ಮಂಗಳೂರು, ನ.26: ಕುಷ್ಠ ರೋಗ ವಿಭಾಗದ ವೈದ್ಯನೊಬ್ಬ ಸಹೋದ್ಯೋಗಿ ಯುವತಿಯರ ಜೊತೆ ತನ್ನ ಕಚೇರಿಯಲ್ಲಿಯೇ ಸರಸ ಸಲ್ಲಾಪ ನಡೆಸುತ್ತಿರುವ ಡಿಸೈನ್ ಡಿಸೈನ್ ವಿಡಿಯೋ ಹೊರಬಿದ್ದಿದ್ದು, ಈ ರಸಿಕ ವೈದ್ಯನ ವರ್ತನೆ ನೋಡಿ ಜನ ಬೆಚ್ಚಿ ಬಿದ್ದಿದ್ದಾರೆ.
ನಗರದ ಸರಕಾರಿ ಆಸ್ಪತ್ರೆಯ ಕುಷ್ಠ ರೋಗ ವಿಭಾಗದ ವೈದ್ಯ, ಆಯುಷ್ಮಾನ್ ನೋಡೆಲ್ ಆಫೀಸರ್ ಕೂಡ ಆಗಿರುವ ಡಾ. ರತ್ನಾಕರ್ʼನ ವೈವಿಧ್ಯಮಯ ಕಾಮ ಪ್ರಪಂಚ ನ .26 ರಂದು ಟಿವಿ ವಾಹಿನಿಗಳಲ್ಲಿ ಸುರುಳಿ ಸುರುಳಿಯಾಗಿ ಬಿಚ್ಚಿಕೊಂಡಿದೆ. ತಾನೂ ಉದ್ಯೋಗ ಮಾಡುತ್ತಿರುವ ಜಾಗದಲ್ಲಿ ತನ್ನ ಸಹದ್ಯೋಗಿಯಾಗಿರುವ 13 ಜನ ಯುವತಿಯರ ಪೈಕಿ 9 ಜನರ ಜತೆ ಈತ ಖುಲ್ಲಾಂ ಖುಲ್ಲಾ ಆಗಿ ಸರಸ ಸಲ್ಲಾಪ ನಡೆಸಿದ್ದಾನೆ ಎನ್ನುವದನ್ನು ಪುಷ್ಟಿಕರಿಸುವ ವಿಡಿಯೋ ಹಾಗೂ ಪೋಟೋಗಳಿಂದ ಬಹುತೇಕರ ಮೊಬೈಲ್ ಗ್ಯಾಲರಿ ತುಂಬಿಕೊಂಡಿದೆ.
ಕುಷ್ಠ ರೋಗ ವಿಭಾಗದ ಹಿರಿಯ ವೈದ್ಯಾಧಿಕಾರಿಯಾಗಿರುವ ಈತ ತನ್ನ ಜತೆ ಸಹಕರಿಸದ ಸಹೋದ್ಯೋಗಿ ಯುವತಿಯರಿಗೆ ಕಿರುಕುಳ ನೀಡಿ, ಒತ್ತಡ ಹೇರಿ, ಕೆಲಸದಿಂದ ತೆಗೆಯುವ ಒತ್ತಡ ಹಾಕಿ ಕೃತ್ಯ ಎಸಗುತ್ತಿದ್ದ ಎಂದು ಆ ಸರಕಾರಿ ಆಸ್ಪತ್ರೆಯ ಸಂದಿಗೊಂದಿಗಳಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಕಚೇರಿಯಲ್ಲೇ ಮಹಿಳಾ ಸಹದ್ಯೋಗಿಗಳ ಜತೆ ಜೊತೆ ಡ್ಯಾನ್ಸ್ ಮಾಡುತ್ತಿದ್ದ ರತ್ನಾಕರ್ ಮಹಿಳೆಯರೂ ಬೇಡ ಎಂದರೂ ಬಿಡದೆ ಬಲಾತ್ಕಾರವಾಗಿ ಛೇಂಬರ್ ಗೆ ಕರೆದೊಯ್ಯುತ್ತಿದ್ದ ಎಂಬ ಮಾತುಗಳು ಹಾಗೂ ಇದನ್ನು ಬೆಂಬಲಿಸುವಂತಹ ವಿಡೀಯೊಗಳು ಕಾಣ ಸಿಗುತ್ತಿವೆ.

