, ರಾಜೀವ್ ಗಾಂಧಿ, ಚಂದ್ರಶೇಖರ್ ಮತ್ತು ಪಿ.ವಿ.ನರಸಿಂಹ ರಾವ್ ಅವರು ಏನು ಹೇಳಿದ್ದಾರೋ ಅದನ್ನೇ ಮಾಡಿದ್ದಾರೆ ಮತ್ತು ಏನನ್ನು ಮಾಡುತ್ತಿದ್ದರೋ ಅದನ್ನೇ ಹೇಳಿದ್ದಾರೆ. ಭಾರತೀಯ ರಾಜಕಾರಣದಲ್ಲಿ ಅವರು ಅಪರೂಪದ ಗುಣವುಳ್ಳವರು ಎಂದು ಸುಬ್ರಹ್ಮಣಿಯನ್ ಸ್ವಾಮಿ ತಿಳಿಸಿದ್ದಾರೆ.