ಬೆಂಗಳೂರು, ನ 26 : ನಾಡಿನ ಹಿರಿಯ ವಿದ್ವಾಂಸ ಪ್ರೊ. ಕೆ.ಎಸ್. ನಾರಾಯಣಾಚಾರ್ಯ ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು. ಬೆಂಗಳೂರಿನ ಮನೆಯಲ್ಲಿ ರಾತ್ರಿ 2 ಗಂಟೆ ಸುಮಾರಿಗೆ ನಿಧರಾದರು. ಇವರು 1933ರಲ್ಲಿ ಕನಕಪುರದ ವೈದಿಕ ಶ್ರೀ ವೈಷ್ಣವ ಕುಟುಂಬದಲ್ಲಿ ಜನಿಸಿದರು. ಧರ್ಮಶಾಸ್ತ್ರ ಪ್ರಚಾರದ ಮೂಲಕ ಖ್ಯಾತಿ ಗಳಿಸಿದ್ದರು.
ಪ್ರೊ. ಕೆ.ಎಸ್. ನಾರಾಯಣಾಚಾರ್ಯ ರವರು ರಾಮಾಯಣಸಹಶ್ರೀ, ಆಚಾರ್ಯ ಚಾಣಕ್ಯ ಸೇರಿದಂತೆ ಹಲವು ಅಮೂಲ್ಯ ಕೃತಿಗಳನ್ನು ರಚಿಸಿದ್ದರು. ಕನ್ನಡ, ಇಂಗ್ಲೀಷ್, ತಮಿಳಿನಲ್ಲೂ ರಾಮಾಯಾಣದ ಬಗ್ಗೆ ಉಪನ್ಯಾಸಗಳನ್ನು ನೀಡಿದ್ದರು. ಇದರಿಂದಾಗಿ ರಾಮಾಯಣಾಚಾರ್ಯ ಎಂದೇ ಪ್ರೊ. ಕೆ.ಎಸ್.ನಾರಾಯಣಾಚಾರ್ಯ ಪ್ರಸಿದ್ದಿ ಪಡೆದಿದ್ದರು.ಬೇಂದ್ರೆಯವರಿಂದ ಪ್ರೇರಣೆಗೊಳಗಾಗಿ ಇವರು ಪ್ರವಚನಗಳಿಂದ ಲೇಖನದೆಡೆಗೂ ಮುಖ ಮಾಡಿದರು.
ಪಿಹೆಚ್‌ಡಿ ಪದವಿ ಪಡೆದಿದ್ದ ಕೆ ಎಸ್ ಎನ್ :
ಕೆ. ಎಸ್. ನಾರಾಯಣಾಚಾರ್ಯ ಅವರು 1954 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎಸ್ಸಿ ಪದವಿ, 1957 ರಲ್ಲಿ ಬಿ.ಎ ಪದವಿ (ಆನರ್ಸ್), 1958 ರಲ್ಲಿ ಎಂ.ಎ ಪದವಿ (ಇಂಗ್ಲಿಷ್) ಪಡೆದಿದ್ದರು. 1959 ರಲ್ಲಿ ಡಬ್ಲು. ಬಿ. ಯೇಟ್ಸ್ ಮತ್ತು ಟಿ. ಎಸ್. ಎಲಿಯೇಟ್ ರ ಕಾವ್ಯದ ಮೇಲೆ ಭಾರತೀಯ ತತ್ವಶಾಸ್ತ್ರ ಪ್ರಭಾವ ಪ್ರಬಂಧಕ್ಕೆ ಪಡೆದುಕೊಂಡಿದ್ದಾರೆ.

ಕೆ.ಎಸ್.ಎನ್ ರ ಶೈಕ್ಷಣಿಕ ಸೇವೆ
1962ರಿಂದ ಧಾರವಾಡದ ಕರ್ನಾಟಕ ಆರ್ಟ್ಸ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. 1967ರಿಂದ ಧಾರವಾಡದ ಕರ್ನಾಟಕ ಆರ್ಟ್ಸ್ ಕಾಲೇಜಿನಲ್ಲಿ ಪ್ರವಾಚಕರಾಗಿ ಸೇವೆ ಸಲ್ಲಿಸಿದ್ದಾರೆ.1973ರಿಂದ ಧಾರವಾಡದ ಕರ್ನಾಟಕ ಆರ್ಟ್ಸ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. 1991ರಿಂದ ಧಾರವಾಡದ ಕರ್ನಾಟಕ ಆರ್ಟ್ಸ್ ಕಾಲೇಜಿನ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ 1993ರಲ್ಲಿ ನಿವೃತ್ತಿ ಪಡೆದಿದ್ದಾರೆ.
ಕೆಎಸ್ ಎನ್ ರಿಗೆ ಸಿಕ್ಕ ಪ್ರಶಸ್ತಿ, ಬಿರುದುಗಳು :
1973 ರಲ್ಲಿ ವೇದ ಸಂಸ್ಕೃತಿ ಮಾಲೆಗೆ ರಾಜ್ಯ ಸಾಹಿತ್ಯ ಅಕಾಡೆಮಿಯಿಂದ ಬಹುಮಾನ. 2008ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದೆ. ವಿದ್ವನ್ಮಣಿ’, ‘ವೇದಭೂಷಣ’, ‘ವಾಲ್ಮೀಕಿ ಹೃದಯಜ್ಞ’, ‘ರಾಮಾಯಣಾಚಾರ್ಯ’, ‘ಮಹಾಭಾರತಾಚಾರ್ಯ’ ಮೊದಲಾದ ಬಿರುದುಗಳು ಇವರಿಗೆ ಸಿಕ್ಕಿದೆ.