ಇಷ್ಟಾದರೂ ಈತನ ಒತ್ತಡಕ್ಕೆ ಬಗ್ಗದ ಕೆಲ ಸಿಬಂದಿಗಳು ಈತ ಪದೇ ಪದೇ ಹೇರುತ್ತಿದ್ದ ಒತ್ತಡವನ್ನು ಸಹಿಸಲಾರದೆ, ಈತನ ನಡವಳಿಕೆಯನ್ನು ನೋಡಲಾರದೆ ಹಾಗೂ ಆಸ್ಪತ್ರೆಯ ಇತರ ಸಿಬಂದಿಗಳು ನೆರವಿನಿಂದ ಜಿಲ್ಲಾ ಆರೋಗ್ಯಧಿಕಾರಿ ಮತ್ತು ಜಿಲ್ಲಾಧಿಕಾರಿಗೆ ದೂರು ನೀಡಿದ್ದರು ಎನ್ನಲಾಗಿದೆ. ದೂರಿನ ಜತೆ ಆತ ಒತ್ತಾಯವಾಗಿ ಸರಸ ಸಲ್ಲಾಪ ನಡೆಸುವ ಪೋಟೋ ಹಾಗೂ ವಿಡಿಯೋಗಳನ್ನು ನೀಡಿದ್ದಾರೆ. ಈತನ ಬಗ್ಗೆ ರಾಜ್ಯ ಆರೋಗ್ಯ ಇಲಾಖೆಗೂ ದೂರು ಹೋಗಿತ್ತು. ದೂರಿನ ಬಳಿಕ ಅತನನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.

ನ .3 ರಂದು ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಲಾಗಿದ್ದು ಈ ಬಗ್ಗೆ ಪ್ರತಿಕ್ರಿಯಿಸಿರುವ ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ “ ನವೆಂಬರ್ 8 ರಂದೇ ಆಯುಷ್ಮಾನ್ ನೋಡೆಲ್ ಆಫೀಸರ್ ಡಾ|| ರತ್ನಾಕರ್ ನನ್ನು ಅಮಾನತು ಮಾಡಿದ್ದೇವೆ. ಈತನ ಬಗ್ಗೆ ಕೆಲವು ದೂರುಗಳು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ಮಾಡಿ ಆದೇಶ ಮಾಡಿದ್ದೇವೆ ಎಂದಿದ್ದಾರೆ.

“ ತನ್ನ ಅಧೀನದಲ್ಲಿದ್ದ ಸಹೋದ್ಯೋಗಿಗಳ ಜೊತೆ ರತ್ನಾಕರ್ ಸಲುಗೆಯದಿಂದ್ದ, ಸಹಕರಿಸದಿದ್ದರೆ ಕೆಲಸದಿಂದ ತೆಗೆಯುವ ಬೆದರಿಕೆಯನ್ನೂ ಹಾಕಿದ್ದ, ಈ ಹಿನ್ನಲೆಯಲ್ಲಿ ಕೆಲವರು ರತ್ನಾಕರ್ ಬಗ್ಗೆ ದೂರು ನೀಡಿದ್ದರು ಎಂದು ಅವರು ಟಿವಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಕುಷ್ಠ ರೋಗ ವಿಭಾಗವನ್ನು ಆರು ತಿಂಗಳ ಹಿಂದೆ ಲೇಡಿಹಿಲ್ ಉಪ ವಿಭಾಗಕ್ಕೆ ಸ್ಥಳಾಂತರ ಮಾಡಲಾಗಿತ್ತು. ಕುಷ್ಠ ರೋಗ ವಿಭಾಗದ ಸ್ಥಳ ಬದಲಾದರೂ ಈತನ ಕಾಮ ಪುರಾಣ ಎಗ್ಗಿಲ್ಲದೆ ನಡೆಯುತಿತ್ತೂ ಎಂದು ಹೇಳಲಾಗುತ್ತಿದೆ. ಇದರಿಂದ ಅಲ್ಲಿನ ಇತರೆ ಸಿಬಂದಿಗಳು ತೀವ್ರ ಮುಜುಗರಕ್ಕೆ ಒಳಗಾಗಿದ್ದರು. ಈ ಬಗ್ಗೆ ಜಿಲ್ಲಾ ಆರೋಗ್ಯಧಿಕಾರಿಗೆ ದೂರು ನೀಡಲಾಗಿತ್ತು ಎಂದು ಮೂಲಗಳಿಂದ ತಿಳಿದು ಬಂದಿದೆ.

ಡಾ. ರತ್ನಾಕರನನ್ನು ತಿಂಗಳ ಹಿಂದೆ ಉತ್ತರ ಕರ್ನಾಟಕದ ಆಸ್ಪತ್ರೆ ಒಂದಕ್ಕೆ ವರ್ಗಾವಣೆಗೊಂಡಿದ್ದ. ಆದರೆ ಪ್ರಭಾವಿ ರತ್ನಾಕರ್ ತನ್ನ ರಾಜಕೀಯ ಸಂಪರ್ಕಗಳನ್ನು ಬಳಸಿ ಮತ್ತೆ ಮಂಗಳೂರಿಗೆ ನಿಯೋಜನೆಯಾಗಿದ್ದ. ಇದೀಗ ಮುಂದಿನ ವಾರ ಆತ ಮತ್ತೆ ಹಳೆ ಜಾಗಕ್ಕೆ ಬರಲಿದ್ದಾನೆ ಎನ್ನುವ ಮಾಹಿತಿ ತಿಳಿಯುತ್ತಲೇ ಆತನ ರಸಿಕಾವತರದ ಹಳೆ ಫೋಟೊ, ವಿಡಿಯೋಗಳನ್ನು ಮಾಧ್ಯಮಕ್ಕೆ ಸಿಗುವಂತೆ ಕೆಲವರು ಹೊರಗೆ ಬಿಟ್ಟಿದ್ದಾರೆ.

ಇಷ್ಟಾದರೂ ರತ್ನಾಕರನ ಕಾಮಾವತರದಲ್ಲಿ ಕಿರುಕುಳ ಅನುಭವಿಸಿದ ಸಿಬಂದಿಗಳು ಇನ್ನೂ ದೂರು ನೀಡಲು ಮನ: ಮಾಡಿಲ್ಲ ಎನ್ನಲಾಗಿದೆ. ಹೀಗಾಗಿ ಈತನ ಬಗ್ಗೆ ಯಾರೂ ಠಾಣೆಗೆ ದೂರು ನೀಡಿಲ್ಲ ಹಾಗಾಗಿ ಯಾವುದೇ ದೂರು ದಾಖಲಾಗಿಲ್ಲ ಎಂದು ಮೂಲಗಳ ತಿಳಿಸಿವೆ. ಈ ಸರಸ ಸಲ್ಲಾಪದಲ್ಲಿ ಭಾಗಿಯಾದವರು ಎಲ್ಲರೂ ವಯಸ್ಕರೆ ಆಗಿರುವುದರಿಂದ ಸಂತ್ರಸ್ತರ ಪೈಕಿ ಯಾರದರೂ ದೂರು ನೀಡದ ಹೊರತು ಯಾವುದೇ ಘೋರ ಪ್ರಕರಣ ಈ ವೈದ್ಯ ಮಹಾಶಯನ ವಿರುದ್ದ ದಾಖಲಾಗುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ.

ಸರಕಾರಿ ಕಚೇರಿಯನ್ನು ಖಾಸಗಿಯಾಗಿ ಬಳಸಿಕೊಂಡಿರುವುದಷ್ಟೆ ಸದ್ಯ ಆತನ ಮೇಲೆ ದಾಖಲಾಗಬಹುದಾದ ಕೇಸ್ ಎಂದು ಕಾನೂನು ಪಂಡಿತರು ತಿಳಿಸಿದ್ದಾರೆ.



ಈ ವಿಚಾರದ ಬಗ್ಗೆ ವೆನ್‌ಲಾಕ್ ಆಸ್ಪತ್ರೆ ಅಧೀಕ್ಷಕರು ಪ್ರಕಟನೆ ಹೊರಡಿಸಿದ್ದು ಅದು ಇಂತಿದೆ :
“ ಇಂದು ಟಿವಿ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಡಾ. ರತ್ನಾಕರ್, ಜಿಲ್ಲಾ ಕಾರ್ಯಕ್ರಮಾಧಿಕಾರಿ ಇವರ ಕುರಿತು ವರದಿಗಳು ಪ್ರಚಾರವಾಗುತ್ತಿದ್ದು, ಸದ್ರಿ ಅಧಿಕಾರಿ ಹಾಗೂ ಮಹಿಳಾ ಸಿಬ್ಬಂದಿಗಳು, ವೆನ್‌ಲಾಕ್ ಆಸ್ಪತ್ರೆಯ ಸಿಬ್ಬಂದಿಗಳೆಂದು ವರದಿಯಾಗುತ್ತಿದೆ.
ಸದ್ರಿ ಅಧಿಕಾರಿಯು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರ ಅಡಿಯಲ್ಲಿ ಕಾರ್ಯನಿರ್ವಹಿಸುವ ಓರ್ವ ಜಿಲ್ಲಾ ಕಾರ್ಯಕ್ರಮಾಧಿಕಾರಿಯಾಗಿದ್ದು, ಹಾಗೂ ಸದ್ರಿ ವರದಿಯಲ್ಲಿ ಹೇಳುತ್ತಿರುವ ಮಹಿಳಾ ಸಿಬ್ಬಂದಿಗಳು ಸದ್ರಿ ಅಧಿಕಾರಿಯ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಾಗಿರುತ್ತಾರೆ.
ಸದ್ರಿ ಅಧಿಕಾರಿ ಮತ್ತು ಸಿಬ್ಬಂದಿಗಳು ವೆನ್‌ಲಾಕ್ ಜಿಲ್ಲಾ ಆಸ್ಪತ್ರೆಯ ಅಧಿಕಾರಿ ಸಿಬ್ಬಂದಿಗಳಲ್ಲ. ಸದ್ರಿ ಅಧಿಕಾರಿ ಹಾಗೂ ಮಹಿಳಾ ಸಿಬ್ಬಂದಿಗಳಲ್ಲ. ಸದ್ರಿ ಅಧಿಕಾರಿ ಹಾಗೂ ಸಿಬ್ಬಂದಿಗಳು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರ ಅಧೀನದ ಸಿಬ್ಬಂದಿಗಳಾಗಿದ್ದು, ದೃಶ್ಯ ಮಾಧ್ಯಮಗಳಲ್ಲಿ ವೆನ್‌ಲಾಕ್ ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಹಾಗೂ ಮಹಿಳಾ ಸಿಬ್ಬಂದಿಗಳೆಂದು ತಪ್ಪು ಮಾಹಿತಿ ಪ್ರಚಾರವಾಗುತ್ತಿದ್ದು, ವರದಿಯನ್ನು ಸರಿಪಡಿಸುವಂತೆ ಮಾಧ್ಯಮಗಳಿಗೆ ಸೂಚಿಸುವಂತೆ ಕೋರಲಾಗಿದೆ. ಅಲ್ಲದೆ ಈ ಬಗ್ಗೆ ಸೃಷ್ಟಿಕರಣವನ್ನು ಕೂಡ ಮಾಧ್ಯಮಗಳು ನೀಡುವಂತೆ ಕೋರಲಾಗಿದೆ ಎಂದು ವೆನ್‌ಲಾಕ್ ಆಸ್ಪತ್ರೆ ಅಧೀಕ್ಷಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
